Advertisement
ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗಳ್ಳಿ ಅವರು, ಜೇವರ್ಗಿ ತಾಲೂಕಿನ ವಿಎಸ್‌ಎಸ್‌ಎನ್ ಸಂಘಗಳಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಗೆ ಒಳಪಡಿಸಲು ತನಿಖಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎನ್ನುವ ಆದೇಶ ಪತ್ರಗಳನ್ನು ತೋರಿಸಿ ಸ್ಪಷ್ಟ ಭರವಸೆ ನೀಡಿದ್ದರಿಂದ ಸತ್ಯಾಗ್ರಹ ಹಿಂದಕ್ಕೆ ಪಡೆಯಲಾಯಿತು.ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿ, ಬರೀ ತನಿಖೆಗೆ ಆದೇಶಿಸಿದರೆ ಸಾಲದು, ಮೊದಲು ಸಾಲ ಪಡೆದವರ ಜತೆಗೆ ಸಾಲ ಮನ್ನಾ ಆಗಿರುವ ರೈತರ ಪಟ್ಟಿಯನ್ನು ಸಂಘದ ನಾಮಫಲಕದಲ್ಲಿ ಪ್ರಕಟಿಸಬೇಕು. ತದನಂತರ ರೈತರ ಸಭೆ ಕರೆದು ತನಿಖೆ ನಡೆಸಬೇಕು.
Related Articles
Advertisement
ಮುಂಗಾರು-ಹಿಂಗಾರು ಎರಡೂ ಕೈ ಕೊಟ್ಟ ಪರಿಣಾಮ ವ್ಯಾಪಕ ಬರಗಾಲ ಬಿದ್ದು ಜನ ಗುಳೆ ಹೋಗುತ್ತಿದ್ದರೂ ಬರ ಕಾಮಗಾರಿ ಆರಂಭಿಸುತ್ತಿಲ್ಲ. ಕೆಲಸ ಆರಂಭಿಸಲು ಮುಹೂರ್ತ ಬೇಕೆ? ಜಿಲ್ಲಾ ಉಸ್ತುವಾರಿ ಸಚಿವರು ಬರ ಪರಿಸ್ಥಿತಿ ಅರಿಯಲೂ ಎಲ್ಲೂ ಹೋಗಿಲ್ಲ. ಮರಳು ಮಾಫಿಯಾ ಇನ್ನೂ ನಿಂತಿಲ್ಲ. ಜಿಲ್ಲಾಡಳಿತ ಬರೀ ಕಾಂಗ್ರೆಸ್ ನಾಯಕರನ್ನು ಓಲೈಸುವಲ್ಲಿ ತಲ್ಲೀನವಾಗಿದೆ ಎನ್ನುವಂತೆ ಭಾಸವಾಗುತ್ತಿದೆ. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ವಿವಿಧ ಹಂತದ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಹಾಪುರ ತಾಲೂಕಿನಲ್ಲೂ ಅವ್ಯವಹಾರ: ಡಿಸಿಸಿ ಬ್ಯಾಂಕ್‌ನ ಬೆಳೆ ಸಾಲ ವಿತರಣೆ ಹಾಗೂ ಸಾಲ ಮನ್ನಾದಲ್ಲಿ ಜೇವರ್ಗಿ ತಾಲೂಕಿನಲ್ಲಿ ಅವ್ಯವಹಾರವಾಗದೇ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಆಗಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿಯೂ ಅವ್ಯವಹಾರವಾಗಿದೆ.
ಇದಕ್ಕೆಲ್ಲ ಯಾರು ಹೊಣೆ? ಎಂಬುದು ಅಧಿಕಾರಿಗಳಿಗೆ ಗೊತ್ತಿದೆ. ಆದ್ದರಿಂದ ತನಿಖೆ ನಡೆಸಿ ಆಗಿರುವ ಲೋಪ ಸರಿಪಡಿಸಿ ಅಮಾಯಕ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ಬಿರಾದಾರ ಕಮಲಾಪುರ, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮುಖಂಡರಾದ ಹಣಮಂತ ಮಲಾಜಿ, ಮಂಜು ರೆಡ್ಡಿ ಮುಂತಾದವರಿದ್ದರು.
ಡಿಸಿಸಿ ಬ್ಯಾಂಕ್‌ನ ಬೆಳೆ ಸಾಲ ವಿತರಣೆ ಹಾಗೂ ಮನ್ನಾದಲ್ಲಿ ಅವ್ಯವಹಾರ ಆಗಿರುವ ಕುರಿತು ತನಿಖೆ ನಡೆಸುವ ಮುಖಾಂತರ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ರೈತಪರ ಕಾಳಜಿ ಎನ್ನುವುದನ್ನು ನಿರೂಪಿಸಲಿ. ಲಕ್ಷ ರೂ. ವರೆಗಿನ ಸಾಲ ಮನ್ನಾ ಘೋಷಣೆಯನ್ನು ಋಣಪತ್ರ ನೀಡುವುದರ ಮುಖಾಂತರ ಕಾರ್ಯಾನುಷ್ಠಾನಕ್ಕೆ ತರಲಿ. ಬಿ.ಜಿ. ಪಾಟೀಲ, ಬಿಜೆಪಿ ಮಹಾನಗರಾಧ್ಯಕ್ಷ, ಕಲಬುರಗಿ