ರಾಮನಗರ: ಈಗಲ್ಟನ್ ರೆಸಾರ್ಟ್‌ನಲ್ಲಿ ವಾಸ್ತವ್ಯ ಇರುವ ಕಾಂಗ್ರೆಸ್ ಶಾಸಕರನ್ನು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಭೇಟಿ ಮಾಡಿ ಮಾತನಾಡಿದರು. ಶಾಸಕರಾದ ಆನಂದ್ ಸಿಂಗ್ ಮತ್ತು ಗಣೇಶ್ ನಡುವಿನ ಗಲಾಟೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಡಾ.ಜಿ.ಪರಮೇಶ್ವರ್ ಅವರು ಶಾಸಕ ಗಣೇಶ್‌ರ ಬಳಿ ಮಾತನಾಡಿ, ಅನಾವಶ್ಯಕ ಪ್ರಸಂಗಕ್ಕೆ ಕಾರಣರಾಗಿದ್ದೀರಿ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು ಎಂದು ಗೊತ್ತಾಗಿದೆ.
ಭಾನುವಾರ ಬೆಳಗ್ಗೆಯಿಂದ ಶಾಸಕ ಗಣೇಶ್ ಅವರು ತಮ್ಮ ಕೊಠಡಿ ಬಿಟ್ಟು ಬರಲಿಲ್ಲ. ಉಪಮುಖ್ಯಮಂತ್ರಿಗಳ ಬುಲಾವ್ ಮೇರೆಗೆ ಹೊರ ಬಂದರು. ಪರಮೇಶ್ವರ್ ಅವರು ಗಣೇಶ್ ಅವರನ್ನು ತರಾಟೆಗೆ ತೆಗೆದುಕೊಂಡರು. ಇಂತಹ ಧೋರಣೆಗಳನ್ನು ಮುಂದುವರಿಸಿದರೆ ಶಿಸ್ತು ಕ್ರಮ ಅನಿವಾರ್ಯ ಎಂದೂ ಸಹ ವಾರ್ನಿಂಗ್ ನೀಡಿದರು ಎಂದು ಮೂಲಗಳು ತಿಳಿಸಿವೆ.
ಬಲವಂತ ಬೇಡ, ಬಿಟ್ಟು ಬಿಡಿ: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದ ಕಾಂಗ್ರೆಸ್ ಶಾಸಕರು, ಕ್ಷೇತ್ರಗಳಲ್ಲಿ ಬರ ಪರಿಸ್ಥಿತಿ ಇದೆ. ಅಲ್ಲಿ ಜನ ಸಂಕಷ್ಟದಲ್ಲಿದ್ದಾರೆ. ನೀವು ಹೀಗೆ ನಮ್ಮನ್ನು ಇಲ್ಲಿ ಇರಿಸಿಕೊಂಡಿದ್ದೀರಿ. ಅಲ್ಲಿ ಕ್ಷೇತ್ರದ ಜನರಲ್ಲಿ ನಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತಿದೆ. ನಾವ್ಯಾರೂ ಪಕ್ಷ ಬಿಟ್ಟು ಹೋಗೋಲ್ಲ. ತಕ್ಷಣ ರೆಸಾರ್ಟ್‌ನಿಂದ ಮುಕ್ತಗೊಳಿಸಿ ಎಂದು ಅಲವತ್ತುಕೊಂಡಿದ್ದಾರೆ ಎಂದು ಗೊತ್ತಾಗಿದೆ. ಇದೇ ರೀತಿ, ನೀವು ಬಲವಂತವಾಗಿ ಇಲ್ಲಿ ಇರಿಸಿಕೊಂಡರೆ ನಾವು ನಮ್ಮ ಕ್ಷೇತ್ರದ ದಾರಿ ಹಿಡಿಯುತ್ತೇವೆ ಎಂದೂ ಸಹ ಕೆಲವು ಶಾಸಕರು ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಬಳಿಕ, ಪರಮೇಶ್ವರ್ ಮತ್ತು ಡಿಕೆಶಿ ಅವರು ಶಾಸಕರನ್ನು ಸಮಾಧಾನ ಪಡಿಸಿ, ಉಸ್ತುವಾರಿ ವೇಣುಗೋಪಾಲ್ ಮತ್ತು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ಬಂದು ಸಭೆ ನಡೆಸಲಿ. ಆಮೇಲೆ ಚರ್ಚಿಸೋಣ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.