ಮುಂಬೈ: ಕಾರುಗಳ ವಿನ್ಯಾಸವನ್ನು ತ್ವರಿತವಾಗಿ ಬದಲಿಸುವುದರಲ್ಲಿ ಸಿದ್ಧಹಸ್ತ ಹೊಂದಿದೆ ಎಂಬ ಖ್ಯಾತಿಯಿರುವ ಡಿಸಿ2 ಡಿಸೈನ್ ಕಂಪನಿ, ಹೊಸತೊಂದು ಆವಿಷ್ಕಾರ ಮಾಡಿರುವುದಾಗಿ ಘೋಷಿಸಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾದ ಈ ಹೊತ್ತಿನಲ್ಲಿ, ವಾಹನ ಚಾಲಕ ಹಾಗೂ ಪ್ರಯಾಣಿಕರ ನಡುವೆ ಕನಿಷ್ಠ 6.2 ಅಡಿ ಅಂತರವಿರುವಂತೆ ಕಾರಿನ ಒಳಾವರಣ ವಿನ್ಯಾಸ ಮಾಡಲಾಗಿದೆ. ಹಾಗೆಯೇ ಯಾಂತ್ರೀಕೃತ ಸೋಂಕುನಾಶಕ ವ್ಯವಸ್ಥೆ (ಸ್ಯಾನಿಟೈಸೇಶನ್)ಯನ್ನು ಸಿದ್ಧಪಡಿಸಲಾಗಿದೆ. ಈ ರೀತಿಯ ವ್ಯವಸ್ಥೆಯಿರುವ ಭಾರತದ ಮೊದಲ ಕಾರನ್ನು ಸಿದ್ಧಪಡಿಸಿದ್ದೇನೆ ಎಂದು ಡಿಸಿ2 ಡಿಸೈನ್ ಪ್ರಕಟಿಸಿದೆ. ಅಂಬಾಸಿಡರ್ ಕಾರನ್ನು ವಿದ್ಯುತ್ ಚಾಲಿತ ಮಾಡಿದ್ದು ಇದೇ ಕಂಪನಿ ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಹೇಗೆ?: ಕಾರಿನ ಎರಡೂ ಬದಿಗಳಲ್ಲಿ, ಹಾಗೆಯೇ ಮೇಲ್ಭಾಗದಲ್ಲಿ ಯಾಂತ್ರೀಕೃತ ಕ್ರಿಮಿನಾಶಕ ವ್ಯವಸ್ಥೆಯಿದೆ. ಪ್ರತೀ 20 ನಿಮಿಷಕ್ಕೊಮ್ಮೆ ಅದು ಸಿಂಪಡಣೆಯಾಗುತ್ತಲೇ
ಇರುತ್ತದೆ. ಇದರಿಂದ ಸ್ವಚ್ಛತೆ ಸಾಧ್ಯ. ಹಾಗೆಯೇ ಚಾಲಕ ಮತ್ತು ಪ್ರಯಾಣಿಕರ ನಡುವೆ ಅಂತರ ಕಾಯ್ದುಕೊಳ್ಳಲು ಚರ್ಮ ಮತ್ತು ಗಾಜಿನ ಪರದೆಯನ್ನೂ ಅಳವಡಿಸಲಾಗಿದೆ.