Advertisement

ಸುಳ್ಯದಲ್ಲಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಿಗೆ ಸಮ್ಮಾನ

11:47 AM Nov 13, 2017 | |

ಸುಳ್ಯ: ಡಿಸಿಸಿ ಬ್ಯಾಂಕ್‌ನ ಬೆಳವಣಿಗೆಯಲ್ಲಿ ಸುಳ್ಯ ತಾಲೂಕಿನ ಪಾತ್ರ ಮಹತ್ವದ್ದು, ಸತತ 22 ವರ್ಷಗಳಿಂದ ಅಧಿಕ ಕೃಷಿ ಸಾಲ ಪಡೆಯುವುದರೊಂದಿಗೆ ಕ್ಲಪ್ತ ಸಮಯದಲ್ಲಿ ಮರುಪಾವತಿಸಿದ ಹೆಗ್ಗಳಿಕೆಯಿದೆ ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ. ಎನ್‌. ರಾಜೇಂದ್ರಕುಮಾರ್‌ ತಿಳಿಸಿದರು.

Advertisement

ಸುಳ್ಯ ಪುರಭವನದಲ್ಲಿ ರವಿವಾರ ಅಭಿನಂದನ ಸಮಿತಿ ವತಿಯಿಂದ ಜರಗಿದ ಕಾರ್ಯಕ್ರಮದಲ್ಲಿ ಅವರು ಅಭಿನಂದನೆ ಸ್ವೀಕರಿಸಿ, ಕೃಷಿಸೊತ್ತುಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಮೂಲಕ ಕೃಷಿಕರ ಜೀವನ ಭದ್ರತೆ ಕಾಪಾಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಮುಂದಾಗಬೇಕು ಎಂದರು.

ರಸಗೊಬ್ಬರ ಘಟಕ ಸ್ಥಾಪನೆ
ರಾಜ್ಯದಲ್ಲಿ 15 ಲಕ್ಷ ಟನ್‌ ಯೂರಿಯಾ ಗೊಬ್ಬರ ಬೇಡಿಕೆಯಿದೆ. ಆದರೆ ಮಂಗಳೂರಿನಲ್ಲಿ ಕೇವಲ 4 ಲಕ್ಷ ಟನ್‌ ಉತ್ಪಾದನೆಯಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ರಸಗೊಬ್ಬರ ತಯಾರಿಕೆ ಘಟಕವನ್ನು ಸರಕಾರದ ನೆರವಿನೊಂದಿಗೆ ಸ್ಥಾಪಿಸಲು ಚಿಂತನೆ ನಡೆದಿದೆ, ನವೋದಯ ಸಂಘದ ಸದಸ್ಯರಿಗೆ ಈ ಬಾರಿಯೇ ಅವರ ಇಚ್ಛೆಯನುಸಾರದ ಸಮವಸ್ತ್ರ ವಿತರಿಸಲಾಗುವುದು ಎಂದರು.

ನನ್ನ ರಕ್ತದಲ್ಲಿ ಸಹಕಾರ ಚಿಂತನೆ ಹರಿದಿದೆ. ಈ ಕ್ಷೇತ್ರ ಬಿಟ್ಟು ಎಲ್ಲಿಗೂ ಹೋಗಲಾರೆ. ಸದಸ್ಯರ ಪ್ರೀತಿ, ವಿಶ್ವಾಸಕ್ಕೆಬೆಲೆ ಕಟ್ಟಲಾಗದು. ನನ್ನೆಲ್ಲ ಬೆಳವಣಿಗೆ, ಸಾಧನೆಗಳಿಗೆ ನೀವೆ ಕಾರಣರಾಗಿದ್ದೀರಿ ಎಂದರು.

