Advertisement

ಹಳ್ಳಿ ಜನರ ಸಮಸ್ಯೆಗೆ ಜಿಲ್ಲಾಧಿಕಾರಿ ಸ್ಪಂದನೆ

05:31 PM Feb 21, 2021 | Team Udayavani |

ದೇವರಹಿಪ್ಪರಗಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮ ತಾಲೂಕಿನ ಬೊಮ್ಮನಜೋಗಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಗ್ರಾಮಸ್ಥರು ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಹಂತದ ಎಲ್ಲ ಅಧಿಕಾರಿಗಳನ್ನು ಸಿಂಗರಿಸಿದ ಎತ್ತಿನ ಬಂಡಿಯಲ್ಲಿ ಕುಳ್ಳಿರಿಸಿ ಮೆರವಣಿಗೆಯೊಂದಿಗೆ ಮಹಿಳೆಯರು ಆರತಿ ಮಾಡಿ ಸ್ವಾಗತಿಸಿದರು.

Advertisement

ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಊರಿನಲ್ಲಿನ ಮಠದ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ನೇರವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿದರು. ಹತ್ತಾರು ಜನ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಆಶ್ರಯ ಮನೆಗಳು ಸಿಕ್ಕಿಲ್ಲ, ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿವೆ ಎಂದು ಅಳಲು ತೋಡಿಕೊಂಡರು. ಮಾರ್ಗ ಮಧ್ಯೆ ಮಹಿಳೆ ಪಾರ್ವತಿ ಬಿರಾದಾರ ಜಿಲ್ಲಾಧಿಕಾರಿಗೆ ಕಾಲಿಗೆ ಬಿದ್ದು, ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿ ಎಂದು ಗೋಗರೆದರು. ತಕ್ಷಣ ಸ್ಪಂದಿಸಿದ ಡಿಸಿ, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

ನಂತರ ಗ್ರಾಮದ ಹನುಮಾನ ಮಂದಿರದಲ್ಲಿ ಸಭೆ ನಡೆಸಿದ ಜಿಲ್ಲಾ ಧಿಕಾರಿ ಪಿ. ಸುನೀಲಕುಮಾರ ಕಾರ್ಯಕ್ರಮದ ರೂಪುರೇಷೆ ತಿಳಿಸಿದರು. ಬೊಮ್ಮನಜೋಗಿಯಿಂದ ತಾಂಡಾಕ್ಕೆ ಆಗಮಿಸಿ ತಾಂಡಾದ ಸೇವಾಲಾಲ್‌ ಮಂದಿರ ಹತ್ತಿರದ ಹಳೆಯ ಅಂಗನವಾಡಿ ಕಟ್ಟಡ ಪರಿಶೀಲಿಸಿ ಸ್ಥಳದಲ್ಲಿದ್ದ ಜಿಪಂ ಸಿಇಒ ಅವರಿಗೆ ನರೇಗಾ ಯೋಜನೆಯಲ್ಲಿ ನಿರ್ಮಿಸಲು ಸೂಚಿಸಿದರು.

ತಾಂಡಾದ ಶಾಲಾ ಆವರಣದಲ್ಲಿ ಕಿಕ್ಕಿರಿದು ಸೇರಿದ ಸಾರ್ವಜನಿಕರು ಡಿಸಿ ಸಭೆಯ ಕಡೆಗೆ ಚಿತ್ತ ನೆಟ್ಟಿದ್ದರು. ಸಭೆ ಪ್ರಾರಂಭಿಸಿದ ಕೂಡಲೇ ಈಗಾಗಲೇ ಸಲ್ಲಿಸಲಾದ ಅಹವಾಲುಗಳ ಮೇಲೆ ಎಲ್ಲ ಅಧಿ ಕಾರಿಗಳ  ಮೂಲಕ ಉತ್ತರ ಕೊಡಿಸಿದರು. ಸ್ವತಃ ತಾವೇ ಮುಂದೆ ನಿಂತು ಉತ್ತರ ನೀಡಿದರು. ಶಾಂತಚಿತ್ತದಿಂದ ಉತ್ತರ ನೀಡಿ ಕೆಲಸ ಆಗುವವರೆಗೆ ನಾನು ನಿಗಾ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಮದ ಸಮಸ್ಯೆಗಳ ಅಹವಾಲುಗಳ ಕುರಿತು ಮಾತನಾಡಿದ ಡಿಸಿ, 55 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ವೃದ್ಧಾಪ್ಯ, ವಿಧವಾ ವೇತನ, ವಿಕಲಚೇತನರ ಮಾಸಾಶನದಂಥ ಕಂದಾಯ ಇಲಾಖೆಗೆ ಸೇರಿದ 19 ಅರ್ಜಿಗಳಿವೆ. ಕಾನೂನು ಪರಿದಿಯಲ್ಲಿ ಇತ್ಯರ್ಥಕ್ಕೆ ಅರ್ಹ ಇರುವ ಎಲ್ಲ ಸಮಸ್ಯೆಗಳಿಗೂ ಪರಿಹಾರಕಂಡು ಕೊಡುವುದಾಗಿ ಭರವಸೆ ನೀಡಿದರು.

