ಬೆಳಗಾವಿ : ಬೆಳಗಾವಿಗೆ ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವರು ಮತ್ತು ಸಂಸದ ಭೇಟಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೋಮವಾರ ಆದೇಶ ಹೊರಡಿಸಿದ್ದಾರೆ.
ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿ, ಮಹಾರಾಷ್ಟ್ರದ ಗಡಿತಜ್ಞ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ ಮಾನೆಗೆ ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶಿಸದಂತೆ ನಿರ್ಬಂಧಿತ ಆದೇಶ ಹೊರಡಿಸಲಾಗಿದೆ.
ಇಬ್ಬರು ಸಚಿವರು, ಓರ್ವ ಸಂಸದ ಗಡಿ ಪ್ರವೇಶಕ್ಕೆ CRPC 1973 ಕಲಂ 144(3)ರ ಅನ್ವಯ ಪ್ರದತ್ತ ಅಧಿಕಾರ ಬಳಸಿ ಡಿಸಿ ಆದೇಶ ಹೊರಡಿಸಿದ್ದಾರೆ.
ಡಿಸೆಂಬರ್ 6 ರಂದು ಇಬ್ಬರು ಸಚಿವರನ್ನು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಸ್ಥಳೀಯರು ಆಹ್ವಾನಿಸಿದ್ದರು. ವಿವಾದಿತ ಪ್ರದೇಶಗಳಿಗೆ ಭೇಟಿ ನೀಡಿ ಮಾತುಕತೆ ನಡೆಸಲೂ ತೀರ್ಮಾನಿಸಿದ್ದರು. ಈ ವಿಚಾರ ಕನ್ನಡ ಪರ ಸಂಘಟನೆಗಳನ್ನು ಕೆರಳಿಸಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಡಿಸಿ ಕ್ರಮ ಕೈಗೊಂಡಿದ್ದು,ಮಹಾರಾಷ್ಟ್ರದ ಸಚಿವರು ಆಗಮನ ಹಿನ್ನೆಲೆ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿದ್ದು, ಭಾಷಾ ವೈಷಮ್ಯ ಬೆಳೆದು ಕಾನೂನು ಸುವ್ಯವಸ್ಥೆ ಧಕ್ಕೆಯಾಗುವ ಸಾಧ್ಯತೆ ಇದೆ.ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯುಂಟಾಗುವ ಸಾಧ್ಯತೆ ಇದೆ. ಸಾರ್ವಜನಿಕರ ನೆಮ್ಮದಿ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮ ವಹಿಸಿ ಬೆಳಗಾವಿ ಜಿಲ್ಲೆಯ ಗಡಿ ಪ್ರವೇಶಿಸದಂತೆ ನಿರ್ಬಂಧಿತ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.