Advertisement

ಸರ್ಕಾರದ ಸೌಲಭ್ಯ ಪ್ರತಿಯೊಬ್ಬರಿಗೂ ಸಿಗಲಿ

07:54 PM Mar 21, 2021 | Team Udayavani |

ಶಿವಮೊಗ್ಗ: ಗ್ರಾಮೀಣ ಭಾಗದ ಸಮಸ್ಯೆಗಳನ್ನು ಅರಿಯಲು ಮತ್ತು ಸರ್ಕಾರದ ಸೇವಾ ಸೌಲಭ್ಯಗಳು ಪ್ರತಿಯೊಬ್ಬರಿಗೂ ತಲುಪುವುದನ್ನು ಖಾತ್ರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್‌ ಅವರು ತಿಳಿಸಿದರು.

Advertisement

ಶನಿವಾರ ಹೊಳಲೂರು ಹೋಬಳಿ ವ್ಯಾಪ್ತಿಯ ಆಲದಳ್ಳಿಯಲ್ಲಿ ನಡೆದ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೆಳಗ್ಗೆಯಿಂದ ನಿರಂತರ ಭೇಟಿ, ಪರಿಶೀಲನೆ: ಬೆಳಗ್ಗೆ 11ಗಂಟೆಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳನ್ನು ಊರಿನ ದ್ವಾರದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ ಹಾಗೂ ಮಂಗಳ ವಾದ್ಯಗಳ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿಗಳನ್ನು ಗ್ರಾಮಕ್ಕೆ ಬರಮಾಡಿಕೊಳ್ಳಲಾಯಿತು.

ಆಲದಳ್ಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ನೇರವಾಗಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಂಗನವಾಡಿಯ ಮಕ್ಕಳೊಂದಿಗೆ ಬೆರೆತು ಮಾತನಾಡಿದರು. ಮಕ್ಕಳಿಗೆ ನೀಡುತ್ತಿರುವ ಆಹಾರ ಧಾನ್ಯಗಳ ಗುಣಮಟ್ಟವನ್ನು ಪರಿಶೀಲಿಸಿದ ಅವರು, ಗ್ರಾಮದ ಪ್ರತಿಯೊಂದು ಮಗುವಿಗೂ ಇದರ ಸೌಲಭ್ಯ ಸಿಗುವಂತೆ ಖಾತ್ರಿಪಡಿಸಿಕೊಳ್ಳಬೇಕು ಎಂದು ಹೇಳಿದರು. ಊರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಆರೋಗ್ಯ ತಪಾಸಣಾ ಶಿಬಿರವನ್ನು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಉದ್ಘಾಟಿಸಿದರು. ಪ್ರಾಥಮಿಕ ಕೇಂದ್ರದಲ್ಲಿ ನೀಡಲಾಗುತ್ತಿರುವ ಕೊರೊನಾ ಲಸಿಕೆಯನ್ನು ಎಲ್ಲಾ ಅರ್ಹರೂ ಪಡೆದುಕೊಳ್ಳುವಂತೆ ಕ್ರಮ ಕೈಗೊಳ್ಳಬೇಕು.

ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯ ನಡೆಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೊರೊನಾ ಲಸಿಕೆ ಕುರಿತು ಜಾಗೃತಿ ವಾಹನ ಜಾಥಾಕ್ಕೆ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ಊರಿನ ಅರಳಿಕಟ್ಟೆ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ನೀರು ಹರಿದು ಹೋಗದೆ ನಿಂತಿದ್ದು, ಬೇಸಿಗೆಯಲ್ಲಿ ನೀರು ಕಡಿಮೆಯಾದ ಬಳಿಕ ಹೂಳೆತ್ತುವುದು ಸೇರಿದಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ.

ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಅಭಿವೃದ್ಧಿಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅವರು ಸೂಚನೆ ನೀಡಿದರು. ಜಿಲ್ಲಾ ಧಿಕಾರಿ ಅವರು ಸೋಮಿನಕೊಪ್ಪ ಪಶು ಆರೋಗ್ಯ ಕೇಂದ್ರ ಹಾಗೂ ಊರಿನ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದರು. ಉತ್ತಮ ಗುಣಮಟ್ಟದ ಅಕ್ಕಿ ಪೂರೈಕೆಯಾಗುತ್ತಿದ್ದು, ಗೋ ಧಿ ಗುಣಮಟ್ಟ ಚೆನ್ನಾಗಿಲ್ಲ ಎಂದು ಊರಿನವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಆಲದಳ್ಳಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಒಂದು ಗಂಟೆಗೂ ಅಧಿ ಕ ಕಾಲ ಪಾಠ ಹಾಗೂ ಸಂವಾದ ನಡೆಸಿದರು.

Advertisement

ಹೈಸ್ಕೂಲ್‌ ವಿದ್ಯಾರ್ಥಿಗಳ ಗಣಿತ, ವಿಜ್ಞಾನ ಗುಣಮಟ್ಟ ಪರಿಶೀಲಿಸಿದ ಅವರು, ಈ ವಿಷಯಗಳ ಬಗ್ಗೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಿದರು. ಅಹವಾಲು ಸ್ವೀಕಾರ- ಅಭಿನಂದನೆ: ಸಂಜೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಜಿಲ್ಲಾಧಿಕಾರಿ ಅವರು ಸಭಾ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್‌ಗಳಳನ್ನು ಅಭಿನಂದಿಸಿದರು. ತಹಶೀಲ್ದಾರ್‌ ಎನ್‌.ಜೆ. ನಾಗರಾಜ್‌, ಗ್ರಾಪಂ ಅಧ್ಯಕ್ಷೆ ಸರೋಜಾ ಬಾಯಿ ಮತ್ತಿತರರು ಇದ್ದರು. ಜಿಲ್ಲಾಧಿಕಾರಿ ಅವರು ಕೊಮ್ಮನಾಳು ಬಾಲಕರ ವಸತಿ ನಿಲಯದಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next