Advertisement

ಈ ವೇಳೆ ಎಲ್ಲರೂ ಸನ್ಮಾನ ಮಾಡಲು ಮುಂದಾದಲು ಇದಕ್ಕೆ ಆಕ್ಷೇಪಿಸಿದ ಜಿಲ್ಲಾಧಿಕಾರಿ ಸುನಿಲಕುಮಾರ, ಸನ್ಮಾನ ಮಾಡಿ ಸಮಯ ಹಾಳು ಮಾಡಬೇಡಿ. ನಿಮ್ಮೂರಿಗೆ ಅ ಧಿಕಾರಿಗಳೊಂದಿಗೆ ನಾನು ಬಂದಿರುವುದು ಸನ್ಮಾನ ಮಾಡಿಸಿಕೊಳ್ಳಲು ಅಲ್ಲ. ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾವೆಲ್ಲ ಅಭಾರಿಯಾಗಿದ್ದೇವೆ. ಹೀಗಾಗಿ ನೀವು ಮೊದಲು ನಿಮ್ಮ ಗ್ರಾಮದ ಸಮಸ್ಯೆಗಳಿದ್ದರೆ ಹೇಳಿ ಎಂದರು.

ಗ್ರಾಮಕ್ಕೆ ಬಸ್‌ ಸಂಚಾರ, ಶೌಚಾಲಯ ನಿರ್ಮಾಣ, ಶಾಲೆಯ ಜಾಗೆ ಸರ್ವೇ ಮಾಡಿ ನೀಡುವುದು. ಪಿಂಚಣಿಯ ಆದೇಶ ಪತ್ರ ನೀಡಿದರು. ಸರಕಾರಿ ಪ್ರೌಢಶಾಲೆ ಮಂಜೂರು, ಪಶು ಆಸ್ಪತ್ರೆ ನಿರ್ಮಾಣ, ಬೊಮ್ಮನಜೋಗಿ ಕನ್ನೊಳ್ಳಿ ರಸ್ತೆ ಮಾಡುವುದು ರೈತರ ಪಂಪ್‌ಸೆಟ್‌ಗೆ ಸರಿಯಾದ ವಿದ್ಯುತ್‌ ನೀಡುವ ಕುರಿತು ಸಮಸ್ಯೆ ಜೋರಾಗಿ ಚರ್ಚೆ ನಡೆಯಿತು. ಅಂಗವಿಕಲ ವೇತನ ವಿಧವಾ ವೇತನ, ವೃದ್ಧಾಪ್ಯ ವೇತನ ಗ್ರಾಮಸಭೆ ನಡೆಸಲು ತಿಳಿಸುವುದು. ಪರಿಶಿಷ್ಟ ಜನಾಂಗದವರಿಗೆ ಸ್ಮಶಾನ ಜಾಗೆ ಹಾಗೂ ಡಾ.ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲು ಮನವಿ ಮಾಡಿದರು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಎಲ್ಲ ಅ ಧಿಕಾರಿಗಳು ಹಾಜರಿದ್ದು, ಉತ್ತರ ನೀಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು.

ಲಿಂಬೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಸರಕಾರ ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಸರಕಾರಿ ಕಚೇರಿಗಳಿಗೆ ತಪ್ಪಿಸುವ ಉದ್ದೇಶಕ್ಕಾಗಿ  ಇಂತಹ ಕಾರ್ಯಕ್ರಮ ಆಯೋಜಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಜಿಪಂ ಸಿಎಸ್‌ ಗೋವಿಂದರೆಡ್ಡಿ, ಎಸಿ ರಾಹುಲ್‌ ಶಿಂಧೆ, ತಹಶೀಲ್ದಾರ ಬಿ.ಎಸ್‌. ಕಡಕಬಾವಿ, ಸಮಾಜ ಕಲ್ಯಾಣ ಅ ಧಿಕಾರಿ ರಾಮನಗೌಡ ಕನ್ನೊಳ್ಳಿ, ಇಒ ಸುನೀಲ ಮದ್ದಿನ, ಬಿಇಒ ಎಚ್‌.ಎಸ್‌. ನಗನೂರ, ಗೋಪಾಲ ಮಾಲಗತ್ತಿ, ಎನ್‌. ರಾಘವೇಂದ್ರ, ಅಂಚೆ ನಿರೀಕ್ಷಕರು ಮಲ್ಲಿಕಾರ್ಜುನ ಕಲಶೆಟ್ಟಿ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next