Advertisement

ಜೆಡಿಎಸ್‌ನಿಂದ ಸಾವಿನ ರಾಜಕಾರಣ: ಸುಮಾ ವಾಗ್ಧಾಳಿ

12:58 PM Mar 27, 2019 | Lakshmi GovindaRaju |

ಮಂಡ್ಯ: ಸ್ವಾರ್ಥ, ಸುಳ್ಳು, ಹಣ ಮತ್ತು ಭ್ರಷ್ಟಾಚಾರ ರಾಜಕಾರಣದ ಜೊತೆಗೆ ಇದೀಗ ಸಾವಿನ ಹೇಸಿಗೆ ರಾಜಕಾರಣವನ್ನೂ ಜಿಲ್ಲೆಯ ಜನತೆ ನೋಡುತ್ತಿದ್ದಾರೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಚಿತ್ರನಟಿ ಸುಮಲತಾ ಅಂಬರೀಶ್‌ ತೀವ್ರ ಅಸಮಧಾನ ವ್ಯಕ್ತಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ ನಾಯಕರು ಪದೇಪದೆ ಅಂಬರೀಶ್‌ ಸಾವಿನ ವಿಷಯವನ್ನೇ ಪ್ರಸ್ತಾಪಿಸುತ್ತಿದ್ದರು. ಅವರೊಂದಿಗೆ ಕಾಂಗ್ರೆಸ್‌ನ ಸಚಿವರೊಬ್ಬರೂ ಸೇರಿಕೊಂಡಿದ್ದಾರೆ. ಚುನಾವಣೆಯಲ್ಲಿ ಅಂಬರೀಶ್‌ ಸಾವಿನ ವಿಚಾರ ತರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಸಾವಿನ ವಿಷಯ ಇಟ್ಟುಕೊಂಡು ರಾಜಕಾರಣ ಮಾಡುತ್ತಿರುವ ಇವರು ಚುನಾವಣೆ ಲಾಭ ಪಡೆಯಲು ಇಷ್ಟೆಲ್ಲಾ ಮಾಡಿದರೇ ಎಂದು ಪ್ರಶ್ನಿಸಿದರು.

ಅಂಬಿ ಹೆಸರಲ್ಲಿ ರಾಜಕೀಯ: ಸಾವಿನ ರಾಜಕಾರಣವನ್ನು ನಾನು ಒಪ್ಪುವುದಿಲ್ಲ. ಅಂಬರೀಶ್‌ ನಿಧನದ ವೇಳೆ ಬಹಿರಂಗವಾಗಿಯೇ ಸರ್ಕಾರ, ಮುಖ್ಯಮಂತ್ರಿ ಸಚಿವರು ಸೇರಿದಂತೆ ಇಡೀ ರಾಜ್ಯದ ಜನರಿಗೆ, ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದ್ದೇನೆ. ಹಾಗಿದ್ದ ಮೇಲೂ ಅಂಬಿ ಸಾವಿನ ವಿಷಯವನ್ನು ಪದೇಪದೆ ಪ್ರಸ್ತಾಪಿಸುವುದರಿಂದ ಬೇರೇನೋ ನಿರೀಕ್ಷಿಸುತ್ತಿದ್ದಾರೆ ಎನ್ನುವ ಪ್ರಶ್ನೆ ಮೂಡುತ್ತದೆ ಎಂದು ಹೇಳಿದರು.

ಜೆಡಿಎಸ್‌ ನಾಯಕರು ಹೋದಲೆಲ್ಲಾ ಅಂಬಿ ಹೆಸರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅಂಬಿ ಹೆಸರನ್ನು ಏಕೆ ದುರ್ಬಳಕೆ ಮಾಡಿಕೊಳ್ಳಬೇಕು? ಅಂಬಿ ಬಿಟ್ಟರೆ ಬೇರಾವ ವಿಚಾರವೂ ಸಿಗುವುದಿಲ್ಲವೇ ಎಂದು ಮರು ಪ್ರಶ್ನೆ ಹಾಕಿದ ಅವರು, ನಿಮ್ಮ ಪ್ರಚಾರವನ್ನು ನೀವು ಮಾಡಿ. ನಮ್ಮ ಪ್ರಚಾರವನ್ನು ನಾವು ಮಾಡುತ್ತೇವೆ.

ಅಂಬರೀಶ್‌ ಹೆಸರನ್ನು ತರದೆ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿ ಚುನಾವಣಾ ಪ್ರಚಾರ ಮಾಡಿ. ಒಳ್ಳೆಯತನ, ಗೌರವ, ಮರ್ಯಾದೆಯಿಂದ ಚುನಾವಣಾ ಕಣದಲ್ಲಿ ಫೈಟ್‌ ಮಾಡೋಣ. ನಾನೂ ಯಾರನ್ನೂ ವಿರೋಧಿಸೋದಿಲ್ಲ. ಟೀಕೆಗಳನ್ನು ನುಂಗಿಕೊಳ್ಳುತ್ತೇನೆ. ಜನ ನಮ್ಮ ಪರವಾಗಿದ್ದಾರೆ. ಇಂತಹದನ್ನೆಲ್ಲಾ ಜನರು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Advertisement

ಮಂಡ್ಯದ ಹೆಣ್ಣು: ಮಂಡ್ಯದ ಗಂಡು ಅಂಬರೀಶ್‌ ಅವರು ಹೋದ ಮೇಲೆ ಆ ಸ್ಥಾನವನ್ನು ನಿಖೀಲ್‌ ತುಂಬುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಮಂಡ್ಯದ ಗಂಡಾಗಿ ಅಂಬರೀಶ್‌ ಇದ್ದರು. ಈಗ ಮಂಡ್ಯದ ಹೆಣ್ಣನ್ನು ನೋಡುತ್ತಾರೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.

