Advertisement

ಸೋಂಕಿನ ಭೀತಿಯೊಂದಿಗೆ ಸಂಚಾರ

05:45 AM May 20, 2020 | Lakshmi GovindaRaj |

ಬೆಂಗಳೂರು: ನಗರ ಲಾಕ್‌ಡೌನ್‌ ಮುಕ್ತವಾದರೂ, ಸೋಂಕಿನ ಭೀತಿಯಿಂದ ಮುಕ್ತವಾಗಿಲ್ಲ. ಹಾಗಾಗಿ, ಓಡಾಟಕ್ಕೆ ಅನುಮತಿ ನೀಡಿದರೂ ಜನ ಮನೆಯಿಂದ ಹೊರಬೀಳಲು ಹಿಂದೇಟು ಹಾಕಿದರು. ಪರಿಣಾಮ ಮೊದಲ ದಿನ ಪ್ರತಿಕ್ರಿಯೆ  ತುಸು ನೀರಸವಾಗಿತ್ತು. ಕೆಲಸಕ್ಕೆ ತೆರಳುವವರು, ತುರ್ತು ಕೆಲಸದ ನಿಮಿತ್ತ ಹೋಗಬೇಕಾದವರು, ಪಾಸುಗಳು ಸಿಗದೆ ನಗರದಲ್ಲೇ ಸಿಲುಕಿದವರು ರಸ್ತೆಗಿಳಿದರು. ಸ್ವಂತ ವಾಹನ, ಬಸ್‌ಗಳ ಮೊರೆಹೋದರು. ಆದರೆ, ಬಹುತೇಕ ಇಲಾಖೆಗಳು, ಕಂಪನಿಗಳು ಈಗಲೂ ಪೂರ್ಣಪ್ರಮಾಣದಲ್ಲಿ ಕೆಲಸಕ್ಕೆ ಹಾಜರಾಗಲು ಸೂಚಿಸಿಲ್ಲ.

Advertisement

ವರ್ಕ್‌ ಫ್ರಮ್‌ ಹೋಂ ಮತ್ತು ಪಾಳಿಯಲ್ಲಿ ಕಾರ್ಯನಿರ್ವಹಿಸುವಂತೆ ನಿರ್ದೇಶಿಸಿವೆ. ಆದ್ದರಿಂದ ಲಾಕ್‌ಡೌನ್‌ ಅವಧಿಗಿಂತ ಜನಸಂಚಾರ ತುಸು  ಹೆಚ್ಚಿದ್ದರೂ ಸಾಮಾನ್ಯ ದಿನಗಳಿಗೆ ಹೋಲಿಸಿದರೆ, ತುಂಬಾ ಕಡಿಮೆ ಇತ್ತು. ಈ ನಿಟ್ಟಿನಲ್ಲಿ ಉದ್ಯಾನ ನಗರಿಯಲ್ಲಿ ಬಂದ್‌ ವಾತಾವರಣ ಕಂಡುಬಂತು. ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ಗಳು, ಪ್ರವಾಸಿ ಟ್ಯಾಕ್ಸಿಗಳ ಸಂಚಾರಕ್ಕೆ ಅವಕಾಶ  ನೀಡಲಾಗಿತ್ತು. ಆದರೆ, ಗ್ರಾಹಕರು ಗಂಟೆಗಟ್ಟಲೆ ಹುಡುಕಾಟ ನಡೆಸಿದರು. ಸಂಜೆಯಾದರೂ ಒಂದೊಂದು ಟ್ಯಾಕ್ಸಿಗಳು ಎರಡು ಹೆಚ್ಚೆಂದರೆ ಮೂರು ಬಾಡಿಗೆ ಗಿಟ್ಟಿಸಿಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದ್ದವು.

