Advertisement
ಇಂತಿಪ್ಪ ಚಳಿಯ ಪ್ರಭಾವಳಿಯಿಂದಾಗಿ ನಗರದ ಜನರ ಆಹಾರ ಪದ್ಧತಿ, ಉಡುಗೆ-ತೊಡುಗೆ ವಿಧಾನ ಬದಲಾಗಿದೆ. ನಿದಿರೆ ಮಾಡದಷ್ಟು ಬ್ಯುಸಿಯಾಗಿ ರುವ ಸಿಲಿಕಾನ್ ಸಿಟಿ ಈಗ ಹೊದ್ದು ಮಲಗು ವಂತಾಗಿರುವುದು ಇದೇ ಚುಮುಚುಮು ಚಳಿಯಿಂದ.
Related Articles
Advertisement
ಉತ್ತರ ಭಾರತದ ವಿವಿಧ ರಾಜ್ಯಗಳಿಂದ ರಗ್ಗು, ಸ್ವೆಟರ್ ಮತ್ತಿತರ ಉಣ್ಣೆ ಉತ್ಪನ್ನಗಳನ್ನು ಮಾರಲೆಂದು ಬೆಂಗಳೂರು ನಗರಕ್ಕೆ ಯುವಕರ ದಂಡೇ ಬರುತ್ತದೆ. ಚಳಿಗಾಲದಲ್ಲಿ ಸಿಲಿಕಾನ್ ಸಿಟಿಯೊಳಗೆ ಉಣ್ಣೆ ಬಟ್ಟೆ ಮತ್ತಿತರ ಬೆಚ್ಚಗಿರಿಸುವ ಉತ್ಪನ್ನಗಳನ್ನು ಮಾರಿ ಇಲ್ಲಿನ ನಿವಾಸಿಗಳ “ಚಳಿ ಬಿಡಿಸಲು’ ಬರುವ ಉತ್ತರ ಭಾರತದ ವ್ಯಾಪಾರಿಗಳು ಕೂಡ ಬೆಂಗಳೂರಿನ ಚಳಿಗೆ ಮೈ ಮುದುಡಿಕೊಳ್ಳುತ್ತಾರೆ ಎಂದರೆ ನೀವು ನಂಬಲೇಬೇಕು
ಲೋಹದ ಹಕ್ಕಿಗಳಿಗೂ ಚಳಿಯ ಬಿಸಿ! ನಗರದ ಚಳಿ ಮತ್ತು ಮಂಜಿನ ಮಾಯೆ ಲೋಹದ ಹಕ್ಕಿಗಳನ್ನೂ ಬೆದರಿಸುತ್ತಿದೆ. ಮೇಲಿನ ವಾತಾವರಣವನ್ನು ದಟ್ಟ ಮಂಜು ಆವರಿಸಿದ್ದರಿಂದ ಕೇವಲ ವಾರದ ಅಂತರದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎಎಲ್)ಒಟ್ಟು 16 ವಿಮಾನಗಳ ಹಾರಾಟ ರದ್ದಾಯಿತು. ಜತೆಗೆ 200 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಯಿತು. ಈ ಪೈಕಿ ಡಿ.30ರಂದು 8 ವಿಮಾನಗಳ ರದ್ದಾಗಿ, 102 ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾದರೆ, ಡಿ.24ರಂದು 8 ವಿಮಾನಗಳ ರದ್ದು ಹಾಗೂ 98 ವಿಮಾನಗಳ ಸೇವೆಯಲ್ಲಿ ತೊಡಕಾಯಿತು. ಚಳಿಗಾಲ ಬಂದರೆ ಮಾಂಸಾಹಾರವೇ ಬೇಕು
