ವಿಜಯಪುರ: ಸರಕು ಹಾಗೂ ಸೇವಾ ತೆರಿಗೆಯಲ್ಲಿರುವ ಅನೇಕ ತೊಡಕುಗಳು, ದೋಷಗಳಿಂದ ವ್ಯಾಪಾರ-ವಹಿವಾಟಿಗೆ ಹಿನ್ನಡೆಯಾಗುತ್ತಿದೆ. ಕೂಡಲೇ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ಆದ್ಯತೆ ಮೇರೆಗೆ ಕ್ರಮ ಕೈಗೊಳ್ಳಬೇಕು. ಬರುವ 15 ದಿನಗಳಲ್ಲಿ ಸರ್ಕಾರ ನಿರ್ಧಾರ ಪ್ರಕಟಿಸದಿದ್ದರೆ ಸಂಪೂರ್ಣ ವ್ಯಾಪಾರ-ವಹಿವಾಟು ಬಂದ್ ಮಾಡಲು ವ್ಯಾಪಾರಸ್ಥರು ನಿರ್ಧರಿಸಿದ್ದಾರೆ. ನಗರದಲ್ಲಿ ಜರುಗಿದ ಮರ್ಚಂಟ್ಸ್ ಅಸೋಸಿಯೇಷನ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯಿಂದ ಕೈಗೊಂಡ ನಿರ್ಧಾರಗಳನ್ನು ಮಾಧ್ಯಮಗಳ ವಿವರಿಸಿದ ಮರ್ಚಂಟ್ಸ್ ಅಸೋಸಿಯೇಷನ್ ಪ್ರಮುಖರು, ಜಿಎಸ್‌ಟಿ ವ್ಯವಸ್ಥೆಯಲ್ಲಿನ ಅನೇಕ ತೊಂದರೆಗಳನ್ನು ನಿವಾರಿಸಬೇಕು ಎಂದು ಆಗ್ರಹಿಸಿದರು. 2017 -2018, 2018-2019, 2019-2020 ಈ ವರ್ಷಗಳಿಗೆ ಸಂಬಂಧಪಟ್ಟ ಜಿಎಸ್‌ಟಿ ಕಾಯ್ದೆ ಹೊಸದಾಗಿ ಬಂದಿರುವುದರಿಂದ ಏನಾದರೂ ಚಿಕ್ಕ ಪುಟ್ಟ ತಪ್ಪುಗಳಾದರೂ ಅವಗಳ ಬಗ್ಗೆ ನೋಟಿಸ್ ಕೊಡದೆ ಸ್ವೀಕರಿಸಬೇಕು. ಜಿಎಸ್‌ಟಿ ಕಾಯ್ದೆ ಬಂದು 4 ವರ್ಷವಾದರು ಪರಿಷ್ಕೃತ ರಿಟರ್ನ್ ಸಲ್ಲಿಸಲು ಅವಕಾಶ ಕೊಡಲಿಲ್ಲ. ಆದರೆ ಆದಾಯ ತೆರಿಗೆ ಕಾಯ್ದೆಯಲ್ಲಿ ಪರಿಷ್ಕೃತ ರಿಟರ್ನ್ ಸಲ್ಲಿಸಲು ಎರಡು ವರ್ಷಗಳ ಕಾಲಾವಕಾಶ ನೀಡಲಾಗಿದೆ ಎಂದು ಸಮಸ್ಯೆ ತೆರೆದಿಟ್ಟರು.
ಹೂಡುವಳಿ ತೆರಿಗೆಯನ್ನು (ಇನ್‌ಪುಟ್ ಟ್ಯಾಕ್ಸ್) ಯಾವುದೇ ಕಾರಣಕ್ಕೆ ತಿರಸ್ಕರಿಸಬಾರದು. ಹೂಡುವಳಿ ತೆರಿಗೆ ತಿರಸ್ಕರಿಸಿದರೆ ತೆರಿಗೆ ಮೇಲೆ ತೆರಿಗೆ ಕಟ್ಟಿದಂತಾಗುತ್ತದೆ. ಇದರಿಂದ ವ್ಯಾಪಾರಸ್ಥರಿಗೆ ಎರಡು ಎರಡು ಸಲ ತೆರಿಗೆ ಕಟ್ಟಿದಂತಾಗುವದು. ಯಾವುದೆ ಹೂಡುವಳಿ ತೆರಿಗೆ ಮರಳಿ ಪಡೆಯಲು 2ರಿಂದ 4 ವರ್ಷಗಳ ಕಾಲಾವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ಜಿಎಸ್‌ಟಿ ಕಾಯ್ದೆ ಬಂದು 4 ವರ್ಷವಾದರೂ ಸುಮಾರು 1600ಕ್ಕೂ ಅಧಿಕ ಅಧಿಸೂಚನೆಗಳ ಜಾರಿಗೆ ಬಂದಿವೆ. ಇವುಗಳನ್ನು ವ್ಯಾಪಾರಿಗಳು ಗಂಭೀರವಾಗಿ ತೆರೆದು ಓದುವುದು ಯಾವಾಗ, ವ್ಯಾಪಾರ ಮಾಡುವುದಾದರೂ ಹೇಗೆ. ತೆರಿಗೆ ಭರಿಸುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗುತ್ತವೆ ಎಂದರು.
ಜಿಎಸ್‌ಟಿ ಕಾಯ್ದೆಯಲ್ಲಿ ಸಣ್ಣ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗಿದೆ. ಇದರಿಂದ ಬಹುತೇಕ ವ್ಯಾಪಾರಿಗಳು ವಹಿವಾಟು ಸ್ಥಗಿತೊಳಿಸುವ ಹಂತಕ್ಕೆ ಬಂದಿದ್ದಾರೆ. ಕೇಂದ್ರ ಸರ್ಕಾರ ಕೂಡಲೇ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಬೇಕು, ಅವರ ಹಿತರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ತೆರಿಗೆ ಸಲಹೆಗಾರ ಅಧ್ಯಕ್ಷ ವೀರೇಂದ್ರ ಮಿಣಜಗಿ, ಕಾರ್ಯದರ್ಶಿ ಜಿ.ಎನ್. ಕುಲಕರ್ಣಿ, ಹಿರಿಯ ತೆರಿಗೆ ಸಲಹೆಗಾರ ಪಿ.ಜಿ. ಮೋತಿಮಠ, ಎಸ್.ಆರ್. ಮಠಪತಿ, ಜವಳಿ ವರ್ತಕರ ಸಂಘದ ವಿಶ್ವನಾಥ ಬೀಳಗಿ, ಬಾಪೂಜಿ ನಿಕ್ಕಂ, ರೇಡಿಮೇಡ್ ಅಸೋಸಿಯೇಷನ್ ಅಧ್ಯಕ್ಷ ಪ್ರದೀಪ ಮೊಗಲಿ, ನೆಹರು ಮಾರ್ಕೇಟ್ ಅಸೋಸಿಯೇಷನ್ ಅಧ್ಯಕ್ಷ ರಾಜು ಹೀರೆಮಠ ಮತ್ತು ಫುಟ್‌ವೇರ್ ಅಸೋಸಿಯೇಷನ್ ಅಧ್ಯಕ್ಷ ಮಹದೇವ ಕಬಾಡೆ, ಪ್ರವೀಣ ವಾರದ, ಜಯಾನಂದ ತಾಳಿಕೋಟಿ, ಮನೋಜ ಬಗಲಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.