Advertisement

ಪಲಿಮಾರು: ಜಿಲ್ಲಾಧಿಕಾರಿ ಭೇಟಿ, ಗ್ರಾಮ ವಾಸ್ತವ್ಯ :ಜನರ ಅಹವಾಲಿಗೆ ಅಧಿಕಾರಿಗಳ ಪ್ರತಿಸ್ಪಂದನೆ

11:25 PM Feb 20, 2021 | Team Udayavani |

ಪಡುಬಿದ್ರಿ: ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿರುವ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಂತೆ ಉಡುಪಿ ಜಿಲ್ಲೆಯ ಪಲಿಮಾರಿನಲ್ಲೂ ಶನಿವಾರದಂದು ನಡೆದಿದ್ದು ಅಪರ ಜಿಲ್ಲಾಧಿಕಾರಿ, ಸಹಾಯಕ ಕಮಿಷನರ್‌ಗಳ ತ್ವರಿತ ಅರ್ಜಿ ವಿಲೇವಾರಿ ಸಭೆಗೆ ಲೋಕೋಪಯೋಗಿ, ಆರ್‌ಟಿಒ, ಆರೋಗ್ಯ, ಮೆಸ್ಕಾಂ ಹಾಗೂ ಹೆದ್ದಾರಿ ಇಲಾಖೆಗಳೇ ಗೈರಾಗಿದ್ದವು.

Advertisement

ಪಹಣಿ ಪತ್ರ ದಾಖಲಿಸಲು ಆದೇಶ
ಗೃಹ ಸಚಿವರು, ನ್ಯಾಯಾಧೀಶರು ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲೇ ಇಂದಿಗೇ ನಿಗದಿಯಾಗಿದ್ದ ಈ ಮಹತ್ವಾಕಾಂಕ್ಷಿ ಸಭೆಯಲ್ಲಿ ಸಾರ್ವಜನಿಕ ಸುಮಾರು 40 ಅರ್ಜಿಗಳು ಪೌತಿ ಖಾತೆ ವಿಚಾರದಲ್ಲಿ ಅಧಿಕಾರಿಗಳ ಸಮಕ್ಷಮ ಬಂದಿದ್ದು ಎಲ್ಲವುಗಳ ವಿಚಾರಣೆಯನ್ನು ಅಧಿಕಾರಿಗಳು ನಡೆಸಿದರು. ಮುಂದೆ ಅವರ ಹೆಸರಿಗೆ ಪಹಣಿ ಪತ್ರ ದಾಖಲಿಸಲು ಆದೇಶಿಸಲಾಗಿದೆ.

ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಕುಂದಾಪುರ ಎಸಿ ಕೆ. ರಾಜು ಅವರೊಂದಿಗೆ ಪಲಿಮಾರು ಗ್ರಾ.ಪಂ. ಬಳಿಯ ಅಂಗನವಾಡಿ ಕೇಂದ್ರವನ್ನು ವೀಕ್ಷಿಸಿದರು. ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ನೀಡಿದ ಮನವಿಯೊಂದನ್ನೂ ಪರಿಶೀಲಿಸುವುದಾಗಿ ಹೇಳಿದರು.

ಗ್ರಾಮ ವಾಸ್ತವ್ಯ ಉದ್ಘಾಟನೆ
ಪಡುಬಿದ್ರಿ: ಕರ್ನಾಟಕ ಸರಕಾರದ ಕಂದಾಯ ಇಲಾಖೆ ಮೂಲಕ ರಾಜ್ಯದ ಜನತೆಗಾಗಿ ಆರಂಭಿಸಲಾಗಿರುವ ಕಾರ್ಯ ಕ್ರಮವೇ

ಜಿಲ್ಲಾಧಿಕಾರಿಗಳ “ಗ್ರಾಮ ವಾಸ್ತವ್ಯ’ ಕಾರ್ಯಕ್ರಮವೆಂದು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹೇಳಿದರು.
ಅವರು ಫೆ. 20ರಂದು ಪಲಿಮಾರು ಗ್ರಾ.ಪಂ. ಸಭಾಭವನದಲ್ಲಿ ಸರಕಾರದ ಪ್ರಮುಖ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯವನ್ನು ಉದ್ಘಾಟಿಸಿ ಮಾತನಾಡಿದರು.

Advertisement

ಸಭೆಗೂ ಮುನ್ನ ಅಪರ ಜಿಲ್ಲಾಧಿಕಾರಿ ಅವರು ಪಲಿಮಾರು ಗ್ರಾಮದ ಸರಕಾರಿ ಪ್ರೌಢಶಾಲೆ ಹಾಗೂ ಸರಕಾರಿ ಪ.ಪೂ. ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ನಡೆಸಿದರು.

