ನವದೆಹಲಿ: ಭಾರಿ ಸರಕು ಮತ್ತು ಪ್ರಯಾಣಿಕ ಮೋಟಾರು ವಾಹನಗಳಿಗೆ ನೋಂದಾಯಿತ ಸ್ವಯಂಚಾಲಿತ ಪರೀಕ್ಷಾ ಕೇಂದ್ರ(ಎಟಿಎಸ್)ಗಳ ಮೂಲಕ ಕಡ್ಡಾಯ ಫಿಟ್ನೆಸ್ ಪರೀಕ್ಷೆಯನ್ನು ಸರ್ಕಾರ 2024ರ ಅ.1ರವರೆಗೆ ವಿಸ್ತರಿಸಿದೆ.
ಈ ಹಿಂದೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು, 2023ರ ಏ.1ರಿಂದ ಭಾರಿ ಸರಕು ಮತ್ತು ಪ್ರಯಾಣಿಕ ಮೋಟಾರು ವಾಹನಗಳಿಗೆ ನೋಂದಾಯಿತ ಎಟಿಎಸ್ ಮೂಲಕ ಫಿಟ್ನೆಸ್ ಪರೀಕ್ಷೆ ಕಡ್ಡಾಯಗೊಳಿಸಿ ಆದೇಶಿಸಿತ್ತು.
ಇನ್ನೊಂದೆಡೆ, ಮಧ್ಯಮ ಸರಕು ವಾಹನಗಳು, ಮಧ್ಯಮ ಪ್ರಯಾಣಿಕ ವಾಹನಗಳು ಮತ್ತು ಲಘು ಮೋಟಾರು ವಾಹನಗಳಿಗೆ(ಸಾರಿಗೆ) 2024ರ ಜೂ.1ರಿಂದ ಫಿಟ್ನೆಸ್ ಪರೀಕ್ಷೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ.
ದೇಶಾದ್ಯಂತ ಪ್ರಸ್ತುತ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ ಸನ್ನದ್ಧತೆ ಅವಲೋಕಿಸಿ, ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ವಾಹನದ ಫಿಟ್ನೆಸ್ ಅನ್ನು ಪರಿಶೀಲಿಸಲು ಅಗತ್ಯವಿರುವ ವಿವಿಧ ಪರೀಕ್ಷೆಗಳನ್ನು ಸ್ವಯಂಚಾಲಿತಗೊಳಿಸಲು ಯಾಂತ್ರಿಕ ಸಾಧನಗಳನ್ನು ಎಟಿಎಸ್ ಬಳಸುತ್ತದೆ.