ಹಾವೇರಿ: ಕೋವಿಡ್ 19 ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಸೀಲ್‌ಡೌನ್ ಮಾಡಿದ ಸವಣೂರಿಗೆ ಮಂಗಳವಾರ ಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ನಿಯಂತ್ರಣ ಕ್ರಮ ಪರಿಶೀಲಿಸಿತು.
ಅಲ್ಲಿನ ಜನರೊಂದಿಗೆ ಸಮಾಲೋಚನೆ ನಡೆಸಿದ ಡಿಸಿ ಕೃಷ್ಣ ಭಾಜಪೇಯಿ, ಜನರಲ್ಲಿ ಆತ್ಮವಿಶ್ವಾಸ ತುಂಬಿ, ಧೈರ್ಯದಿಂದ ಪರಿಸ್ಥಿತಿ ಎದುರಿಸುವಂತೆ ತಿಳಿಸಿದರು. ಬಳಿಕ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ, 34 ಹಾಸಿಗೆಯುಳ್ಳ ಕೋವಿಡ್ 19 ಆಸ್ಪತೆಯ ಪ್ರವೇಶದ್ವಾರ ಪ್ರತ್ಯೇಕಿಸಿ, ಪ್ರಥಮ ಮಹಡಿಯಲ್ಲಿ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕಂಟೇನ್ಮೆಂಟ್ ಪ್ರದೇಶದ 394 ಮನೆಗಳ 1789 ಜನರಿಗೆ ದಿನನಿತ್ಯದ ಆಹಾರದ ಕಿಟ್, ಉಚಿತವಾಗಿ ಹಾಲು, ಔಷಧ, ಶುದ್ಧ ಕುಡಿಯುವ ನೀರು ಒದಗಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿನಿತ್ಯ ಎರಡು ಬಾರಿ ಸಂಪೂರ್ಣ ಪ್ರದೇಶಕ್ಕೆ ಔಷಧ ಸಿಂಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರಿಗೆ ಫೀವರ್ ಕ್ಲೀನಿಕ್‌ನಲ್ಲಿ ಖಾಲಿ ಇರುವ ಕೊಠಡಿಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಯಿತು. ಮತ್ತು ಹಾಸ್ಟೇಲ್‌ನ ಅಡುಗೆ ಕೋಣೆಯಿಂದ ಪ್ರತಿನಿತ್ಯ ಊಟದ ವ್ಯವಸ್ಥೆ ಮಾಡಲು ಸೂಚಿಸಿದರು.
ಜಿಪಂ ಸಿಇಒ, ಅಪರ ಜಿಲ್ಲಾಧಿಕಾರಿ, ಎಸ್ಪಿ, ಹೆಚ್ಚುವರಿ ಎಸ್ಪಿ, ಸಹಾಯಕ ಆಯುಕ್ತರು, ಸವಣೂರು, ಇನ್ಸಿಡೆಂಟ್ ಕಮಾಂಡರ್ ಸವಣೂರು, ತಾಲೂಕು ವೈದ್ಯಾಧಿಕಾರಿಗಳು ಇದ್ದರು.