ಬಾಗಲಕೋಟೆ : ಡಾ| ಅಂಬೇಡ್ಕರ ಅವರು ಬರೆದ ಸಂವಿಧಾನದಲ್ಲಿ ದಲಿತ ಎಂಬ ಪದವೇ ಇಲ್ಲ. ಎಸ್.ಸಿ, ಎಸ್.ಟಿ ಎಂದು ಸಂವಿಧಾನದಲ್ಲಿದೆ. ಹೀಗಾಗಿ ರಾಜ್ಯದಲ್ಲಿ ಇನ್ನು ಮುಂದೆ ದಲಿತ ಪದ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ರಾಜ್ಯದ ಸಾಹಿತಿಗಳು, ಜ್ಞಾನಿಗಳು ದಲಿತ ಪದಕ್ಕೆ ಪರ್ಯಾಯವಾದ ಸೂಕ್ತ ಪದ ಸೂಚಿಸಿದರೆ, ಅದನ್ನು ಸರ್ಕಾರ ಪರಿಶೀಲಿಸಲಿದೆ ಎಂದು ಸಮಾಜ ಕಲ್ಯಾಣ ಸಚಿವರೂ ಆಗಿರುವ ಡಿಸಿಎಂ ಗೋವಿಂದ ಕಾರಜೋಳ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ದಪ ನಿಷೇಧ ಮಾಡಿದ್ದಕ್ಕೆ ನನ್ನನ್ನು ಹಲವು ಟೀಕಿಸಿದ್ದಾರೆ. ಅದರ ಬಗ್ಗೆ
ತಲೆಕೆಡಿಸಿಕೊಂಡಿಲ್ಲ. ಸಂವಿಧಾನದಲ್ಲಿ ಇಲ್ಲದ ಪದ ಬಳಕೆ ಮಾಡದಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದರು.
ಈ ವಿಷಯದಲ್ಲಿ ನಾನು ನನ್ನ ವೈಯಕ್ತಿಕ ನಿರ್ಧಾರ ತಗೆದುಕೊಂಡಿಲ್ಲ. ಕೇಂದ್ರ ಸರ್ಕಾರದ ಆದೇಶವನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗಿದೆ.
ಸಾಹಿತಿಗಳು, ಪರ್ಯಾಯ ಪದ ಬಳಕೆ ಕುರಿತು ಸಲಹೆ ಕೊಟ್ಟರೆ, ಅದನ್ನು ಬಳಕೆ ಮಾಡುವ ಕುರಿತು ಪರಿಶೀಲನೆ ಮಾಡಲಾಗುವುದು. ಪರ್ಯಾಯ ಪದಕ್ಕಾಗಿ ಸಮೀತಿ ರಚಿಸುವುದಿಲ್ಲ ಎಂದು ತಿಳಿಸಿದರು.