Advertisement

ಸಾವಿನ ಸಂಖ್ಯೆ 15ಕ್ಕೆ ಏರಿಕೆ, 24 ಮಂದಿ ಗಂಭೀರ

11:43 AM Dec 19, 2018 | |

ಮೈಸೂರು: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಸುಳವಾಡಿ ಗ್ರಾಮದ ಕಿಚ್‌ಗುತ್‌ ಮಾರಮ್ಮ ದೇವಸ್ಥಾನದಲ್ಲಿ ವಿಷಪ್ರಸಾದ ಸೇವಿಸಿ ಮೃತಪಟ್ಟವರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಮಲೆ ಮಹದೇಶ್ವರ ಬೆಟ್ಟದ ನಿವಾಸಿ ದುಂಡಮ್ಮ (50) ಮಂಗಳವಾರ ಬೆಳಗ್ಗೆ ಮೈಸೂರಿನ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದರು.

Advertisement

ಡಿ.14ರ ಶುಕ್ರವಾರ ದೇವಸ್ಥಾನದ ಗೋಪುರ ಶಂಕುಸ್ಥಾಪನಾ ಕಾರ್ಯಕ್ರಮದ ನಂತರ ನೀಡಲಾದ ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದ ದುಂಡಮ್ಮ ಅವರನ್ನು ಆ್ಯಂಬುಲೆನ್ಸ್‌ನಲ್ಲಿ ಮೈಸೂರಿಗೆ ಕರೆತಂದು ಕೆ.ಆರ್‌.ಆಸ್ಪತ್ರೆಯಲ್ಲಿ ನೋಂದಾಯಿಸಿದ ನಂತರ ವೈದ್ಯರ ಸೂಚನೆ ಮೇರೆಗೆ ನಗರದ ಕಾವೇರಿ ಆಸ್ಪತ್ರೆಗೆ ದಾಖಲಿಸಿ, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.

ಚಿಕಿತ್ಸೆ ಫ‌ಲಕಾರಿಯಾಗದೆ ಮಂಗಳವಾರ ಬೆಳಗ್ಗೆ ಕೊನೆ ಉಸಿರೆಳೆದಿದ್ದಾರೆ.ಮಲೆ ಮಹದೇಶ್ವರ ದೇವಸ್ಥಾನದ ದಾಸೋಹ ಭವನದಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದ ದುಂಡಮ್ಮ, ಮಗಳನ್ನು ನೋಡಲು ಎರಡು ದಿನ ರಜೆ ಹಾಕಿ ಹನೂರು ತಾಲೂಕಿನ ಮಾರ್ಟಳ್ಳಿಗೆ ಬಂದಿದ್ದರು.

ಶುಕ್ರವಾರ ಕಿಚ್‌ಗುತ್‌ ಮಾರಮ್ಮ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಇದ್ದ ಕಾರಣ, ದೇವಿಯ ಪೂಜಾ ಕಾರ್ಯದಲ್ಲಿ ಭಾಗಿಯಾಗಿ ಬರುವುದಾಗಿ ಹೇಳಿ ಹೋದವರು, ಪೂಜೆ ಸಲ್ಲಿಸಿದ ನಂತರ ದೇವಸ್ಥಾನದಲ್ಲಿ ಪ್ರಸಾದ ರೂಪದಲ್ಲಿ ನೀಡಲಾದ ವೆಜಿಟೇಬಲ್‌ ಬಾತ್‌ ಸೇವಿಸಿ, ಮನೆಗೂ ಪ್ರಸಾದ ತಂದಿದ್ದರು.

ಆದರೆ, ದುಂಡಮ್ಮ ದೇವಸ್ಥಾನದಿಂದ ಮನೆಗೆ ಬರುತ್ತಿದ್ದಂತೆ ವಾಂತಿ ಮಾಡಿಕೊಂಡು ಅಸ್ವಸ್ಥರಾಗಿ ಕುಸಿದು ಬಿದ್ದರು. ಹೀಗಾಗಿ ಪ್ರಸಾದ ತಂದಿದ್ದ ಎಲೆ ಕೈ ಜಾರಿ ಬಿದ್ದಿದ್ದರಿಂದ ಮನೆಯವರು ವಿಷ ಪ್ರಸಾದ ಸೇವಿಸುವುದು ತಪ್ಪಿತು. ಅಸ್ವಸ್ಥರಾಗಿ ಕುಸಿದು ಬಿದ್ದ ದುಂಡಮ್ಮ ಅವರಿಗೆ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಆ್ಯಂಬುಲೆನ್ಸ್‌ನಲ್ಲಿ ಮೈಸೂರಿಗೆ ಕರೆತಂದು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Advertisement

ದುಂಡಮ್ಮ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಒಂದೆರಡು ದಿನಗಳಲ್ಲಿ ಚೇತರಿಸಿಕೊಳ್ಳಲಿದ್ದಾರೆ. ಹೀಗಾಗಿ ಎರಡು ದಿನಗಳ ನಂತರ ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು ಎಂದು ವೈದ್ಯರು ತಿಳಿಸಿದ್ದರು. ಆದರೆ, ಮಂಗಳವಾರ ಬೆಳಗ್ಗೆ ಚಿಕಿತ್ಸೆ ಫ‌ಲಕಾರಿಯಾಗದೆ ಮೃತಪಟ್ಟಿದ್ದಾರೆ. 

ಕೆ.ಆರ್‌.ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಶವಾಗಾರದ ಬಳಿ ದುಂಡಮ್ಮನ ಹೆಣ್ಣು ಮಕ್ಕಳು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. 

24 ಮಂದಿ ಚಿಂತಾಜನಕ: ಮೈಸೂರಿನ ವಿವಿಧ 11 ಆಸ್ಪತ್ರೆಗಳಲ್ಲಿ 101 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ 24 ಮಂದಿಯ ಸ್ಥಿತಿ ಇನ್ನೂ ಗಂಭೀರವಾಗಿದೆ. ಚೇತರಿಸಿಕೊಂಡಿರುವ ಕೆಲವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next