ರಾಜಕೀಯ ಅಭಿವೃದ್ಧಿಗೆ ಜಾತಿ,ಹಣ, ತೋಳ್ಬಲ ಕಾರಣವಾಗುತ್ತಿದೆ. ಇದಕ್ಕೆ ಮಿಗಿಲಾದ ದೇವರ ದಯೆ ಮತ್ತು ಸಹಕಾರಿಗಳ ಆಶೀರ್ವಾದ ನನ್ನ ಮೇಲಿದೆ. ಇದಕ್ಕಿಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ. ವ್ಯಕ್ತಿ ಉನ್ನತಿಗೇರಿದಂತೆ ತನ್ನ ಹಿಂದಡಿಯನ್ನು ನೆನಪಿಟ್ಟುಕೊಳ್ಳ ಬೇಕು. ಅದರಂತೆ ತನ್ನ ಬೆಳವಣಿಗೆಗೆ ಕಾರಣೀಕರ್ತರನ್ನು ಎಂದೂ ಮರೆಯುವುದಿಲ್ಲ ಎಂದು ತಿಳಿಸಿದರು.

Advertisement

ಭಾರತೀಯ ತತ್ತ್ವ 
ಉದ್ಘಾಟನೆ ನೆರವೇರಿಸಿ ಆಶೀರ್ವಚನ  ನೀಡಿದ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
ಅವರು, ನಾವು ಬೆಳೆಯುವುದರೊಂದಿಗೆ ಇನ್ನೊಬ್ಬರನ್ನು ಬೆಳೆಸುವ ಸಹಕಾರ ತತ್ತ್ವ ಭಾರತೀಯ ತತ್ತ್ವ . ಸಹಕಾರ ಸಂಸ್ಥೆಗಳು ಕೃಷಿಕರಿಗೆ ಹತ್ತಿರವಾದ ಬ್ಯಾಂಕ್‌ಗಳು. ಸಹಕಾರ ಸಂಸ್ಥೆ ಮೂಲಕ ರಾಜೇಂದ್ರ ಕುಮಾರ್‌ ಅವರು ಅಲ್ಪಾವಧಿಯಲ್ಲಿ ದೊಡ್ಡ ಸಾಧನೆ ಮಾಡಿರುವುದು ಉತ್ಕೃಷ್ಟವಾದುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್‌. ಅಂಗಾರ ಮಾತನಾಡಿ, ವ್ಯಕ್ತಿಯ ಗುಣಗಳಿಗೆ ಯಾರೂ ಮತ್ಸರಪಡಬಾರದು ಹಾಗೂ ಯಾವುದೇ ವ್ಯಕ್ತಿ ತನ್ನ ಕಾರ್ಯಕ್ಷೇತ್ರದ ಉದ್ದೇಶ ಮತ್ತು ಅದರ ಮಹತ್ವ ನೀಡಿದಷ್ಟೇ ತನ್ನ ಕಾರ್ಯಕ್ಷೇತ್ರವೂ ಮಹತ್ವ ವನ್ನು ಪಡೆದುಕೊಳ್ಳುತ್ತದೆ. ನಮ್ಮ ಕೆಲಸಗಳಲ್ಲಿ ಮಗ್ನರಾದಾಗ ವೃತ್ತಿ ಬಗ್ಗೆ ಪ್ರೀತಿ, ವಿಶ್ವಾಸ ಬರುತ್ತದೆ. ನಿಷ್ಠೆಯಿಂದ ಕಾರ್ಯ ನಿರ್ವಹಿಸಿದಾಗ ಫಲಪ್ರಾಪ್ತಿಯಾಗುತ್ತದೆ. ನಮ್ಮ ಉದ್ದೇಶಗಳ ಅಭಿಪ್ರಾಯಗಳನ್ನು ಮುಕ್ತವಾಗಿರಿಸಿ ಕೊಳ್ಳಬೇಕು. ಕೇವಲ ಅಧಿಕಾರಕ್ಕಾಗಿ ಹಾತೊರೆದಾಗ ಜಾತಿ, ಅಂತಸ್ತು ಮತ್ತಿತರ ವಿಚಾರಗಳು ನುಸುಳಿಕೊಳ್ಳುತ್ತವೆ ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ಎಸ್‌. ದೇವರಾಜ್‌ ಅಭಿನಂದನ ಭಾಷಣ ಮಾಡಿದರು. ಸಮಿತಿ ಕೋಶಾಧಿಕಾರಿ ಸಂತೋಷ್‌ ಕುತ್ತಮೊಟ್ಟೆ ಅಭಿನಂದನ ಪತ್ರ ವಾಚಿಸಿದರು. ಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಎಸ್‌.ಬಿ. ಜಯರಾಮ, ಶಶಿಕುಮಾರ್‌ ರೈ ಬಲ್ಯೊಟ್ಟು, ಜಿಲ್ಲಾ ಸಹಕಾರ ಯೂನಿಯನ್‌ ನಿರ್ದೇಶಕ ದಿವಾಕರ ರೈ ಪಿ.ಬಿ., ಡಿಸಿಸಿ ಬ್ಯಾಂಕ್‌ ಮಾಜಿ ಉಪಾಧ್ಯಕ್ಷ ಜಾಕೆ ಮಾಧವ ಗೌಡ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸುಳ್ಯ ಭೂಅಭಿವೃದ್ಧಿ ಬ್ಯಾಂಕ್‌ ಅಧ್ಯಕ್ಷ ಹರೀಶ್‌ ಕಂಜಿಪಿಲಿ ಮತ್ತಿತರಿದ್ದರು.

