Advertisement
ನೂತನ ತಾಲೂಕು ಯರಗಟ್ಟಿಯ ಮುಗಳಿಹಾಳ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಸುವ ಮೂಲಕ ಹೊಸ ತಾಲೂಕಿನ ಜನರ ಅಹವಾಲು, ದೂರು-ದುಮ್ಮಾನುಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ಪ್ರಯತ್ನ ನಡೆಸಿದ ಅವರು ಯರಗಟ್ಟಿಯಲ್ಲಿ ಹೊಸ ತಹಶೀಲ್ದಾರ್ ಕಚೇರಿ, ನ್ಯಾಯಾಲಯ ನಿರ್ಮಾಣಕ್ಕೆ ತಲಾ ಹತ್ತು ಎಕರೆ ಜಾಗವನ್ನು ನೀಡಲಾಗಿದೆ. ಅದೇ ರೀತಿ ತಾಪಂ ಕಚೇರಿಯ ನಿರ್ಮಾಣಕ್ಕೆ ಕೂಡ ಈಗಾಗಲೇ ಜಾಗೆ ಗುರುತಿಸಲಾಗಿದೆ ಎಂದರು.
Related Articles
Advertisement
ಮುಗಳಿಹಾಳ-ಇಟ್ನಾಳ ರಸ್ತೆ: ಮುಗಳಿಹಾಳ-ಇಟ್ನಾಳ ಗ್ರಾಮದ ಮಧ್ಯೆದ ಹೊಲಕ್ಕೆ ಹಾಗೂ ಶಾಲಾ ಮಕ್ಕಳಿಗೆ ದಾರಿ ಇಲ್ಲ ಎಂಬ ಮೊದಲ ದೂರು ಆಲಿಸಿದ ಜಿಲ್ಲಾಧಿಕಾರಿಗಳು ಗ್ರಾಮನಕಾಶೆ ಪರಿಶೀಲಿಸಿ ಸಣ್ಣ ನೀರಾವರಿ ಇಲಾಖೆಯ ವತಿಯಿಂದ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಿಡ್ಜ್-ಕಂ ಬ್ಯಾರೇಜ್ ನಿರ್ಮಾಣಕ್ಕೆ ಶಾಸಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಇದಕ್ಕೆ ಅನುಮೋದನೆ ಸಿಕ್ಕ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಎಂದರು.
ಅಂಗನವಾಡಿ ಕೇಂದ್ರ: ತೋಟಪಟ್ಟಿಯಲ್ಲಿ ಮಕ್ಕಳಿದ್ದರೆ ಅವರ ಸಂಖ್ಯೆಯನ್ನು ಆಧರಿಸಿ ಹೊಸ ಅಂಗನವಾಡಿ ಕೇಂದ್ರಗಳನ್ನು ಆರಂಭಿಸಲು ಕೂಡಲೇ ಸಮೀಕ್ಷೆ ಮಾಡಿ ಸರಕಾರಕ್ಕೆ ಪ್ರಸ್ತಾವನೆ ಕಳಿಸಬೇಕು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಿದರು.
ಮುಗಳಿಹಾಳ ಗ್ರಾಮದ 90ಕ್ಕಿಂತ ಅಧಿಕ ಕುಟುಂಬಗಳಿಗೆ ನಿವೇಶನವಿಲ್ಲ. ಅದೇ ರೀತಿ ಒಟ್ಟಾರೆ 344 ವಸತಿ ರಹಿತರಿಗೆ ಮನೆಯನ್ನು ಒದಗಿಸಲು ಅಗತ್ಯ ಜಮೀನನ್ನು ಗ್ರಾಪಂಗೆ ಒದಗಿಸಲಾಗುವುದು. ನಂತರ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗುವುದು ಎಂದರು.
