ಬೆಂಗಳೂರು: ರಾಜ್ಯ ಸರಕಾರಿ ನೌಕರರಿಗೆ ಸರಕಾರ ಸಿಹಿ ಸುದ್ದಿಯ ಸುಳಿವು ನೀಡಿದೆ. ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಯಂತೆ ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್) ಜಾರಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಈ ಸಂಬಂಧ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆ ಯಲ್ಲಿ ಸಮಿತಿ ರಚಿಸಿದೆ ಎಂದು ವಿಧಾನ ಪರಿಷತ್‌ನಲ್ಲಿ ಗುರುವಾರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಿರುವ ರಾಜ್ಯಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಿರುವ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ, ವರದಿ ಸಲ್ಲಿಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸ ಲಾಗಿದೆ. ಅದರ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ನಿಯಮ 72ರಡಿ ಸದಸ್ಯರಾದ ಡಾ| ವೈ.ಎ. ನಾರಾಯಣ ಸ್ವಾಮಿ, ಎಸ್.ವಿ. ಸಂಕನೂರ ಮತ್ತು ಮರಿತಿಬ್ಬೇಗೌಡ ವಿಷಯ ಪ್ರಸ್ತಾ ವಿಸಿ, ಒಪಿಎಸ್ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೀರಿ. ಅದನ್ನೀಗ ಅನುಷ್ಠಾನಗೊಳಿಸಬೇಕು ಎಂದರು.
ಇದಕ್ಕೆ ಪ್ರತ್ರಿಕಿಯಿಸಿದ ಡಿ.ಕೆ. ಶಿವ ಕುಮಾರ್, “ಪ್ರಣಾಳಿಕೆಯಲ್ಲಿ ಹೇಳಿದ್ದರೂ ವಾಸ್ತವವಾಗಿ ನಮಗೂ ಇದು ಕಷ್ಟದ ವಿಚಾರ. ಮಾನವೀಯತೆ ದೃಷ್ಟಿಯಿಂದ ಇದನ್ನು ಪರಿಗಣಿಸಬೇಕಿದೆ. ಹಾಗಾಗಿ, ಬೇರೆ ರಾಜ್ಯಗಳಲ್ಲಿ ಮರುಜಾರಿಗೊಳಿಸುತ್ತಿರುವ ಬಗ್ಗೆ ಕೈಗೊಂಡ ಕ್ರಮಗಳನ್ನು ಅಧ್ಯಯನ ನಡೆಸಲು ಸೂಚಿಸಲಾಗಿದೆ. ವಿವಿಧ ಸರಕಾರಿ ನೌಕರರ ಸಂಘಗಳು, ಹಣಕಾಸು ಇಲಾಖೆ ಸಿಬಂದಿ ಜತೆಗೂ ಈ ಸಂಬಂಧ ಚರ್ಚಿಸಲಾಗಿದೆ ಎಂದು ತಿಳಿಸಿದರು.
ಹಿಂದೆಯೂ ಸಮಿತಿ ರಚನೆಯಾಗಿತ್ತು
ಎಂಎಲ್‌ಸಿ ಎಸ್.ವಿ. ಸಂಕನೂರ ಮಾತನಾಡಿ, “ಸಮಿತಿ ರಚನೆ ಹೊಸದಲ್ಲ; ಈ ಹಿಂದೆಯೂ ಆಗಿತ್ತು. ಆದರೆ ಅದು ವರದಿ ನೀಡುವುದು ಹೋಗಲಿ, ಒಂದೇ ಒಂದು ಸಭೆಯನ್ನೂ ನಡೆಸಲಿಲ್ಲ. ಅದು ಪುನರಾ ವರ್ತನೆ ಆಗಬಾರದು. ವರದಿ ಸಲ್ಲಿಸಲು ಸಮಿತಿಗೆ ನಿರ್ದಿಷ್ಟ ಗಡುವು ವಿಧಿಸಬೇಕು ಅಲ್ಲದೆ, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೂ ಒಪಿಎಸ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.