Advertisement

ಡಿಗ್ರಿ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸುರಕ್ಷತೆ ಪರಿಶೀಲಿಸಿದ ಡಿಸಿಎಂ

06:03 PM Nov 17, 2020 | mahesh |

ಬೆಂಗಳೂರು: ಕೋವಿಡ್-‌19 ಕಾರಣದಿಂದ 8 ತಿಂಗಳಿನಿಂದ ಬಂದ್‌ ಆಗಿದ್ದ ಸ್ನಾತಕೋತ್ತರ, ಪದವಿ, ಡಿಪ್ಲೊಮೋ ಅಂತಿಮ ವರ್ಷದ ವಿದ್ಯಾರ್ಥಿಗಳ ಭೌತಿಕ ತರಗತಿಗಳು ಮಂಗಳವಾರದಿಂದ ಆರಂಭವಾಗಿದ್ದು, ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ನಗರದ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Advertisement

ಯುಜಿಸಿ ಮಾರ್ಗಸೂಚಿಯಂತೆ ಕೈಗೊಂಡಿರುವ ಕೋವಿಡ್‌ ಸುರಕ್ಷತಾ ಕ್ರಮಗಳನ್ನು ಪರಿಶೀಲನೆ ಮಾಡಿದ ಅವರು, ತರಗತಿಗಳಿಗೂ ತೆರಳಿ ವಿದ್ಯಾರ್ಥಿಗಳು ಹಾಗೂ ಬೋಧಕರೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ದೈಹಿಕ ಅಂತರ, ತರಗತಿಗಳ ಸ್ಯಾನಿಟೈಶೇಷನ್‌, ಸ್ವಚ್ಛತೆ, ಮಾಸ್ಕ್‌ ಧರಿಸುವುದು, ಕೊಠಡಿಗಳಲ್ಲಿ ಗಾಳಿ-ಬೆಳಕು ಮುಂತಾದ ಅಂಶಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು, ಕಾಲೇಜಿನ ಕಾರಿಡಾರ್‌ಗಳಲ್ಲಿ ಸಂಚರಿಸಿದರು.

ವಿದ್ಯಾರ್ಥಿಗಳ ಉತ್ಸಾಹ; ಡಿಸಿಎಂ ಹರ್ಷ
ಕೋವಿಡ್‌ ನಡುವೆಯೂ ವಿದ್ಯಾಭ್ಯಾಸದ ಬಗ್ಗೆ ಉತ್ಕಟ ಶ್ರದ್ಧೆ ಹೊಂದಿರುವ ವಿದ್ಯಾರ್ಥಿಗಳ ಬಗ್ಗೆ ಹರ್ಷ ವ್ಯಕ್ತಪಡಿಸಿದ ಡಿಸಿಎಂ ಅಶ್ವತ್ಥನಾರಾಯಣ ಅವರು, ತರಗತಿ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದರಲ್ಲದೆ, ವಿದ್ಯಾರ್ಥಿಗಳ ಕುಂದುಕೊರತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಜತೆಗೆ, ವೈರಸ್‌ ಬಗ್ಗೆ ಅಲಕ್ಷ್ಯ ಬೇಡ. ಮನೆಯಿಂದ ಕಾಲೇಜಿಗೆ ಸುರಕ್ಷಿತವಾಗಿ ಬಂದುಹೋಗಿ. ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ, ದೈಹಿಕ ಅಂತರ, ಮಾಸ್ಕ್‌ ಧರಿಸುವುದು ಹಾಗೂ ಸ್ಯಾನಿಟೈಸ್‌ ಮರೆಯಬೇಡಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ
ಕಾಲೇಜಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಉಪ ಮುಖ್ಯಮಂತ್ರಿಗಳು; “ಎಂಟು ತಿಂಗಳ ನಂತರ ಕಾಲೇಜುಗಳು ಆರಂಭವಾಗಿವೆ. ಅಂತಿಮ ವರ್ಷದ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಿದ್ದಾರೆ. ಉತ್ತಮ ಸ್ಪಂದನೆ ಸಿಕ್ಕಿದೆ. ಇದು ಪ್ರಾರಂಭ ಮಾತ್ರ. ಹಂತವಾಗಿ ಹಂತವಾಗಿ ಮಕ್ಕಳು ಹೆಚ್ಚುಹೆಚ್ಚಾಗಿ ಕಾಲೇಜುಗಳಿಗೆ ಬರಲಿದ್ದಾರೆ. ಯುಜಿಸಿ ಮಾರ್ಗಸೂಚಿಯಂತೆ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆಗದಂತೆ ಸರಕಾರ ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದೆ ಎಂದರು.

