ವಿಜಯಪುರ: ನಿರ್ಲಕ್ಷಿತ ಕೃಷಿ ಕ್ಷೇತ್ರಕ್ಕೆ ಸ್ವಾಭಿಮಾನ ತಂದು ಕೊಡಲು ಮೊಬೈಲ್ ಕರೆಯ ವೇಳೆ ಹಲೋ ಎನ್ನುವ ಬದಲು ಜೈಕಿಸಾನ್ ಅಥವಾ ಜೈ ಜವಾನ್ ಎನ್ನುವ ಮೂಲಕ ಅನ್ನದಾತನಿಗೆ ಗೌರವಿಸುವ ಕೆಲಸವಾಗಬೇಕು ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಶನಿವಾರ ಹಿಟ್ನಳ್ಳಿ ಕೃಷಿ ಮಹಾವಿದ್ಯಾಲಯದಲ್ಲಿ ಕೃಷಿ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಷಕಾರಕ ಆಹಾರ ಪೂರೈಕೆ ತಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಅವೈಜ್ಞಾನಿಕ ರಾಸಾಯನಿಕ, ಕ್ರಿಮಿನಾಶಕ ಬಳಕೆಗೆ ಕಡಿವಾಣ ಹಾಕಬೇಕಿದೆ. ಹಣ ಗಳಿಕೆಯ ಬದಲಾಗಿ ಆರೋಗ್ಯ ಪೂರ್ಣ ಸಮಾಜ ಕಟ್ಟಲು ಪಣ ತೊಡಬೇಕಿದೆ. ಭವಿಷ್ಯದ ದಿನಗಳಲ್ಲಿ ಅನ್ಮದಾತರು ಕೂಡ ಈ ನಿಟ್ಡಿನಲ್ಲಿ ಬದ್ಧತೆ ತೋರಬೇಕು ಎಂದು ಮನವಿ ಮಾಡಿದರು.
ನೀರಿನ ಮಿತ ಬಳಕೆ ಮಾಡದಿದ್ದಲ್ಲಿ ನೀರಾವರಿ ವ್ಯವಸ್ಥೆ ಹದಗೆಡುತ್ತದೆ. ಭೂಮಿ ಸವಳು- ಜವಳು ಆಗದಂತೆ ಮಾಡಬೇಕಿದೆ. ಪೂರ್ವಜರು ಕೊಟ್ಟ ಆರೋಗ್ಯಯುತ ಭೂಮಿಯನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಹೊಣೆ ನಮ್ಮ ಮೇಲಿದೆ. ಜೊತೆಗೆ ವಿಷಮುಕ್ತ ಆಹಾರ ಉತ್ಪಾದನೆಗಾಗಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಪ್ರಧಾನಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಅನ್ನದಾತ ಬೆಳೆಯುವ 26 ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ. ಆರು ಕೋಟಿ ಅನ್ನದಾತರಿಗೆ ಕೃಷಿ ಸಮ್ಮಾನ ಯೋಜನೆಯಲ್ಲಿ ಮೊದಲ ಕಂತಿನ 2000 ರೂ. ಹಣದಂತೆ ಪ್ರಧಾನಿ ಮೋದಿ ಅವರು 12000 ಕೋಟಿ ಹಣವನ್ನು ನೇರವಾಗಿ ಅನ್ನದಾತರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಮೂಲಕ ನಮ್ಮ ಸರಕಾರ ರೈತರ ಪರವಾದ ನಮ್ಮ ಬದ್ಧತೆ ತೋರಿದೆ ಎಂದರು.
ಇದಕ್ಕಾಗಿ ನಮ್ನ ಸರ್ಕಾರ ಸಾವಯವ ಕೃಷಿ ಉತ್ಪಾದನೆ ಉದ್ಯಮ ಆರಂಭಕ್ಕೆ ರೈತರು ಒಕ್ಕೂಟ ಮಾಡಿಕೊಂಡಲ್ಲಿ 10 ಲಕ್ಷ ರೂ.ನೆರವು ನೀಡುತ್ತಿದೆ.
ವಿಜಯಪುರ ಕೃಷಿಮೇಳ ಆಯೋಜನೆಯ ಅವ್ಯವಸ್ಥತೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕಾಟಾಚಾರದ ಕೃಷಿಮೇಳಗಳಿಂದ ಯಾರಿಗೂ ಉಪಯೋಗವಿಲ್ಲ. ಭವಿಷ್ಯದಲ್ಲಿ ಕೃಷಿಮೇಳಗಳು ರೈತಪರವಾಗಿ ಇರಬೇಕು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹಾದೇವ ಚಟ್ಟಿ ಅವರಿಗೆ ಸೂಚನೆ ನೀಡಿದರು.