“ಕೋಳಿಜ್ವರ ಭೀತಿ ನಡುವೆಯೂ ಚಿಕನ್ ಮತ್ತು ಮೊಟ್ಟೆ ಬೇಡಿಕೆ .30ರಿಂದ 35ರಷ್ಟು ಏರಿದೆ. ಕಾರಣ ಚಳಿ! ನಿತ್ಯ ನಗರದಲ್ಲಿ 4.5 ಲಕ್ಷ ಕೆ.ಜಿ ಚಿಕನ್ ಮತ್ತು 40-45 ಲಕ್ಷ ಮೊಟ್ಟೆಗಳು ಮಾರಾಟ ವಾಗುತ್ತವೆ. ಚಳಿಗಾಲದ ಹಿನ್ನೆಲೆಯಲ್ಲಿ ಪ್ರಸ್ತುತ 6 ಲಕ್ಷ ಕೆ.ಜಿ ಚಿಕನ್ ಮತ್ತು 55ರಿಂದ 60 ಲಕ್ಷ ಮೊಟ್ಟೆಗಳು ಮಾರಾಟವಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಡಿ.24ರಿಂದ ಜ.2ರ ಅವಧಿಯಲ್ಲಿ ಈ ಏರಿಕೆ ಕಂಡುಬಂದಿದೆ,’ ಎನ್ನುತ್ತಾರೆ ಬಾಯ್ಲರ್ ಚಿಕನ್ ಡೀಲರ್ ಮಂಜೇಶ್‌ಕುಮಾರ್ ಜಾಧವ್. ಆದರೂ ಈ ಬಾರಿಯ ಚಳಿ ಕಡಿಮೆಯೇ!
ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ನಗರದಲ್ಲಿ ಚಳಿಯ ಕಚಗುಳಿ ಕಡಿಮೆಯೇ ಎಂದಿದ್ದಾರೆ ತಜ್ಞರು. ಸಾಮಾನ್ಯವಾಗಿ ಹಿಂಗಾರಿನಲ್ಲಿ ಈಶಾನ್ಯ ಮಾರುತಗಳು ಬಂಗಾಳಕೊಲ್ಲಿಯಿಂದ ಮಳೆ ಹೊತ್ತು ತರುತ್ತವೆ. ಹಿಂಗಾರು ಮುಗಿಯುತ್ತಿದ್ದಂತೆ ಶೀತಗಾಳಿ ಬೀಸುತ್ತದೆ. ಆದರೆ, ಈ ಬಾರಿ ಎರಡೂ ಇಲ್ಲ. ಪರಿಣಾಮ ನಗರದ ಕನಿಷ್ಠ ಉಷ್ಣಾಂಶ 14 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಹೋಗಲೇ ಇಲ್ಲ ಎಂದು ಹವಾಮಾನ ತಜ್ಞ ಡಾ.ಎಂ.ಬಿ. ರಾಜೇಗೌಡ ತಿಳಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇದೇ ಟ್ರೆಂಡ್ ಇದೆ. ಇದಕ್ಕೆ ಕಾರಣ ಜಾಗತಿಕ ತಾಪಮಾನದಲ್ಲಿ ಏರಿಕೆ. ಹಾಗೂ ಸ್ಥಳೀಯ ಮಟ್ಟದಲ್ಲಿ ಹೆಚ್ಚಾದ ವಾಹನಗಳು ಮತ್ತು ಕಾರ್ಖಾನೆಗಳು ಹೊರಬಿಡುವ ಇಂಗಾಲ ಮತ್ತು ಉಂಟು ಮಾಡುವ ಮಾಲಿನ್ಯ. 1980ಕ್ಕೂ ಮೊದಲು ನಗರದಲ್ಲಿ ಕನಿಷ್ಠ ಉಷ್ಣಾಂಶ 10ರಿಂದ 12 ಡಿಗ್ರಿ ಸೆಲ್ಸಿಯಸ್ ಇರುತ್ತಿತ್ತು. ಈಗ ಅದು 13ರಿಂದ 14 ಡಿಗ್ರಿ ಇದೆ. 1884ರ ಜನವರಿ 13ರಂದು ಬೆಂಗಳೂರಿನಲ್ಲಿ ಕನಿಷ್ಠ 7.8 ಡಿ.ಸೆ ಉಷ್ಣಾಂಶ ದಾಖಲಾಗಿತ್ತು. ಇದು ಜನವರಿಯ ಸಾರ್ವಕಾಲಿಕ ಕನಿಷ್ಠ ಉಷ್ಣಾಂಶ ತೀವ್ರ ಬೇಸಿಗೆಯ ಸೂಚನೆ?