ಬೆಳಗ್ಗಿನ ಈ ಸಭೆಯು ಜಿಲ್ಲಾಧಿಕಾರಿಯವರು ಆಗಮಿಸದೇ ಇದ್ದರೂ ಒಂದು ಗಂಟೆ ವಿಳಂಬವಾಗಿ ನಡೆಯಿತು. ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಲಾಯಿತು. ನ್ಯಾಯಾಲಯದ ಮುಂದಿರುವ ವಿವಾದಗಳು ಇತ್ಯರ್ಥದ ಬಳಿಕಷ್ಟೇ ತೀರ್ಮಾನ ವಾಗುವಂತಹ ಅರ್ಜಿಗಳನ್ನು ಅರ್ಜಿದಾರರಿಗೆ ಮಾಹಿತಿ ನೀಡಿ ವಿಲೇಗೊಳಿಸಲಾಯಿತು.

ಸಭಾಧ್ಯಕ್ಷತೆಯನ್ನು ಪಲಿಮಾರು ಗ್ರಾ. ಪಂ. ಅಧ್ಯಕ್ಷೆ ಗಾಯತ್ರಿ ಪ್ರಭು ವಹಿಸಿದ್ದರು. ಕುಂದಾಪುರದ ಸಹಾಯಕ ಕಮಿಷನರ್‌ ಕೆ. ರಾಜು, ಪ್ರೊಬೆಶನರಿ ಎಸಿ ಪ್ರತಿಭಾ, ಉಪಾಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಜಿ. ಪಂ. ಸದಸ್ಯ ಶಶಿಕಾಂತ್‌ ಪಡುಬಿದ್ರಿ, ತಾ. ಪಂ. ಸದಸ್ಯ ದಿನೇಶ್‌ ಕೋಟ್ಯಾನ್‌, ಭೂ ದಾಖಲೆಗಳ ಉಪ ನಿರೀಕ್ಷಕ ರವೀಂದ್ರ, ಕಂದಾಯ ಇಲಾಖಾ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.ಕಾಪು ತಹಶೀಲ್ದಾರ್‌ ಪ್ರದೀಪ್‌ ಕುಡೇìಕರ್‌ ಸ್ವಾಗತಿಸಿದರು. ಅಲೆನ್‌ ಕರ್ನೆಲಿಯೋ ಕಾರ್ಯಕ್ರಮ ನಿರ್ವಹಿಸಿದರು.

ಭಾಗ್ಯಲಕ್ಷ್ಮಿ ಬಾಂಡ್‌
ಸಭೆಯಲ್ಲಿ 11 ಭಾಗ್ಯಲಕ್ಷ್ಮಿ ಬಾಂಡ್‌ಗಳನ್ನು ವಿತರಿಸಲಾಯಿತು. ಇದೇ ಸಭೆಯಲ್ಲಿ ಸಾರ್ವಜನಿಕರಿಂದ ವಿವಿಧ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ನ್ಯಾಯಾಲಯದಲ್ಲಿ ಬಾಕಿ ಇರುವ ತಗಾದೆಗಳ ಕುರಿತಾಗಿ ನ್ಯಾಯಾಲಯದ ಆದೇಶ ಹೊರಬಂದ ಬಳಿಕಷ್ಟೇ ವಿಲೇವಾರಿ ಸಾಧ್ಯವೆಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಕಲಾಂಗ ದಿನೇಶ್‌ ಅವರಿಗೆ ತ್ರಿಚಕ್ರ ವಾಹನದ ಬೇಡಿಕೆಯಿದ್ದು ಆರ್‌ಟಿಒ ಅಧಿಕಾರಿ ಗೈರಿನಿಂದಾಗಿ ಅರ್ಜಿ ವಿಲೇವಾರಿಯನ್ನು ಮುಂದೂಡಲಾಯಿತು. ಅಡ್ವೆಯ ಜಯರಾಮ ಸುವರ್ಣ ಎಂಬ ಹಿರಿಯ ನಾಗರಿಕರು ವೇದಿಕೆಯನ್ನು ಹತ್ತಲಾಗದಿದ್ದಾಗ ಅಪರ ಜಿಲ್ಲಾಧಿಕಾರಿ ಹಾಗೂ ಕುಂದಾಪುರದ ಸಹಾಯಕ ಕಮಿಷನರ್‌ ಅವರು ವೇದಿಕೆಯಿಂದ ಇಳಿದು ಬಂದು ಅವರ ಹೇಳಿಕೆ ಪಡೆದುಕೊಂಡರು.