ಇನ್ನು “ಪೀಕ್‌ ಅವರ್‌’  (ಬೆಳಗ್ಗೆ ಮತ್ತು ಸಂಜೆ)ನಲ್ಲಿ ಸಂಚಾರದಟ್ಟಣೆ ಹೆಚ್ಚಿತ್ತು. ಉಳಿದ ಸಮಯದಲ್ಲಿ ನಗರ ಎಂದಿನಂತೆ ಬಿಕೋ ಎನ್ನುತ್ತಿತ್ತು. ಬಿಎಂಟಿಸಿ ಬಸ್‌ಗಳ ಕಾರ್ಯಾಚರಣೆ ಇದ್ದರೂ ಮೊದಲ ದಿನ ದ್ವಿಚಕ್ರ ವಾಹನ ಮತ್ತು ಕಾರುಗಳು ರಸ್ತೆ ಆವರಿಸಿದ್ದವು. ಅಲ್ಲೊಂದು ಇಲ್ಲೊಂದು ಓಡಾಡುವ ಬಸ್‌ಗಳಲ್ಲಿ ಬೆರಳೆಣಿಕೆಯಷ್ಟು ಜನ ಮಾಸ್ಕ್ ಹಾಕಿಕೊಂಡು ಪ್ರಯಾಣಿಸುತ್ತಿದ್ದರು. ವಿವಿಧ ಹಂತಗಳ ಪ್ರಯಾಣ ದರ?: ಬಸ್‌ ಏರಿದರೆ 70 ರೂ. ಪಾವತಿಸಬೇಕು. ಅದೂ ನಿಗದಿತ ಸಮಯಕ್ಕೆ ಸಿಗುವುದಿಲ್ಲ. ಸಿಕ್ಕರೂ ಅದು ಎಷ್ಟರಮಟ್ಟಿಗೆ ಸುರಕ್ಷಿತ ಎನ್ನುವ ಆತಂಕ ಕಾಡುತ್ತದೆ.

ಈ ಎಲ್ಲ ಕಾರಣಗಳಿಂದ ಸಮೂಹ ಸಾರಿಗೆಯಿಂದ ಜನ ತುಸು ಅಂತರ ಕಾಯ್ದುಕೊಂಡರು. ಈ ಮಧ್ಯೆ ಪ್ರಯಾಣಿಕರ ಅನುಕೂಲಕ್ಕಾಗಿ  ಬಿಎಂಟಿಸಿಯು ತಾತ್ಕಾಲಿಕವಾಗಿ ವಿವಿಧ ಹಂತಗಳಲ್ಲಿ ಪ್ರಯಾಣ ದರ ಪರಿಚಯಿಸುವ ಚಿಂತನೆ ನಡೆಸಿದೆ. ಉದಾಹರಣೆಗೆ 0-5 ಕಿ.ಮೀ.ವರೆಗೆ 20 ರೂ., 5ರಿಂದ 10 ಕಿ.ಮೀ. ವರೆಗೆ 30 ರೂ.ಗಳಂತೆ ಪ್ರಯಾಣ ದರ ನಿಗದಿಪಡಿಸಲು  ಯೋಚಿಸುತ್ತಿದೆ. ಆದರೆ, ಇದು ಇನ್ನೂ ಚರ್ಚೆ ಹಂತದಲ್ಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಟೋಗಳಲ್ಲಿ ಸಾಮಾನ್ಯವಾಗಿ ದಿನಕ್ಕೆ 80-100 ಕಿ.ಮೀ. ಸಂಚರಿಸಿ, ಸಾವಿರ ರೂ. ಗಳಿಸುತ್ತಿದ್ದೆ. ಆದರೆ, ಮಂಗಳವಾರ ಅಷ್ಟೇ  ಕಿ.ಮೀ. ಸಂಚರಿಸಿದರೂ ಸಂಜೆ 6ರವರೆಗೂ 500 ರೂ. ಮಾತ್ರ ಕಲೆಕ್ಷನ್‌ ಆಗಿದೆ. ಮುಖ್ಯವಾಗಿ ಆಟೋದಲ್ಲಿ ಓಡಾಡುವವರು ಶಾಪಿಂಗ್‌, ಚಿತ್ರಮಂದಿರ, ಕಾರ್ಯಕ್ರಮಗಳಿಗೆ ತೆರಳುವವರು ಆಗಿರುತ್ತಾರೆ. ಇವ್ಯಾವೂ ಲಾಕ್‌ ಡೌನ್‌ನಿಂದ  ತೆರವಾಗಿಲ್ಲ. ಹೀಗಾಗಿ, ಓಡಾಡುವವರ ಸಂಖ್ಯೆ ಕಡಿಮೆ. ಕೊನೆ ಪಕ್ಷ ಕೆಲಸ ನಡೆಯುತ್ತಿದೆ ಎಂದು ವಿಜಯನಗರದ ಆಟೋ ಚಾಲಕ ಸಂತೋಷ್‌ ಹೇಳಿದರು. “ಸಾಮಾನ್ಯ ದಿನಗಳಲ್ಲಿ ದಿನಕ್ಕೆ ಎಲ್ಲ ಖರ್ಚು-ವೆಚ್ಚ ಕಡಿತಗೊಳಿಸಿ 2,500- 3,000 ರೂ. ಗಳಿಕೆ ಆಗುತ್ತಿತ್ತು.