ಇದೇ ಸ್ಥಿತಿ ಮುಂದುವರಿದರೆ, ತಾಪಮಾನ ಏರಿಕೆಯಾಗಿ ಬೇಸಿಗೆಯಲ್ಲಿ ಬಿಸಿಲ ತೀವ್ರತೆ ಹೆಚ್ಚಾಗುತ್ತದೆ. ಇದು ಮತ್ತೂಂದು ರೀತಿಯ ಸಮಸ್ಯೆಗೆ ಎಡೆಮಾಡಿಕೊಡುತ್ತದೆ. ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚಾದಾಗ ಅದು ಭೂಮಿಯಿಂದ ಹೊರಹೋಗುವ ಶಾಖವನ್ನು ಹಿಡಿದಿಟ್ಟುಕೊಳ್ಳುತ್ತದೆ. ಪರಿಣಾಮ ಉಷ್ಣಾಂಶ ಅಧಿಕವಾಗುತ್ತದೆ ಎನ್ನುತ್ತಾರೆ ರಾಜೇಗೌಡ. ತರಕಾರಿ ಬೆಲೆ ಕುಸಿತ
ಮಾಂಸಾಹಾರಕ್ಕೆ ಬೇಡಿಕೆ ಬರುತ್ತಲೇ ತರಕಾರಿ, ಹಣ್ಣುಗಳ ವ್ಯಾಪಾರ ಮಂಕಾಗಿದೆ. ಮಂಡ್ಯ, ಕೋಲಾರ, ಆನೇಕಲ್,
ಬೆಳಗಾವಿ ಸೇರಿ ವಿವಿಧೆಡೆಯಿಂದ ನಿತ್ಯ ಬೆಳಗ್ಗೆ ಕೆ.ಆರ್. ಮಾರುಕಟ್ಟೆಗೆ 500 ಟನ್‌ಗೂ ಅಧಿಕ ತರಕಾರಿ ಬಂದಿಳಿಯುತ್ತದೆ. ಆದರೆ ಕಳೆದೊಂದು ತಿಂಗಳಿನಿಂದ ಇವುಗಳ ಬೆಲೆ ಶೇ.30ರಿಂದ 40ರಷ್ಟು ಕಡಿಮೆಯಾಗಿದೆ. ಚಳಿಗಾಲದಲ್ಲಿ ಸಾರ್ವಜನಿಕರು ಮಾಂಸಾಹಾರದ ಮೊರೆ ಹೋಗುತ್ತಾರೆ. ಹೀಗಾಗಿ ತರಕಾರಿಗಳಿಗೆ ಬೇಡಿಕೆ ಕಡಿಮೆಯಾಗಿ, ಬೆಲೆ ಕೂಡ ಇಳಿಯುತ್ತದೆ ಎನ್ನುತ್ತಾರೆ ತರಕಾರಿ ಮತ್ತು ಹಣ್ಣುಗಳ ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಗೋಪಿ. ಬೈಕ್ ಸಹವಾಸ ಕಡಿಮೆ
ನಗರದ ಟ್ರಾಫಿಕ್‌ನಲ್ಲಿ ನುಸುಳಿ ಹೋಗಲು ಬೈಕೇ ಚೆನ್ನ ಎಂದು ಇಷ್ಟು ದಿನ ಕಚೇರಿಗೆ ಹೋಗಲು ಬೈಕ್ ಬಳಸುತ್ತಿದ್ದವರು ಈಗ ಕಾರು, ಆಟೋ, ಟ್ಯಾಕ್ಸಿ, ಬಸ್‌ಗಳ ಮೊರೆಹೋಗುತ್ತಿದ್ದಾರೆ. ಸಾಮಾನ್ಯವಾಗಿ ಬೆಳಗ್ಗೆಯೇ ಮನೆಯಿಂದ ಹೊರಟು, ಕತ್ತಲಾದ ನಂತರ ಕಚೇರಿ ಬಿಡುವವರು ಚಳಿಯಿಂದ ಸೇಫಾಗಿಡುವ ಸಾರ್ವಜನಿಕ ಸಾರಿಗೆ, ಕಾರಿನಂಥ ವಾಹನ ಬಳಸುತ್ತಿದ್ದಾರೆ ಎಂಬುದು ಟ್ರಾಫಿಕ್ ಪೊಲೀಸರ ಅಭಿಪ್ರಾಯ. ಬೆಳಗ್ಗೆ ಏಳ್ಳೋ ಟೈಮೂ ಮುಂದಕ್ಕೆ ಹೋಯ್ತು!