ಅಂಬಿಯಿಂದ ಮುನಿರತ್ನಗೆ ಲಾಭ: ಚಲನಚಿತ್ರ ನಿರ್ಮಾಪಕ ಮುನಿರತ್ನ ಅವರಿಗೆ ಮಂಡ್ಯದಲ್ಲಿ ಬಂದು ಮಾತಾಡುವ ನೈತಿಕತೆಯೇ ಇಲ್ಲ. ಮುನಿರತ್ನಗೆ ಅಂಬಿ ಏನಾಗಿದ್ದರು? ಅವರಿಂದ ಯಾವ ಯಾವ ರೀತಿ ಲಾಭ ಪಡೆದಿದ್ದರು ಅನ್ನೋದು ಅವರಿಗೆ ಗೊತ್ತಿದೆ ಎಂದು ತಿರುಗೇಟು ನೀಡಿದರು.

ಗೂಢಾಚಾರಿಕೆ: ನನ್ನ ಮನೆ ಬಳಿ ಇಬ್ಬರು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿ ಗೂಢಾಚಾರ ಮಾಡುತ್ತಿದೆ. ನೀವೇಕೆ ನನ್ನ ಮನೆ ಬಳಿ ಇದ್ದೀರೆಂದು ನಾನೇ ಆ ಪೊಲೀಸರನ್ನು ಪ್ರಶ್ನಿಸಿದ್ದೇನೆ. ನಾನು ಹೋದಲೆಲ್ಲಾ ಜನರನ್ನು ಬಿಟ್ಟು ಫಾಲೋ ಮಾಡಲಾಗುತ್ತಿದೆ.

ಮೊಬೈಲ್‌ ಕರೆಗಳನ್ನು ಕದ್ದಾಲಿಕೆ ಮಾಡುತ್ತಿರುವ ಅನುಮಾನವಿದೆ. ಸಾಮಾನ್ಯವಾಗಿ ಕ್ರಿಮಿನಲ್‌, ಅಂಡರ್‌ವಲ್ಡ್‌ , ಟೆರೆರಿಸ್ಟ್‌ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ಈ ರೀತಿ ಮಾಡಲಾಗುತ್ತಿದೆ. ಆದರೆ, ನನ್ನ ಬಗ್ಗೆ ಗೂಢಾಚಾರಿಕೆ ನಡೆಸಲು ನಾನು ಟೆರೆರಿಸ್ಟಾ ಎಂದು ಪ್ರಶ್ನಿಸಿದರು.

ಕಾನೂನು ಬಾಹಿರವಾಗಿ ನನ್ನ ವಿರುದ್ಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಸರಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಇದರಿಂದಲೇ ತಿಳಿಯುತ್ತದೆ. ನನ್ನ ಕಾರ್ಯಕ್ರಮದಲ್ಲಿ ವಿದ್ಯುತ್‌, ಕೇಬಲ್‌ ಕಟ್‌ ಮಾಡಿಸಲಾಗಿತ್ತು.

ನಿನ್ನೆ ಕಾರ್ಯಕ್ರಮಕ್ಕೆ ಅಧಿಕಾರಿ ಮೂಲಕ ನಿರಂತರ ವಿದ್ಯುತ್‌ ಪೂರೈಕೆಗೆ ಪತ್ರ ಬರೆಸಲಾಗಿದೆ. ಇದು ನೀತಿ ಸಂಹಿತೆ ಅಲ್ಲವೇ? ಹೀಗಾಗಿಯೇ ನಾನು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ದೂರು ಕೊಡುವುದು ನನ್ನ ಕರ್ತವ್ಯ ಕೊಟ್ಟಿದ್ದೇನೆ. ಆಯೋಗ ಕ್ರಮ ವಹಿಸಲಿದೆ ಎಂದು ಉತ್ತರಿಸಿದರು.

ಪ್ರಚಾರಕ್ಕೆ ರಜನಿಯವರನ್ನು ಕರೆದಿಲ್ಲ: ನನ್ನ ಪರ ಪ್ರಚಾರಕ್ಕಾಗಿ ರಜಿನಿಕಾಂತ್‌ ಬರೋದಿಲ್ಲ. ನಾನು ಕರೆದೂ ಇಲ್ಲ. ದರ್ಶನ್‌ ಮತ್ತು ಯಶ್‌ ಅವರು ಪ್ಲಾನ್‌ ಮಾಡಿಕೊಂಡು ಶೀಘ್ರದಲ್ಲೇ ಪ್ರಚಾರಕ್ಕೆ ಬರುತ್ತಾರೆ ಎಂದ ಅವರು, ಮಹಿಳೆಯರ ಬಗ್ಗೆ ದರ್ಶನ್‌ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂಬ ಬಗ್ಗೆ ಸಿಎಂ ವಿಷಯ ಪ್ರಸ್ತಾಪಿಸಿ ಮಹಿಳೆಯರ ಬಗ್ಗೆ ಗೌರವ ವ್ಯಕ್ತಪಡಿಸಿರುವುದು ಸಂತೋಷ ಎಂದರು.

ರೈತನಾಯಕ ಸುನೀತಾ ಪುಟ್ಟಣ್ಣಯ್ಯ, ರೈತಸಂಘದ ಮುಖಂಡರಾದ ಎಸ್‌.ಸುರೇಶ್‌, ಎ.ಎಲ್‌.ಕೆಂಪೂಗೌಡ, ಲತಾ ಶಂಕರ್‌, ಅಖೀಲ ಕರ್ನಾಟಕ ಅಂಬರೀಶ್‌ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್‌ ಇತರರು ಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next