ಮೆರವಣಿಗೆ
ಕಾರ್ಯಕ್ರಮಕ್ಕೆ ಮೊದಲು ಜ್ಯೋತಿ ವೃತ್ತದಿಂದ ತೆರೆದ ವಾಹನದಲ್ಲಿ ಸಮ್ಮಾನಿತರನ್ನು ಮೆರವಣಿಗೆ ಮೂಲಕ ಚಂಡೆ
ವಾದ್ಯಗಳೊಂದಿಗೆ ಕಾರ್ಯ ಕ್ರಮಕ್ಕೆ ಕರೆತರಲಾಯಿತು. ಪೂರ್ಣ ಕುಂಭದೊಂದಿಗೆ ಸ್ವಾಗತಿ ಸಲಾಯಿತು. ವಿವಿಧ ಸಹಕಾರ ಸಂಸ್ಥೆಗಳ ಪ್ರಮುಖರಿಂದಲೂ ಗೌರವಾರ್ಪಣೆಗೆ ಅವಕಾಶ ಕಲ್ಪಿಸಲಾಯಿತು.

ಡಾ| ಎಂಎನ್‌ಆರ್‌ ಅವರು ಆದರ್ಶ: ದೇವರಾಜ್‌
ಡಿಸಿಸಿ ಬ್ಯಾಂಕ್‌ ನಿರ್ದೇಶಕ ಕೆ.ಎಸ್‌. ದೇವರಾಜ್‌, ಮಲೆ ನಾಡಿನಲ್ಲಿ ಸಹಕಾರದ ಬೇರು ಗಟ್ಟಿಯಾಗಿ ಬೇರೂರುತ್ತಿದೆ. ಡಾ| ರಾಜೇಂದ್ರಕುಮಾರ್‌ ಆದರ್ಶ ಸಹಕಾರಿ ಮಾತ್ರವಲ್ಲದೆ ಬಹುಮುಖಿ ವ್ಯಕ್ತಿತ್ವದ ನಾಯಕರು. ಡಿಸಿಸಿ ಬ್ಯಾಂಕ್‌ ನ್ನು ದೇಶದ ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಕಮ್ಮಿಯಿಲ್ಲದಂತೆ ಸಕಲ ಸೌಲಭ್ಯಕಲ್ಪಿಸಿ ಸುಸಜ್ಜಿತವಾಗಿ ಬೆಳೆಸುವಲ್ಲಿ ಅಪಾರ ಶ್ರಮಿಸಿದ್ದಾರೆ. ಸೇವಾತತ್ಪರತೆ, ದೃಢಮನಸ್ಸು, ಉನ್ನತ ವ್ಯಕ್ತಿಗಳಲ್ಲಿರುವಂತೆ ಸಾಮಾನ್ಯ ವ್ಯಕ್ತಿಯೊಂದಿಗಿನ ಒಡನಾಟದ ಧೀಮಂತ ವ್ಯಕ್ತಿತ್ವದಿಂದ ಸಾಧ್ಯವಾಗಿದೆ. ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುವ ಶ್ರೇಷ್ಠ ಸಹಕಾರಿಯಾಗಿ ಮೂಡಿಬರಲಿ ಎಂದು ಅಭಿನಂದನ ಭಾಷಣದಲ್ಲಿ ಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next