ಚಳಿಯ ಪರಿಣಾಮ ಉದ್ಯಾನಗಳಿಗೆ ಬರುವ ವಾಯುವಿಹಾರಿಗಳ ಸಂಖ್ಯೆ ಕಡಿಮೆಯಾಗಿದೆ. ಬರುವವರೂ ತುಸು ತಡವಾಗಿ ಉದ್ಯಾನಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಬೇರೆ ಸ್ಥಳಕ್ಕೆ ಹೋಲಿಸಿದರೆ ಉದ್ಯಾನಗಳಲ್ಲಿ ಕನಿಷ್ಠ ತಾಪಮಾನ 1 ಡಿಗ್ರಿಯಷ್ಟು ಕಡಿಮೆ ಇರುತ್ತದೆ. ಹಾಗಾಗಿ, ಲಾಲ್‌ಬಾಗ್, ಕಬ್ಬನ್ ಉದ್ಯಾನ ಸೇರಿ ನಗರದ ಪ್ರಮುಖ ಉದ್ಯಾನಗಳಿಗೆ ಬರುವ ವಾಯುವಿಹಾರಿಗಳ ಸಂಖ್ಯೆ ಕೊಂಚ ಕಡಿಮೆಯಾಗಿದೆ. ಅಲ್ಲದೆ, ಬೆಳಗ್ಗೆ ಏಳುವ ಸಮಯ ಅರ್ಧಗಂಟೆಯಿಂದ ಒಂದು ತಾಸು ಮುಂದೂಡಿಕೆ ಆಗಿರುವುದು ಕಂಡುಬರುತ್ತಿದೆ. ಕಬ್ಬನ್ ಉದ್ಯಾನಕ್ಕೆ ನಿತ್ಯ ಬೆಳಗ್ಗೆ ವಾಯುವಿಹಾರಕ್ಕೆ 4ರಿಂದ 5 ಸಾವಿರ ಹಾಗೂ ಲಾಲ್‌ಬಾಗ್‌ಗೆ 5ರಿಂದ 6 ಸಾವಿರ ಜನ ಬರುತ್ತಾರೆ. ಆದರೆ ಚಳಿಗಾಲದ ಹಿನ್ನೆಲೆಯಲ್ಲಿ ವಾಯು ವಿಹಾರಿಗಳ ಸಂಖ್ಯೆಯಲ್ಲಿ ಶೇ.2ರಷ್ಟು ಇಳಿಕೆ ಕಂಡುಬಂದಿದೆ. ಚಳಿಗೆ ಹೆದರಿ ಕೆಲ ನಿವೃತ್ತ ಅಧಿಕಾರಿಗಳು, ಹಿರಿಯ ನಾಗರಿಕರು ಮಧ್ಯಾಹ್ನ ವಾಯುವಿಹಾರ ನಡೆಸುವುದೂ ಉಂಟು ಎನ್ನುತ್ತಾರೆ ಕಬ್ಬನ್ ಉದ್ಯಾನದ ಉಪ ನಿರ್ದೇಶಕ ಮಹಾಂತೇಶ ಮುರುಗೋಡ. ವಿಜಯ್‌ಕುಮಾರ್ ಚಂದರಗಿ