Advertisement

ಆದರೆ, ಮಂಗಳವಾರ ಬೆಳಗ್ಗೆಯಿಂದ 500 ರೂ. ಕೂಡ ಕಲೆಕ್ಷನ್‌ ಆಗಿಲ್ಲ. ಸಹಕಾರನಗರ-ಬಾಣಸವಾಡಿ ಮತ್ತು ಕಾಕ್ಸ್‌ಟೌನ್‌-ಬನಶಂಕರಿ ಎರಡೇ ಬಾಡಿಗೆ ಬಂದಿವೆ. ಇದಕ್ಕೆ ಕಾರಣ ಮೊದಲಿಗೆ  ಬೆಂಗಳೂರಿನಲ್ಲಿ ಜನರೇ ಇಲ್ಲ. ಇದ್ದವರೂ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ವಿಮಾನ ನಿಲ್ದಾಣ ಸ್ಥಗಿತಗೊಂಡಿದ್ದರಿಂದ ಅದರಿಂದಲೇ ನಮ್ಮ ಆದಾಯಕ್ಕೆ ಸಾಕಷ್ಟು ಹೊಡೆತಬಿದ್ದಿದೆ’ ಎಂದು ಟ್ಯಾಕ್ಸಿ ಚಾಲಕ ಎನ್‌. ಅಶೋಕ್‌  ಕುಮಾರ್‌ ಅಸಹಾಯಕತೆ ವ್ಯಕ್ತಪಡಿಸಿದರು.

