Advertisement

ರಾಜ್ಯದಲ್ಲೇ ಮಾದರಿ ನಗರಸಭೆಗೆ ಸಂಕಲ್ಪ: ಲತಾ

04:08 PM Nov 04, 2020 | Suhan S |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಚಿಕ್ಕಬಳ್ಳಾಪುರ ನಗರಸಭೆಯನ್ನು ಮಾದರಿಯಾಗಿ ಪರಿವರ್ತಿಸಲು ಅನೇಕ ಯೋಜನೆಗಳನ್ನು ರೂಪಿಸಲಾಗಿದ್ದು, ಹಂತ ಹಂತವಾಗಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದರು.

Advertisement

ತಾಲೂಕಿನ ಪುಟ್ಟತಿಮ್ಮನಹಳ್ಳಿ ಸಮೀಪದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ನಗರಸಭಾ ವ್ಯಾಪ್ತಿಯಲ್ಲಿರುವ ಎಲ್ಲಾ ವಾರ್ಡ್‌ಗಳಲ್ಲಿ ಪ್ರತಿನಿತ್ಯ ಸ್ವತ್ಛತಾ ಕೆಲಸವನ್ನು ಪರಿಣಾಮಕಾರಿಯಾಗಿ ಮಾಡುತ್ತಿದ್ದೇವೆ. ಮನೆ ಮನೆಯಿಂದ ಕಸ ಸಂಗ್ರಹಣೆ ಮಾಡಿ ಹಸಿ ಮತ್ತು ಒಣ ತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಮೂಲಕ ಕಸದಿಂದ ರಸ ಮಾಡುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದ್ದೇವೆ ಎಂದರು.

ಮಾಸ್ಟರ್‌ ಪ್ಲಾನ್‌: ಕಸವನ್ನು ಆಧುನಿಕ ಯಂತ್ರಗಳ ಮೂಲಕ ವಿಂಗಡಿಸಿ ಎರೆಹುಳ ಗೊಬ್ಬರ ತಯಾರಿಸಿ ಅದರ ಮೂಲಕ ನಗರಸಭೆಗೆ ಸೇರಿದ ಜಾಗದಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಯಶಸ್ವಿ ಕಂಡಿದ್ದೇವೆ. ಮುಂದಿನ ದಿನಗಳಲ್ಲಿ ಚಿಕ್ಕಬಳ್ಳಾಪುರ ನಗರವನ್ನು ಸ್ವಚ್ಛ ಮತ್ತು ಸುಂದರವಾಗಿ ಪರಿವರ್ತಿಸಲು ಮಾಸ್ಟರ್‌ ಪ್ಲಾನ್‌ ಮಾಡಿಕೊಂಡಿದ್ದು, ಕಾರ್ಯಗತಗೊಳಿಸಲು ಆದ್ಯತೆ ನೀಡಿದ್ದೇವೆ ಎಂದರು.

ಹಸಿರುಮಯ: ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಚಿಕ್ಕಬಳ್ಳಾಪುರ ಜಿಲ್ಲೆಯವರು ಆದ ನಿವೃತ್ತ ಐಎಎಸ್‌ ಅಧಿಕಾರಿ ಕೆ. ಅಮರನಾರಾಯಣ್‌ ಅವರ ಸಹಕಾರ ಪಡೆದು ಜಿಲ್ಲೆಯಲ್ಲಿರುವ ಸರ್ಕಾರಿ ಜಾಗಗಳಲ್ಲಿ ಸಸಿಗಳನ್ನು ನೆಡುವ ಮೂಲಕ ಜಿಲ್ಲೆಯನ್ನು ಹಸಿರುಮಯ ಮಾಡಲು ಮತ್ತು ಜಲ ಸಂರಕ್ಷಣೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸ್ಪಷ್ಟಪಡಿಸಿದರು.

ಆದಾಯ ಹೆಚ್ಚಿಸಲು ಕ್ರಮ: ನಗರಸಭೆಯ ಅಧ್ಯಕ್ಷ ಡಿ.ಎಸ್‌.ಆನಂದ್‌ರೆಡ್ಡಿ ಮಾತನಾಡಿ, ನಗರದಲ್ಲಿ ಕಸವಿಲೇವಾರಿ ಸಮಸ್ಯೆ ಉಲ್ಬಣಗೊಳ್ಳದಂತೆ ಎಚ್ಚರ ವಹಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಕಸವನ್ನು ರಸ ಮಾಡಿ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.26 ಮಾತ್ರ ಬಾಕಿ: ನಗರಸಭೆಯ ಪೌರಾಯುಕ್ತಮಾತನಾಡಿ, 2023 ಜೂನ್‌ ಅಥವಾ ಜುಲೈ ತಿಂಗಳ ಅಂತ್ಯದೊಳಗೆ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಾದರಿ ಉದ್ಯಾನವನ ನಿರ್ಮಿಸಲು ಕ್ರಮ ಕೈಗೊಂಡಿದ್ದೇವೆ. ನಗರದಲ್ಲಿ ಸುಮಾರು 300 ಬ್ಲಾಕ್‌ ಸ್ಪಾಟ್‌ಗಳ ಪೈಕಿ ಕೇವಲ 26 ಮಾತ್ರ ಬಾಕಿ ಉಳಿದುಕೊಂಡಿದ್ದು, ತೆರವು ಮಾಡಿ ಕಸದಿಂದ ರಸ ಮಾಡಿ ನಗರಸಭೆಗೆ ಆದಾಯ ಹೆಚ್ಚಸಲು ಆದ್ಯತೆ ನೀಡಿದ್ದೇವೆ ಎಂದರು.

Advertisement

ಚಿಕ್ಕಬಳ್ಳಾಪುರ ನಗರಸಭಾ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ವೈಜ್ಞಾನಿಕ ವಾಗಿ ವಿಲೇವಾರಿಮಾಡಿ ಘನ ತ್ಯಾಜ್ಯ ಘಟಕ ಉದ್ಯಾನವನಮಾಡಲು ಕ್ರಮ ಕೈಗೊಂಡಿದ್ದು, ನಾಗರಿಕರಿಗೆ ಪ್ರಶಾಂತ ವಾತಾವರಣದಲ್ಲಿ ವಾಯು ವಿಹಾರಕ್ಕೆ ಅನುಕೂಲವಾಗುವಂತಹ ನಿಟ್ಟಿನಲ್ಲಿ ವ್ಯವಸ್ಥೆ ಮಾಡಲು ಚಿಂತನೆ ನಡೆಸಲಾಗಿದೆ. ಆರ್‌.ಲತಾ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next