Advertisement
ಮೈತ್ರಿ ಸರ್ಕಾರದಲ್ಲಿ 80 ಶಾಸಕರಿದ್ದರೂ, ಕಾಂಗ್ರೆಸ್ ಶಾಸಕರ ಹಿತ ಕಾಯುವಲ್ಲಿ ಡಾ.ಜಿ.ಪರಮೇಶ್ವರ್ ಆಸಕ್ತಿ ತೋರದೆ ಅಧಿಕಾರದಲ್ಲಿ ಕಾಲ ತಳ್ಳುವ ಪ್ರಯತ್ನ ಮಾಡಿದರು ಎನ್ನುವ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುವಂತಾಯಿತು. ಪಕ್ಷದ ಶಾಸಕರ ಕೆಲಸಗಳು ಮೈತ್ರಿ ಸರ್ಕಾರದಲ್ಲಿ ಆಗದಿದ್ದಾಗ ಉಪ ಮುಖ್ಯ ಮಂತ್ರಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಗಮನಕ್ಕೆ ತಂದು ಪಕ್ಷದ ಶಾಸಕರ ಹಿತ ಕಾಯದೆ, ತಮಗೂ, ಶಾಸಕರಿಗೂ ಸಂಬಂಧವಿಲ್ಲ ಎನ್ನುವಂತೆ ನಡೆದುಕೊಂಡರು ಎನ್ನುವ ಆರೋಪ ಕೇಳಿ ಬಂತು.
Related Articles
Advertisement
ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ನಿರ್ಮಾಣ ವಾದರೆ, ತಾವೇ ಮುಂದೆ ನಿಂತು ಶಾಸಕರನ್ನು ಸಮಾಧಾನ ಪಡಿಸುವ, ಅವರ ಕೆಲಸಗಳನ್ನು ಮುಖ್ಯಮಂತ್ರಿಯಿಂದ ಮಾಡಿಸಿ ಕೊಡುವ ಪ್ರಯತ್ನ ಮಾಡದೇ ಎಲ್ಲದಕ್ಕೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಹಿಂಬಾಲಿಸಿದ್ದು, ಕಾಂಗ್ರೆಸ್‌ನಲ್ಲಿಯೇ ತಮ್ಮ ನಾಯಕತ್ವವನ್ನು ಗಟ್ಟಿಗಳಿಸಿಕೊಳ್ಳುವಲ್ಲಿ ತಾವೇ ಅಸಮರ್ಥರು ಎನ್ನುವುದನ್ನು ಪರೋಕ್ಷವಾಗಿ ತೋರಿಸಿದಂತಿತ್ತು.
ಸಿಎಂ ಗಾದಿಯ ಕನಸು: ಮೈತ್ರಿ ಸರ್ಕಾರದಲ್ಲಿ ಗೊಂದಲಗಳು ಉಂಟಾದಾಗ, ಮುಖ್ಯಮಂತ್ರಿ ಬದಲಾವಣೆಯ ಮಾತುಗಳು ಕೇಳಿ ಬಂದಾಗಲೆಲ್ಲಾ ಪರಮೇಶ್ವರ್ ತಾವೇ ಪರ್ಯಾಯ ನಾಯಕರಾಗುವ ಕನಸು ಕಂಡಿದ್ದರು. ಅದೇ ಕಾರಣಕ್ಕೆ ದೇವೇಗೌಡರ ಕುಟುಂಬದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದರು ಎನ್ನುವ ಆರೋಪವೂ ಅವರ ವಿರುದ್ಧ ಕೇಳಿ ಬಂತು. ದಲಿತ ಮುಖ್ಯಮಂತ್ರಿ ಮಾಡುವ ಪ್ರಸಂಗ ಬಂದರೆ, ದೇವೇಗೌಡರು ತಮ್ಮನ್ನೇ ಪರಿಗಣಿಸುತ್ತಾರೆ ಎಂಬ ಆಶಾಭಾವನೆ ಇಟ್ಟುಕೊಂಡಿದ್ದರು ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಾನೂನು ಸಚಿವರಾಗಿಯೂ ಮೌನ: ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಸದನದಲ್ಲಿ ದೇಶದಲ್ಲಿ ನಡೆದ ಎಲ್ಲ ರೀತಿಯ ವಿಶ್ವಾಸ ಮತ ಯಾಚನೆ, ಸಂವಿಧಾನದಲ್ಲಿನ ಗೊಂದಲಗಳು, ಕಾನೂನಿನಲ್ಲಿರುವ ತೊಡಕುಗಳು, ಸ್ಪೀಕರ್ ಹಾಗೂ ರಾಜ್ಯಪಾಲರ ನಡುವಿನ ಸಾಂವಿಧಾನಿಕ ಅಧಿಕಾರದ ವ್ಯಾಪ್ತಿ, ಶಾಸಕಾಂಗ ಹಾಗೂ ನ್ಯಾಯಾಂಗದ ನಡುವಿನ ಅಧಿಕಾರ ವ್ಯಾಪ್ತಿಯ ಸಂಘರ್ಷದ ಬಗ್ಗೆ ಆಡಳಿತ ಮತ್ತು ಪ್ರತಿಕ್ಷಗಳ ಶಾಸಕರ ನಡುವೆ ವಿಸ್ತೃತ ಚರ್ಚೆ ನಡೆಯುತ್ತಿದ್ದರೂ, ಪ್ರತಿಪಕ್ಷದ ಶಾಸಕರ ವಿರುದ್ದ ಮೈತ್ರಿ ಪಕ್ಷಗಳ ಶಾಸಕರು ಬಹಿರಂಗ ವಾಗ್ಧಾಳಿ ನಡೆಸಿ, ಆಪರೇಷನ್ ಕಮಲದ ವಿರುದ್ಧ ಆರೋಪ ಮಾಡಿದರೂ, ಉಪ ಮುಖ್ಯಮಂತ್ರಿ ಹಾಗೂ ವಿಶೇಷವಾಗಿ ಕಾನೂನು ಸಚಿವರಾಗಿರುವ ಪರಮೇಶ್ವರ್ ಒಂದೇ ಒಂದು ಮಾತನಾಡದೇ ಮೌನ ವಹಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಮಾಧ್ಯಮಗಳಿಂದ ಅಂತರ: ಡಾ.ಜಿ. ಪರಮೇಶ್ವರ್ ಉಪ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಎನ್ನುವ ಹುದ್ದೆ ಅಲಂಕರಿಸಿದ ಮೇಲೆ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕರಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದರು ಎಂಬ ಆರೋಪ ಕೇಳಿ ಬಂತು. ಅಲ್ಲದೇ ಪರಮೇಶ್ವರ್ ಅವರು ಮಾಧ್ಯಮಗಳಿಂದಲೂ ಅಂತರ ಕಾಯ್ದುಕೊಂಡು ಕಾರ್ಪೊರೇಟ್ ಮಾದರಿಯಲ್ಲಿ ಮಾಧ್ಯಮಗಳೊಂದಿಗೆ ಸಂಪರ್ಕ ಇಟ್ಟುಕೊಳ್ಳುವ ಪ್ರಯತ್ನ ನಡೆಸಿದರು ಎಂಬ ಆರೋಪವೂ ಕೇಳಿ ಬರುವಂತಾಯಿತು. ಅದೂ ಕೂಡ ಪರಮೇಶ್ವರ್ ನಾಯಕತ್ವದ ಮೇಲೆ ಪರಿಣಾಮ ಬೀರುವಂತಾಯಿತು ಎಂಬ ಮಾತುಗಳು ಕೇಳಿ ಬಂದವು.