ವ್ಯಾಪಾರ- ತುಸು ಚುರುಕು: ಸುದೀರ್ಘ ಲಾಕ್‌ಡೌನ್‌ ನಂತರ ಮಂಗಳವಾರ ನಗರದಲ್ಲಿ ಮತ್ತೆ ವ್ಯಾಪಾರ, ವಹಿವಾಟು ಪ್ರಕ್ರಿಯೆಗಳು ಚುರುಕು ಪಡೆದುಕೊಂಡವು. ಆದರೆ, ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಹಾಗೂ ಜನ ಊರುಗಳಿಂದ  ಇನ್ನು ಬಾರದೆ ಇರುವುದರಿಂದ ನಗರದ ಹಲವು ಮಳಿಗೆಗಳು ಮುಚ್ಚಿದ್ದವು.  ಲಾಕ್‌ಡೌನ್‌ನಿಂದ ಇಷ್ಟು ದಿನಗಳ ಕಾಲ ಮುಚ್ಚಿದ್ದ ಬಟ್ಟೆ ಅಂಗಡಿಗಳು, ಚಪ್ಪಅಂಗಡಿಗಳು, ಹೋಟೆಲ್‌, ಸಲೂನ್ ಸೇರಿದಂತೆ ಹಲವು ಮಳಿಗೆಗಳಲ್ಲಿ  ಸಿಬಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ಸಡಿಲಿಕೆ ಮಾಡಿದ ಬೆನ್ನಲ್ಲೇ ನಗರದಲ್ಲಿನ ಹಲವು ಮಳಿಗೆಗಳಲ್ಲಿನ ಮಾಲೀಕರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವುದು ಕಂಡುಬಂತು. ನಗರದ ವಾಚ್‌ ಅಂಗಡಿಗಳು, ಬಟ್ಟೆ  ಅಂಗಡಿಗಳು ಹಾಗೂ ಚಿನ್ನದ ಮಳಿಗೆಗಳಲ್ಲಿ ಎಸಿ ಬಳಕೆ ಮಾಡುತ್ತಿರುವುದು ಕಂಡುಬಂತು. ಇನ್ನು ನಗರದ ಬಹುತೇಕ ಮಳಿಗೆಗಲ್ಲಿ ಸ್ಯಾನಿಟೈಸರ್‌ ಸೇರಿದಂತೆ ಯಾವುದೇ ಮುಂಜಾಗ್ರತಾಕ್ರಮ ತೆಗೆದುಕೊಂಡಿರಲಿಲ್ಲ.

ಎಲ್ಲೆಲ್ಲಿ ಸಂಚಾರದಟ್ಟಣೆ?: ಈ ಮಧ್ಯೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ದ್ವಿಚಕ್ರ ವಾಹನ, ಆಟೋ, ಕಾರುಗಳು ರಸ್ತೆಗಿಳಿದ ಪರಿಣಾಮ ನಗರದ ಪ್ರವೇಶ ದ್ವಾರಗಳಾದ ತುಮಕೂರು ರಸ್ತೆ, ಮೈಸೂರು ರಸ್ತೆ, ಮಾಗಡಿ ರಸ್ತೆ, ಹೊಸೂರು ರಸ್ತೆ,  ವಿಮಾನ ರಸ್ತೆಗಳಲ್ಲಿ ಸಂಚಾರದಟ್ಟಣೆ ಉಂಟಾಗಿತ್ತು. ಮಡಿವಾಳ ಸಿಲ್ಕ… ಬೋರ್ಡ್‌ ಜಂಕ್ಷನ್‌, ಪೀಣ್ಯ ಕೈಗಾರಿಕಾ, ಆನಂದರಾವ್‌ ವೃತ್ತ, ಪುರಭವನ, ಎಲೆಕ್ಟ್ರಾನಿಕ್‌ ಸಿಟಿ ರಾಷ್ಟ್ರೀಯ ಹೆದ್ದಾರಿ-7ರಲ್ಲಿ ವಾಹನಗಳು ಹೆಜ್ಜೆ-ಹೆಜ್ಜೆಗೂ  ಪರದಾಡಿದವು. ಮನೆಯಲ್ಲೇ ಕುಳಿತು ಬೇಜಾರಾಗಿದ್ದ ಕೆಲವರು ವಾಹನಗಳಲ್ಲಿ “ಜಾಲಿ ರೈಡ್‌’ ಕೂಡ ನಡೆಸಿದರು. ಒಂದೆಡೆ ಟೆಂಟ್‌ ಹಾಕಿಕೊಂಡು ಕುಳಿತಿದ್ದ ಸಂಚಾರ ಪೊಲೀಸರು ಇದೀಗ ಎಂದಿನಂತೆ ರಸ್ತೆಗಳಿದು ಸಂಚಾರ  ನಿರ್ವಹಣೆಯಲ್ಲಿ ತೊಡಗಿದರು.

Advertisement

Udayavani is now on Telegram. Click here to join our channel and stay updated with the latest news.

Next