Advertisement

ಆದ್ಯತಾ ವಲಯದ ಅನುದಾನ ಸಕಾಲದಲ್ಲಿ ಬಳಕೆಯಾಗಲಿ

04:11 PM Mar 12, 2022 | Kavyashree |

ಶಿವಮೊಗ್ಗ: ಆದ್ಯತಾ ವಲಯಗಳಿಗೆ ನಿಗದಿಪಡಿಸಿದ ಅನುದಾನ ಉದ್ದೇಶಿತ ಯೋಜನೆಗಳಿಗೆ ಸಕಾಲದಲ್ಲಿ ಬಳಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ಬ್ಯಾಂಕುಗಳ ವ್ಯವಸ್ಥಾಪಕರಿಗೆ ಸೂಚಿಸಿದರು.

Advertisement

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‌ ಜಿಲ್ಲಾ ಪಂಚಾಯಿತಿ ಅಬ್ದುಲ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೂರನೇ ತೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಳಚೆ ಪ್ರದೇಶದ ನಿವಾಸಿಗಳು ಇರುವ ಸ್ಥಳದಲ್ಲಿಯೇ ಸೂರೊಂದನ್ನು ನಿರ್ಮಿಸಿಕೊಂಡು ನೆಮ್ಮದಿಯ ದಿನಗಳನ್ನು ಕಳೆಯಲು ಅನುಕೂಲವಾಗುವಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಯೋಜನೆಗಳ ಅಡಿಯಲ್ಲಿ ಸಹಾಯಧನದೊಂದಿಗೆ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಒದಗಿಸಿ, ಅಗತ್ಯ ಸಹಕಾರ ನೀಡುವಂತೆ ಸೂಚಿಸಿದರು.

ಹಲವು ಬ್ಯಾಂಕುಗಳಲ್ಲಿ ಶಿಕ್ಷಣ ಮತ್ತು ವಸತಿ ಯೋಜನೆಗಳಲ್ಲಿ ಅರ್ಹ ಫಲಾನುಭವಿಗಳಿಗೆ ನೀಡಿರುವ ಸಾಲದ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಪ್ರಗತಿ ನಿರಾಶಾದಾಯಕವಾಗಿದೆ. ಉದ್ದೇಶಿತ ಯೋಜನೆಗಳಿಗೆ ನಿಗದಿಪಡಿಸಿದ ಹಣವನ್ನು ಸೂಚಿಸಲಾಗಿರುವ ಕಾಲಾವಧಿಯಲ್ಲಿಯೇ ಬಿಡುಗಡೆಗೊಳಿಸಿ ಪ್ರಗತಿ ವರದಿ ನೀಡುವಂತೆ ಬ್ಯಾಂಕ್‌ ವ್ಯವಸ್ಥಾಪಕರಿಗೆ ಸೂಚಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೂಪಿಸಿ ಅನುಷ್ಠಾನಗೊಳಿಸುವ ಯೋಜನೆಗಳು ಜನಸಾಮಾನ್ಯರಿಗೆ ತಲುಪುವಂತೆ ಬ್ಯಾಂಕ್‌ ಹಾಗೂ ಸಂಬಂಧಿಸಿದ ಇಲಾಖಾಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಿ. ಪಿಎಂಜೆಜೆಬಿವೈ ಯೋಜನೆಯಡಿಯಲ್ಲಿ ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವವರು 12 ರೂ. ಗಳ ತಮ್ಮ ಮಾಸಿಕ ಕಂತನ್ನು ನಿರಂತರವಾಗಿ ಕಟ್ಟುವಂತೆ ಹಾಗೂ ಕಾಲಕಾಲಕ್ಕೆ ಗ್ರಾಹಕರಲ್ಲಿ ಅರಿವು ಮೂಡಿಸುವಲ್ಲಿ ಬ್ಯಾಂಕ್‌ ಸಿಬ್ಬಂದಿ ಸಕ್ರಿಯರಾಗುವಂತೆ ಸಲಹೆ ನೀಡಿದರು.

Advertisement

ಕೇಂದ್ರ ಸರ್ಕಾರ ಆಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ದೇಶದ 75 ಜಿಲ್ಲೆಗಳಲ್ಲಿ ಟಿಜಿಟಲ್‌ ಬ್ಯಾಂಕುಗಳನ್ನು ಆರಂಭಿಸಲು ಉದ್ದೇಶಿಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲೂ ಡಿಜಿಟಲ್‌ ಬ್ಯಾಂಕೊಂದನ್ನು ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

ಮುಂದಿನ ದಿನಗಳಲ್ಲಿ ಬ್ಯಾಂಕುಗಳಂತೆ ಅಂಚೆ ಇಲಾಖೆಯೂ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ಅನುಕೂಲವಾಗಲಿದೆ ಎಂದರು.

ಜಿಲ್ಲಾಧಿಕಾರಿ ಡಾ|ಸೆಲ್ವಮಣಿ ಮಾತನಾಡಿ, ಕೊಳಚೆ ಪ್ರದೇಶದಲ್ಲಿನ ನಿವಾಸಿಗಳು ಸ್ವಂತ ಮನೆ ನಿರ್ಮಿಸಿಕೊಳ್ಳಲು ಸಾಲಸೌಲಭ್ಯ ಪಡೆಯಲು ಇರುವ ಸಮಸ್ಯೆಗಳ ಕುರಿತು ಸಂಬಂಧಿಸಿದ ಬ್ಯಾಂಕ್‌ ಪ್ರಬಂಧಕರು ಹಾಗೂ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಇಂದಿನ ಹಾಗೂ ಹಿಂದಿನ ಸಭೆಗೆ ಸತತವಾಗಿ ಗೈರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಸುಪ್ರಿಯ ಬ್ಯಾನರ್ಜಿ, ಸಂದೀಪರಾವ್‌, ಬಿ.ರವಿ, ಯತೀಶ್‌ ಸೇರಿದಂತೆ ಜಿಲ್ಲೆಯ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರು, ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಅಧಿಕಾರಿಗಳು ಉಪಸ್ಥಿತರಿದ್ದರು.

 

ಅರ್ಹರಿಗೆ ಸಾಲಸೌಲಭ್ಯ ನೀಡುವಲ್ಲಿ ನಿರ್ಲಕ್ಷ್ಯ ಸಲ್ಲದು. ಹಾಗೂ ಸೌಲಭ್ಯಕ್ಕಾಗಿ ಬ್ಯಾಂಕುಗಳಿಗೆ ಬರುವ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ. ಸೌಲಭ್ಯ ಒದಗಿಸುವಲ್ಲಿ ಸಣ್ಣಪುಟ್ಟ ನ್ಯೂನತೆಗಳಿದ್ದಲ್ಲಿ ಅವುಗಳನ್ನು ಸರಿದೂಗಿಸಿಕೊಂಡು ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಿಕೊಟ್ಟು ಸಹಕರಿಸಿ. ಯಾವುದೇ ಅರ್ಜಿಗಳನ್ನು ಸಲ್ಲದ ನೆಪವೊಡ್ಡಿ ತಿರಸ್ಕರಿಸಬೇಡಿ.

- ಬಿ.ವೈ. ರಾಘವೇಂದ್ರ, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next