ಚಿಕ್ಕನಾಯಕನಹಳ್ಳಿ: ಸರ್ಕಾರ ಹೇಮಾವತಿ ನಾಲೆಯಿಂದ ಬಲದಂಡೆ ನಾಲೆಗೆ ನೀರು ಹರಿಸಿದಂತೆಯೇ ತುಮಕೂರು ನಾಲೆಗಳಿಗೂ ಹರಿಸುವಂತೆ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಆಗ್ರಹಿಸಿದ್ದಾರೆ.
ಎಲ್ಲೆ ತಾಲೂಕುಗಳಿಗೂ ನೀರು ಹರಿಸಿ: ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹೇಮಾವತಿ ಅಣೆಕಟ್ಟೆಯಲ್ಲಿ 12 ರಿಂದ 13 ಟಿಎಂಸಿ ನೀರು ಶೇಖರಣೆಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು 16 ಟಿಎಂಸಿ ನೀರು ಶೇಖರಣೆಯಾದ ನಂತರ ನೀರು ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ತುಮಕೂರಿನ ಬುಗುಡನಹಳ್ಳಿ ಕೆರೆಗೆ ನೀರು ಹರಿಸುವ ಸಂದರ್ಭದಲ್ಲಿ ಆದ್ಯತೆ ಮೇಲೆ ಚಿಕ್ಕನಾಯಕನಹಳ್ಳಿ ಕೆರೆ ಸೇರಿದಂತೆ ತುರುವೇಕೆರೆ, ಗುಬ್ಬಿ, ಕೊರಟಗೆರೆ, ಕುಣಿಗಲ್ ಕೆರೆಗಳಿಗೂ ನೀರನ್ನು ಹರಿಸುವಂತೆ ಒತ್ತಾಯಿಸಿದರು.
19 ರೊಳಗೆ ನೀರು ಹರಿಸಿ: ಈಗಾಗಲೇ ಹೇಮಾವತಿ ನಾಲೆಯಿಂದ ಕುಡಿಯುವ ನೀರು ಬಿಡುವಂತೆ ಜಿಲ್ಲಾ ಮಟ್ಟದಲ್ಲಿ ಬಿಜೆಪಿ ವತಿಯಿಂದ ಹೋರಾಟ ಮಾಡಿದ್ದೇವೆ. ಆ.17 ರವರೆಗೆ ಹೇಮಾವತಿ ನಾಲೆಯಿಂದ ನೀರು ಬಿಡುಗಡೆ ಮಾಡಲು ಕಾದು ನೋಡುತ್ತೇವೆ. 19 ನೇ ತಾರೀಖೀನ ಒಳಗೆ ನೀರು ಬಿಡದೇ ಹೋದರೆ ಜಿಲ್ಲಾ ಮಟ್ಟದಲ್ಲಿ ಚರ್ಚೆ ನಡೆಸಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಜಿಲ್ಲೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ಭೇಟಿಗೆ ಮುಂಚೆಯೇ ನೀರು ಹರಿಸುವಂತೆ ಅವರು ಒತ್ತಾಯಿಸಿದರು.
ತಹಶೀಲ್ದಾರ್‌ಗೆ ಕಂದಾಯ ಇಲಾಖೆ ಬಗ್ಗೆ ಅರಿವಿಲ್ಲ: ಬೇರೆ ಇಲಾಖೆಯಿಂದ ಬಂದಿರುವ ತಹಶೀಲ್ದಾರ್ ಗಂಗೇಶ್ ಅವರಿಗೆ ಕಂದಾಯ ಇಲಾಖೆ ಬಗ್ಗೆ ಏನೂ ಗೊತ್ತಿಲ್ಲ. ತಾಲೂಕು ಕಚೇರಿಯಲ್ಲಿ ಪ್ರತಿಯೊಂದು ವಿಷಯಕ್ಕೂ ಉಪತಹಶೀಲ್ದಾರ್ ನಾಗೇಂದ್ರಪ್ಪಅವರನ್ನೇ ವಿಚಾರಿಸಿ ಕೆಲಸ ಮಾಡಲಾಗುತ್ತಿದೆ. ಇದರಿಂದಲೂ ಸಹ ತಾಲೂಕು ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ವಿಳಂಬವಾಗುತ್ತಿದೆ ಎಂದು ಅಸಮಾಧನ ವ್ಯಕ್ತಪಡಿಸಿದರು.
ಗೋಶಾಲೆ ಹಣ ಲೂಟಿ: ತಾಲೂಕಿನ 6 ಗೋ ಶಾಲೆಗಳಿಗೆ 4.5 ಕೋಟಿ ರೂ. ಖರ್ಚು ಮಾಡಿದ್ದಾರೆ. ಯಾವ ಯಾವ ಗೋಶಾಲೆಗಳಿಗೆ ಎಷ್ಟು ಮೇವು ಸರಬರಾಜಾಗಿದೆ ಎಂಬುದರ ಬಗ್ಗೆ ಸಮರ್ಪಕ ಮಾಹಿತಿ ಇಲ್ಲ, ಸರಿಯಾದ ದಾಖಲೆಗಳು ಇಲ್ಲದೆ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ಎಚ್.ಆರ್ ಶಶಿಧರ್ ಮಾತನಾಡಿ, ತಾಲೂಕು ಹಾಗೂ ಗ್ರಾಪಂಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದು, ಪಿಡಿಒ ಹಾಗೂ ಗ್ರಾಪಂ ಅಧ್ಯಕ್ಷರು ಸರಿಯಾಗಿ ಗಮನ ಹರಿಸುತ್ತಿಲ್ಲ. ನೀರಿನ ಟ್ಯಾಂಕ್‌ಗಳು ಸ್ವತ್ಛಗೊಳಿಸುವಂತೆ ಅವರು ಆಗ್ರಹಿಸಿದರು.
ತಾಲೂಕಿನಲ್ಲಿರುವ ಶುದ್ಧª ಕುಡಿಯುವ ನೀರಿನ ಘಟಕಗಳಲ್ಲಿ ವಸೂಲಾದ ಹಣವನ್ನು ಯಾರ ಖಾತೆಗೆ ಹೋಗುತ್ತದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಇಲ್ಲ, ಘಟಕಗಳು ಕೆಟ್ಟು ಹೋದಾಗ ಯಾವ ಗುತ್ತಿಗೆದಾರರನ್ನು ಸಂಪರ್ಕಿಸಿಬೇಕು ಎಂಬುದರ ಬಗ್ಗೆ ತಿಳಿಯುತ್ತಿಲ್ಲ ಎಂದು ಅವರು ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಿರಂಜನಮೂರ್ತಿ, ತಾಪಂ ಸದಸ್ಯ ಕೇಶವಮೂರ್ತಿ, ಎಪಿಎಂಸಿ ಸದಸ್ಯ ಶಿವರಾಜ್, ಮುಖಂಡ ಬರಗೂರು ಬಸವರಾಜು ಮತ್ತಿತರರು ಉಪಸ್ಥಿತರಿದ್ದರು.