ಬೆಂಗಳೂರು: ನಗರದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಜುಲೈ 25ರೊಳಗಾಗಿ ನೀರು ಹಾಗೂ ಸಂರ್ಪಕ ವಿದ್ಯುತ್ ಸೌಲಭ್ಯ ಕಲ್ಪಿಸಲು ಜಲಮಂಡಳಿ ಮತ್ತು ಬೆಸ್ಕಾಂಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಸೂಚಿಸಿದ್ದಾರೆ.
ಸೋಮವಾರ ಬಿಎಂಆರ್‌ಡಿಎ ಕಚೇರಿಯಲ್ಲಿ ಆಹಾರ ಸಚಿವ ಯು.ಟಿ.ಖಾದರ್ ಅವರ ನೇತೃತ್ವದಲ್ಲಿ ಇಂದಿರಾ ಕ್ಯಾಂಟೀನ್ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಜಾರ್ಜ್, ನಿಗದಿತ ಅವಧಿಯೊಳಗೆ ಕ್ಯಾಂಟೀನ್ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಹಾಗೂ ಅವುಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕ ನೀಡಬೇಕು ಎಂದು ನಿರ್ದೇಶನ ನೀಡಿದರು.
ಸ್ಥಳ ಹಸ್ತಾಂತರಿಸಿ: ಕ್ಯಾಂಟೀನ್ ನಿರ್ಮಾಣಕ್ಕಾಗಿ ಕಂದಾಯ, ಬಿಡಿಎ, ಜಲಮಂಡಳಿ ಸೇರಿ ವಿವಿಧ ಇಲಾಖೆಯಿಂದ ಪಡೆಯಲು ಮುಂದಾಗಿರುವ 75 ಜಾಗಗಳನ್ನು ಪಾಲಿಕೆಗೆ ಹಸ್ತಾಂತರಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿರುವ ಸಚಿವರು, ಆಗಸ್ಟ್ 1ರ ವೇಳೆಗೆ ಎಲ್ಲ ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಬೇಕು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಮುಗಿಯಬೇಕು ಎಂದ ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್‌ಗೆ ಬೇಕಾದ ವಿವಿಧ 52 ಅಡುಗೆ ಸಲಕರಣೆಯನ್ನು ಪೂರೈಸಲು ಕರೆಯಲಾಗಿದ್ದ ಟೆಂಡರ್‌ನಲ್ಲಿ 9 ಕಂಪನಿಗಳು ಭಾಗವಹಿಸಿದ್ದು ಈ ಸಂಬಂಧ ಮಂಗಳವಾರ ನಡೆಯುವ ಬಿಡ್‌ನಲ್ಲಿ ಕಡಿಮೆ ದರದಲ್ಲಿ ಅಡುಗೆ ಸಲಕರಣೆ ಪೂರೈಸುವ ಕಂಪೆನಿಗೆ ಟೆಂಡರ್ ನೀಡಿ ಕಾರ್ಯಾದೇಶ ನೀಡಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಆಹಾರ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಿ.ವಿ.ಪ್ರಸಾದ್, ಮೇಯರ್ ಜಿ.ಪದ್ಮಾವತಿ, ಬಿಡಿಎ ಆಯುಕ್ತ ರಾಕೇಶ್ ಸಿಂಗ್ ಹಾಜರಿದ್ದರು.