ಆನ್ʼಲೈನ್ ತರಗತಿಗಳ ಬಗ್ಗೆ ತೃಪ್ತಿ ಇಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಲೇ ಇದ್ದರು. ಹೀಗಾಗಿ ಕಾಲೇಜು ಪ್ರಾರಂಭ ಮಾಡಲಾಗಿದೆ. ಎಲ್ಲರಿಗೂ ಉಚಿತ ಕೋವಿಡ್ ಟೆಸ್ಟ್ ಮಾಡಲಾಗಿದೆ. ಯಾರು ಬೇಕಾದರೂ ಉಚಿತ ಟೆಸ್ಟ್ ಮಾಡಿಸಬಹುದು. ಸದ್ಯಕ್ಕೆ ಅಂತಿಮ ವರ್ಷದ ತರಗತಿಗಳನ್ನು ಆರಂಭಿಸಲಾಗಿದೆ. ಪ್ರಥಮ, ದ್ವೀತಿಯ ವರ್ಷದ ಮಕ್ಕಳಿಗೆ ಕಾಂಟ್ಯಾಕ್ಟ್ ಕ್ಲಾಸ್ ಮಾಡಲಾಗುತ್ತಿದೆ. ಭೌತಿಕ ತರಗತಿಗಳಿಗೆ ಹಾಜರಾಗುವಂತೆ ಯಾರಿಗೂ ಒತ್ತಾಯ ನಾವು ಮಾಡುವುದಿಲ್ಲ. ಇಚ್ಚೆ ಇರುವವರು ಬರಬಹುದು. ಆದರೆ, ಕೊರೊನಾ ಟೆಸ್ಟ್ ರಿಪೋರ್ಟ್ ಅವರಲ್ಲಿ ಇರಬೇಕು ಅಷ್ಟೆ ಎಂದು ಅವರು ತಿಳಿಸಿದರು.

Advertisement

ಶಾಲೆ, ಪದವಿಪೂರ್ವ ಕಾಲೇಜುಗಳ ಆರಂಭ ಯಾವಾಗ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಡಿಸಿಎಂ, ಈಗ ಪದವಿ ಕಾಲೇಜುಗಳು ಪ್ರಾರಂಭವಾಗಿವೆ. ಇದರ ಸಾಧಕ -ಬಾಧಕ ನೋಡಿಕೊಂಡು ಶಾಲೆ- ಪದವಿಪೂರ್ವ ಕಾಲೇಜುಗಳನ್ನು ತೆರೆಯುವ ಬಗ್ಗೆ ಸರಕಾರ ಕ್ರಮ ಕೈಗೊಳ್ಳುತ್ತದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವರು ಮಾಹಿತಿ ನೀಡಲಿದ್ದಾರೆ ಎಂದರು.

ಉಳಿದಂತೆ ಅತಿಥಿ ಉಪನ್ಯಾಸಕರನ್ನು ಅವಶ್ಯಕತೆ ನೋಡಿಕೊಂಡು ನೇಮಕ ಮಾಡಿಕೊಳ್ಳಲಾಗುವುದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಧ್ಯಾಪಕರ ವರ್ಗಾವಣೆಯ ಬಗ್ಗೆ ಕ್ಯಾಬಿನೆಟ್ʼನಲ್ಲಿ ಒಪ್ಪಿಗೆ ಸಿಕ್ಕಿದೆ. ಶೀಘ್ರವೇ ವರ್ಗಾವಣೆ ಪ್ರಕ್ರಿಯೆ ಪ್ರಾರಂಭ ಮಾಡಲಾಗುವುದು ಎಂದರು ಉಪ ಮುಖ್ಯಮಂತ್ರಿ.

ಶೀಘ್ರವೇ ಸಿಇಟಿ ಕೌನ್ಸಿಲಿಂಗ್
ವಿದ್ಯಾರ್ಥಿಗಳು ಮತ್ತು ಪೋಷಕರು ಎದುರು ನೋಡುತ್ತಿರುವ ಸಿಇಟಿ ಕೌನ್ಸಿಲಿಂಗ್ ಅನ್ನು ಶೀಘ್ರವೇ ನಡೆಸಲಾಗುವುದು. ಈಗಾಗಲೇ ಕೌನ್ಸೆಲಿಂಗ್‌ ಮುಗಿಯಬೇಕಿತ್ತು. ಕೋವಿಡ್‌ ಕಾರಣದಿಂದ ತಡವಾಯಿತು. ಆದಷ್ಟು ಬೇಗ ದಿನಾಂಕ ಪ್ರಕಟ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಗೋಮತಿದೇವಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next