ಹೆದ್ದಾರಿ ಬದಿಯ ಮನೆಗಳಲ್ಲಿ ಬಿರುಕು
ರಾಜ್ಯ ಹೆದ್ದಾರಿ ಸಮೀಪದಲ್ಲಿನ ನಿವಾಸಿಗಳ ಮನೆಗಳು, ಅಡ್ವೆ ಗರಡಿ ಮುಂತಾದ ಆರಾಧನಾ ತಾಣಗಳು ಹೆದ್ದಾರಿಯಲ್ಲಿನ ಹಂಪ್ಸ್‌, ಕ್ರಿಬ್ಸ್ ಗಳಲ್ಲಿ ಘನ ವಾಹನಗಳು ಸಂಚರಿಸುವ ವೇಳೆ ಉಂಟಾಗುವ ಕಂಪನಗಳಿಂದಾಗಿ ಬಿರುಕುಬಿಟ್ಟಿದ್ದು ಇವುಗಳ ವಿಚಾರಣೆಗೆ ಲೋಕೋಪಯೋಗಿ ಇಲಾಖಾ ಅಧಿಕಾರಿಗಳೇ ಗೈರಾಗಿದ್ದರು.

ಅನಧಿಕೃತ ಜಾಹೀರಾತು ಫಲಕ ತೆರವು
ಹೆದ್ದಾರಿ ಬದಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗುತ್ತಿರುವ ಜಾಹೀರಾತು ಫಲಕವನ್ನು ಆಯಾಯ ಕಂಪೆನಿಗಳ ಮೊಬೈಲ್‌ ಸಂಖ್ಯೆಗಳನ್ನು ಸಂಪರ್ಕಿಸಿ ತೆಗೆಸಲು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಪಲಿಮಾರು ಪಿಡಿಒ ಸತೀಶ್‌ ಅವರಿಗೆ ಆದೇಶಿಸಿದರು.

ಅಪಾಯಕಾರಿ ಮರಗಳ ತೆರವು
ಹೈಟೆನ್ಶನ್‌ ವಿದ್ಯುತ್‌ ತಂತಿ ಮೂಲಕ ಬೆಂಕಿ ಕಿಡಿಗಳು ಹಾರಿ ಅಗ್ನಿ ಅನಾಹುತದಿಂದಾಗಿ ನಾಶವಾಗುತ್ತಿರುವ ಅರಣ್ಯ ಇಲಾಖೆಗೆ ಸಂಬಂಧಿಸಿದ ಮರಗಳನ್ನು ತತ್‌ಕ್ಷಣ ಕಡಿಸಿ ತೆರವುಗೊಳಿಸಲೂ ಆದೇಶಿಸಲಾಯಿತು.

ರೈಲು ನಿಲ್ದಾಣಕ್ಕೆ ಸಾರ್ವಜನಿಕ ರಸ್ತೆ
ಪಲಿಮಾರು ಸರಕಾರಿ ಪ. ಪೂ. ಕಾಲೇಜು ಹಿಂಭಾಗದ ಲೆವೆಲ್‌ ಕ್ರಾಸಿಂಗ್‌ನಿಂದ ನಂದಿಕೂರು ರೈಲು ನಿಲ್ದಾಣಕ್ಕೆ ಸಾರ್ವಜನಿಕ ರಸ್ತೆ ಬೇಡಿಕೆ, ನಂದಿಕೂರು ಆನಡ್ಕ ಮೂಲಕ ನಂದಿಕೂರು ರೈಲು ನಿಲ್ದಾಣ ಸಂಪರ್ಕ ರಸ್ತೆ ಬೇಡಿಕೆಗಳನ್ನು ಸಕಾರಾತ್ಮಕವಾಗಿ ವಿಲೇಗೊಳಿಸಲು ಪ್ರಯತ್ನಿಸುವುದಾಗಿ ಅಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಮನೆ ನಿವೇಶನಗಳ ಅರ್ಜಿ ವಿಲೇವಾರಿ
ಮನೆ ನಿವೇಶನಗಳ ಸುಮಾರು 350ಕ್ಕೂ ಹೆಚ್ಚು ಅರ್ಜಿಗಳಿದ್ದು ಅವುಗಳ ವಿಲೇವಾರಿಗಾಗಿ ಆದ್ಯತೆಯ ಮೇಲೆ ವಿಶೇಷ ಗಮನಹರಿಸಲಾಗುವುದೆಂದು ಈ ಕುರಿತಾಗಿ ಅರ್ಜಿ ನೀಡಿ ಪ್ರಶ್ನಿಸಿದ್ದ ಗ್ರಾ.ಪಂ. ಮಾಜಿ ಅಧ್ಯಕ್ಷ ಜಿತೇಂದ್ರ ಫುರ್ಟಾಡೋ ಅವರಿಗೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು ಭರವಸೆಯಿತ್ತರು.

Advertisement

Udayavani is now on Telegram. Click here to join our channel and stay updated with the latest news.

Next