Advertisement

ಡೆಡ್‌ಲೈನ್‌ ಮುಗಿದಿಲ್ಲ ಬರೋಕೆ ಟ್ರೈ ಮಾಡು!

12:30 AM Feb 19, 2019 | |

ಹೇ ತರುಣಿ, 
ನೀನು ನನ್ನ ಬಾಳಲ್ಲಿ ಹೊಸ ದಿನ ಪತ್ರಿಕೆಯಂತೆ ಬಂದೆ. ನಿನ್ನನ್ನು ಮೊದಲ ಸಲ ನೋಡಿದಾಗ, ನನ್ನ ಮೊದಲ ಬೈಲೈನ್‌ ಸ್ಟೋರಿ ಪತ್ರಿಕೆಯಲ್ಲಿ ಪ್ರಕಟವಾದಷ್ಟು ಸಂತೋಷವಾಯ್ತು ನನಗೆ. ಈ ಮೊದಲು ಅನೇಕ ಹುಡುಗಿಯರು ಸಾಪ್ತಾಹಿಕ, ಪಾಕ್ಷಿಕದಂತೆ ಬದುಕಿನಲ್ಲಿ ಬಂದು ಹೋಗಿದ್ದರೂ, ಅವರು ನಿನ್ನಷ್ಟು ಮೋಡಿ ಮಾಡಿರಲಿಲ್ಲ. ಈಗ ನೀನೇ ನನ್ನ ಬಾಳಿನ ದೈನಿಕವಾಗಿರುವೆ. ದಿನವೂ ನಿನ್ನನ್ನು ನೋಡುವ ಭಾಗ್ಯ ಸಿಕ್ಕಿದ ನಾನೇ ಅದೃಷ್ಟಶಾಲಿ. 

Advertisement

ನಿನ್ನ ಬಗ್ಗೆ ಒಂದು ಪ್ರೇಮಕಾವ್ಯ ಬರೆಯುವ ಬಯಕೆ ನನ್ನದು. ಲೇಖನಿ ಹಿಡಿದು ಕುಳಿತರೆ, ಶೀರ್ಷಿಕೆ ಏನು ಕೊಡಲಿ ಎಂಬುದರ ಬಗ್ಗೆಯೇ ಗೊಂದಲ. ನೀನಾದರೂ ಬಂದು ಈ ಪ್ರೇಮ ಸ್ಪುರಣಕ್ಕೊಂದು ಸೂಕ್ತ ತಲೆಬರಹ ಕೊಡಬಾರದೆ? ನನ್ನದೋ ಅಕ್ಷರ ಪೋಣಿಸುವ ಕಾಯಕ. ಹಾಗಾಗಿ ಅಕ್ಷರಗಳಲ್ಲಿಯೇ ಪ್ರೀತಿಯನ್ನು ಸೆರೆ ಹಿಡಿವ ಪ್ರಯತ್ನದಲ್ಲಿದ್ದೇನೆ. 

ಹೇ ಗೆಳತಿ, ನೀ ನನ್ನ ಬದುಕಿನ ಸಂಪಾದಕೀಯ ಪುಟವಾಗಬಾರದೆ? ನಿನ್ನೊಂದಿಗೆ ಹತ್ತು ಹಲವು ವಿಚಾರಗಳನ್ನು ಚರ್ಚಿಸುವ ಆಸೆ ನನಗೆ. ಇಷ್ಟು ತಡ ಮಾಡಿದರೆ ಹೇಗೆ? ಹೋಗಲಿ, ಒಂದು ಕಿರು ಸಂದರ್ಶನವಾದರೂ ಕೊಡಬಹುದಲ್ಲ? ಅನುಮಾನವಿದ್ದರೆ, ನನ್ನ ಹೃದಯಾಂತರಾಳವ ಇನ್ವೆಸ್ಟಿಗೇಟ್‌ ಮಾಡಿ ನೋಡು. ಕೇವಲ ನಿನ್ನ ಚಿತ್ರ-ಶೀರ್ಷಿಕೆಯೇ ತುಂಬಿದೆ ಅಲ್ಲಿ. ನಿನ್ನ ಬಣ್ಣಿಸುತ್ತ ಕುಳಿತರೆ ಪದಗಳ ಮಿತಿ ಸಾಲದು. ಅತ್ತ ದೀರ್ಘ‌ ಲೇಖನವೂ ಅಲ್ಲ. ಇತ್ತ ಬಿಡಿ ಸುದ್ದಿಯೂ ಅಲ್ಲ. ಓದುಗರು ನಿತ್ಯ ಪತ್ರ ಬರೆವಂತೆ ನೀನ್ಯಾಕೆ ಒಮ್ಮೆ ಅಭಿಪ್ರಾಯ ತಿಳಿಸಬಾರದು? ಇನ್ನೂ ಡೆಡ್‌ಲೈನ್‌ ಮುಗಿದಿಲ್ಲ. ಜಗಮಗಿಸುವ ಪುರವಣಿಯ ರೂಪದಲ್ಲಿ ನೀ ನನ್ನ ಬದುಕಿಗೆ ಬರುವೆ ಎಂದು ಕಾಯುತ್ತಿರುವ

ಪ್ರೀತಿಯ ಚಂದಾದಾರ

ನಿತೀಶ ಡಂಬಳ, ಧಾರವಾಡ
 

Advertisement
Advertisement

Udayavani is now on Telegram. Click here to join our channel and stay updated with the latest news.

Next