ಮನೆಹಾನಿಯಾಗಿ ಎರಡು ವರ್ಷ ಕಳೆದರೂ ಕೊನೆಯ ಕಂತಿನ ಪರಿಹಾರ ಬಂದಿಲ್ಲ ಎಂದು ಗ್ರಾಮದ ಹಿರಿಯರೊಬ್ಬರು ಜಿಲ್ಲಾಧಿಕಾರಿಗಳ ಗಮನಸೆಳೆದರು. ಇದರ ಬಗ್ಗೆ ತಹಶೀಲ್ದಾರರನ್ನು ವಿಚಾರಿಸಿದ ಜಿಲ್ಲಾಧಿಕಾರಿಗಳು ಜಿಪಿಎಸ್ ಹಂತದಲ್ಲಿ ಅರ್ಜಿ ಇತ್ಯರ್ಥ ಬಾಕಿ ಉಳಿದಿದ್ದು, ಕೂಡಲೇ ಅದನ್ನು ಇತ್ಯರ್ಥ ಪಡಿಸಲಾಗುತ್ತದೆ ಎಂದು ಹೇಳಿದರು.
ಗ್ರಾಮಸಭೆಗೆ ಆಗ್ರಹ: ಕಳೆದ ಎರಡು ವರ್ಷಗಳಿಂದ ಮುಗಳಿಹಾಳ ಗ್ರಾಮ ಪಂಚಾಯತಿ ಸಭೆಯನ್ನು ಕರೆದಿಲ್ಲ. ಇದಕ್ಕೆ ಸಂಬಂಧಿಸಿದವರು ಉತ್ತರಿಸಬೇಕು. ಗ್ರಾಮಸಭೆ ನಡೆಯದಿರುವುದರಿಂದ ಅನೇಕ ಕೆಲಸ ಬಾಕಿ ಉಳಿದಿವೆ. ಆದ್ದರಿಂದ ಕೂಡಲೇ ಗ್ರಾಮಸಭೆ ನಡೆಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಪಂ ಅಧ್ಯಕ್ಷೆ ಮಹಾನಿಂಗವ್ವ ಬಸಪ್ಪ ಮಾಯನ್ನಿ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈಗಾಗಲೇ ವಿಶೇಷ ಗ್ರಾಮಸಭೆಯನ್ನು ಮಾಡಲಾಗಿದೆ. ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 23ಕ್ಕೆ ಗ್ರಾಮ ಸಭೆ ಕರೆಯಲಾಗುತ್ತದೆ ಎಂದು ತಿಳಿಸಿದರು.
ತಹಶೀಲ್ದಾರ್ ಎಂ.ಎನ್.ಮಠದ ಸ್ವಾಗತಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹಾನಿಂಗವ್ವ ಬಸಪ್ಪ ಮಾಯನ್ನಿ, ಜಿಪಂ ಸಿಇಒ ದರ್ಶನ್, ಗ್ರಾಪಂ ಉಪಾಧ್ಯಕ್ಷ ಅಶೋಕ ಪಟ್ಟಣಶೆಟ್ಟಿ, ತಾಪಂ ಇಒ ಯಶವಂತಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ| ಮಹೇಶ್ ಚಿತ್ತರಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ವಿ. ಕರೀಕಟ್ಟಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಾಂಚನಾ ಆಮ್ಟೆ ಉಪಸ್ಥಿತರಿದ್ದರು.
ಅತಿಕ್ರಮಣ ತೆರವಿಗೆ ಸೂಚನೆ
ಪಕ್ಕದ ದಾಸನಾಳ ಗ್ರಾಮದಲ್ಲಿರುವ ಮೂರು ಎಕರೆ ಸ್ಮಶಾನಭೂಮಿ ಅತಿಕ್ರಮಣಗೊಂಡಿದ್ದು, ಅದನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು ರಸ್ತೆ, ವಸತಿ ಸೌಲಭ್ಯ, ಪ್ರವಾಹದಿಂದ ಹಾನಿಯಾದ ಮನೆಗಳಿಗೆ ಪರಿಹಾರ, ವಿದ್ಯುತ್ ಸಂಪರ್ಕ, ಅಂಗನವಾಡಿ ಕೇಂದ್ರ ಆರಂಭಿಸುವುದು, ಸ್ಮಶಾನಭೂಮಿ, ಅಕ್ರಮ ಸಾರಾಯಿ ಮಾರಾಟ ತಡೆ ಸೇರಿದಂತೆ ವಿವಿಧ ರೀತಿಯ ಬೇಡಿಕೆಗಳನ್ನು ಪರಿಶೀಲಿಸಿದರು.