ಬೆಂಗಳೂರು: ದುಬೈನಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರು ದೇಶಕ್ಕೆ ವಾಪಸಾಗಲು ವಿಮಾನಯಾನ ಸೌಕರ್ಯ ಕಲ್ಪಿಸುವ ಸಂಬಂಧ ಕೇಂದ್ರಕ್ಕೆ ಮನವಿ ಮಾಡುವುದರ ಜತೆಗೆ ಬಂದವರಿಗೆ ಸೂಕ್ತ ಕ್ವಾರಂಟೈನ್ ವ್ಯವಸ್ಥೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಭರವಸೆ ನೀಡಿದರು.
ದುಬೈ ಕನ್ನಡಿಗರ ಜತೆ ಭಾನುವಾರ ವೀಡಿಯೋ ಸಂವಾದ ನಡೆಸಿದ ಡಾ. ಅಶ್ವತ್ಥನಾರಾಯಣ ಅವರು ದುಬೈ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ, ಸರ್ಕಾರದ ಕಡೆಯಿಂದ ಆಗುವ ಎಲ್ಲ ಸಹಾಯ ಮಾಡುವುದಾಗಿ ಆಶ್ವಾಸನೆ ನೀಡಿದರು.
ಕೋವಿಡ್ ಹಿನ್ನಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ದುಬೈ ಕನ್ನಡಿಗರಿಗೆ ಆಹಾರ, ಆರೋಗ್ಯ ಹಾಗೂ ಕಾನೂನು ಸೇವೆ ಒದಗಿಸಲು ಅಲ್ಲಿನ ಅನಿವಾಸಿ ಭಾರತೀಯ ಉದ್ಯಮಿಗಳು, ವೃತ್ತಿಪರರು ವೆಬ್‌ಸೈಟ್ ಆರಂಭಿಸಿ ನೆರವು ಒದಗಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಉಪಮುಖ್ಯಮಂತ್ರಿ, “ವಿದೇಶಗಳಿಂದ ಬರುವ 10-12 ಸಾವಿರ ಜನರಿಗೆ ಕ್ವಾರಂಟೈನ್ ವ್ಯವಸ್ಥೆಯನ್ನೂ ರಾಜ್ಯ ಸರ್ಕಾರದ ಕಡೆಯಿಂದ ಮಾಡಲಾಗುತ್ತದೆ”ಎಂದರು.
ವಿದೇಶದಲ್ಲಿ ಉದ್ಯೋಗ ಕಳೆದುಕೊಂಡು ಭಾರತಕ್ಕೆ ವಾಪಸಾದವರ ಪೈಕಿ ಅಗತ್ಯ ಇರುವವರಿಗೆ ವೃತ್ತಿಪರ ಕೌಶಲ ತರಬೇತಿಗೆ ವ್ಯವಸ್ಥೆ ಮಾಡಲಾಗುತ್ತದೆ. ಮುದ್ರಾ ಯೋಜನೆಯಡಿ ಉದ್ದಿಮೆ ಆರಂಭಿಸಲು ಅಗತ್ಯ ಹಣಕಾಸು ನೆರವು ಪಡೆಯಬಹುದು. ಜತೆಗೆ, ಕೋರಿಕೆ ಮೇರೆಗೆ ನಿರ್ದಿಷ್ಟ ಸಿಬಿಎಸ್‌ಸಿ ಶಾಲೆಗಳಲ್ಲಿ ಅನಿವಾಸಿ ಭಾರತೀಯರ ಮಕ್ಕಳ ಪ್ರವೇಶಕ್ಕೆ ಸಹಕರಿಸುವುದಾಗಿ ಹೇಳಿದರು.
ದುಬೈನಲ್ಲಿ 10-15 ಕಾರ್ಮಿಕರು ಒಂದೇ ಕೊಠಡಿಯಲ್ಲಿ ಇರುತ್ತಾರೆ. ಈ ಪೈಕಿ ಒಬ್ಬರಿಗೂ ಸೋಂಕಿದ್ದರೂ ಉಳಿದವರಿಗೂ ಅಪಾಯ ತಪ್ಪಿದ್ದಲ್ಲ. ಹಾಗಾಗಿ ಅಂಥವರಿಗೆ ಕ್ವಾರಂಟೈನ್ ವ್ಯವಸ್ಥೆಗೆ ನೆರವಾಗಬೇಕು ಎಂಬ ಮನವಿಗೆ ಸ್ಪಂದಿಸಿದ ಅವರು, ” ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ, ಅಗತ್ಯ ನೆರವು ಒದಗಿಸಲು ಒತ್ತಾಯಿಸಲಾಗುತ್ತದೆ. ಅಂಥವರು ಭಾರತಕ್ಕೆ ವಾಪಸಾಗಲು ಬಯಸಿದರೆ ಅವರಿಗೆ ಸರ್ಕಾರವೇ ಇಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸುತ್ತದೆ. ವಿದೇಶಗಳಿಂದ ಬರುವವರನ್ನು ಹೋಟೆಲ್‌ಗಳಲ್ಲಿ ಪ್ರತ್ಯೇಕವಾಗಿ ಇರಿಸಿ, ಅಗತ್ಯ ಸೌಕರ್ಯ ಒದಗಿಸಲಾಗುತ್ತದೆ,” ಎಂದು ವಿವರಿಸಿದರು.