Advertisement

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ: ಶಿಕ್ಷಣ ತಜ್ಞ ಡಾ. ಕರಜಗಿ ಜೊತೆ DCM ಕಾರಜೋಳ ಸಮಾಲೋಚನೆ

08:20 PM Sep 14, 2020 | Hari Prasad |

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಪೂರ್ವಸಿದ್ದತೆ ಕೈಗೊಳ್ಳುವ ಬಗ್ಗೆ ಶಿಕ್ಷಣ ತಜ್ಞ ಹಾಗೂ ಕ್ರೈಸ್ ಸಲಹೆಗಾರರಾದ ಡಾ. ಗುರುರಾಜ್ ಕರಜಗಿ ಅವರೊಂದಿಗೆ ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ. ಕಾರಜೋಳ ಅವರು ಇಂದು ಸುಧೀರ್ಘ ಚರ್ಚೆ ನಡೆಸಿದರು.

Advertisement

ಸೋಮವಾರದಂದು ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರಜೋಳ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಯುವ ಪೀಳಿಗೆಯ ಆಶೋತ್ತರಗಳಿಗೆ ಪೂರಕವಾಗಿದ್ದು, ಇದನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು.

ಇದಕ್ಕೆ ಪೂರಕವಾಗಿ ಸಿದ್ದತೆ ಮಾಡಿಕೊಂಡು ವಿದ್ಯಾರ್ಥಿಗಳು ಶೇ.100ರಷ್ಟು ಅತ್ಯುತ್ತಮ ಫಲಿತಾಂಶ ಪಡೆಯವಂತೆ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು, ಪ್ರಾಂಶುಪಾಲರು, ಶುಶ್ರೂಷಕರಿಗೆ ಅಗತ್ಯವಾದ ತರಬೇತಿಯನ್ನು ನೀಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಕ್ರೈಸ್ ನಲ್ಲಿ ಶೈಕ್ಷಣಿಕ ಘಟಕವನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಘಟಕದ ಅಡಿಯಲ್ಲಿ ಲರ್ನಿಂಗ್ ಪ್ಯಾಕ್ ಗಳನ್ನು ಸಿದ್ದಪಡಿಸಲಾಗುವುದು. ಈ ಘಟಕಕ್ಕೆ ಬೇಕಾಗಿರುವ ಅಧಿಕಾರಿಗಳನ್ನು ನಿಯೋಜಿಸಿಕೊಂಡು‌ ಕಾರ್ಯೋನ್ಮುಖವಾಗಬೇಕು. ಆನ್ ಲೈನ್ ಮೂಲಕ ವಿವಿಧ ತರಗತಿಗಳ ನಿರ್ವಹಣೆ ಮಾಡಲಾಗುವುದು.

ಪ್ರತಿಯೊಬ್ಬ ವಿದ್ಯಾರ್ಥಿ ಹಾಗೂ ಶಿಕ್ಷಕರ ಪ್ರಗತಿಯನ್ನು ಟ್ರ್ಯಾಕ್ ಮಾಡುವ ಸಲುವಾಗಿ ಸೂಕ್ತ ತಂತ್ರಜ್ಣನದ ಬಳಕೆ‌ ಮಾಡಲಾಗುವುದು. ಶಿಕ್ಷಕರ ಸಾಮರ್ಥ್ಯವನ್ನು ಹೆಚ್ಚಿಸುವ ದೆಸೆಯಲ್ಲಿ ವಿವಿಧ ತರಗತಿಗಳನ್ನು ಪ್ರಾರಂಭಿಸಲಾಗುವುದು. ಮಕ್ಕಳ ಕಲಿಕೆಯನ್ನು ಸಂಪನ್ನಗೊಳಿಸಲು ಪ್ರತೀ ವಿದ್ಯಾರ್ಥಿಯ ಕಲಿಕೆಯ ಗತಿಯನ್ನು ಅರಿತು ನಿರ್ದಿಷ್ಟ ಶೈಕ್ಷಣಿಕ ಒತ್ತಾಸೆ ನೀಡಲು ಅಗತ್ಯ ಕ್ರಮ, ಮೇಲ್ವಿಚಾರಣೆ ತಂತ್ರಾಂಶವನ್ನು ಪರಿಶೀಲಿಸಿ ಉನ್ನತೀಕರಣ, ಶಿಕ್ಷಕರ ಕಾರ್ಯ ಕ್ಷಮತೆ ಗುರುತಿಸಿ ಪ್ರೋತ್ಸಾಹಿಸುವಿಕೆ ಮತ್ತಿತರ ವಿಷಯಗಳ ಕುರಿತು ಯೋಜಿಸಿ ಕ್ರಮ ಜರುಗಿಸಬೇಕು ಎಂದು ಉಪಮುಖ್ಯಮಂತ್ರಿಯವರು ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಸೂಚಿಸಿದರು.

Advertisement

ಡಾ. ಗುರುರಾಜ್ ಕರಜಗಿ ಮಾತನಾಡಿ, ವಸತಿ ಶಾಲೆಗಳ ಪ್ರಾಂಶುಪಾಲರೊಂದಿಗೆ ಇಂದು ಸಭೆ ನಡೆಸಿ, ಅವರ ಅಭಿಪ್ರಾಯ ಸಂಗ್ರಹಿಸಿ, ಸೂಕ್ತ ಸಲಹೆ ಸೂಚನೆ ನೀಡಲಾಗಿದೆ. ವಸತಿ ಶಾಲೆಗಳ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಕ್ರೈಸ್ ಕಾರ್ಯನಿರ್ವಾಹಕ ನಿರ್ದೇಶಕ ರಾಘವೇಂದ್ರ, ಡಿಸಿಎಂ ಅವರ ಆಪ್ತ ಕಾರ್ಯದರ್ಶಿ ವಿ. ಶ್ರೀನಿವಾಸ್ ಹಾಗೂ ಇತರೇ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next