Advertisement
ಹರಸಾಹಸ: ಜಿಲ್ಲಾಡಳಿತ ಭವನಕ್ಕೆ ಕೆಲಸ ಕಾರ್ಯಗಳಿಗೆ ಬರುವ ಸಾರ್ವಜನಿಕರು, ವಾಹನ ಸವಾರರಿಗೆ ತಿಪ್ಪೆ ಗುಂಡಿಗಳಂತೆ ಭಾಸವಾಗುತ್ತಿರುವ ಕಸದ ರಾಶಿಗಳು ಸ್ವಾಗತಿಸುತ್ತಿವೆ. ನಗರದ ಶಿಡ್ಲಘಟ್ಟ ರಸ್ತೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೂ ರಸ್ತೆ ಕಿರಿದಾಗಿದ್ದು, ವಾಹನಗಳ ಜನದಟ್ಟಣೆಯಿಂದ ಕಿಷ್ಕಿಂಧೆಯಂತಹ ರಸ್ತೆಯಲ್ಲಿ ವಾಹನ ಸವಾರರು ನಿತ್ಯ ಸಂಚರಿಸುವುದಕ್ಕೆ ಹರಸಾಹಸವೇ ಮಾಡಬೇಕು.
ಗೊತ್ತಿದ್ದರೂ ತಿರುಗಿ ನೋಡಿಲ್ಲ: ಈ ಹಿಂದೆ ಹಲವು ಬಾರಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಜಿಲ್ಲಾಧಿಕಾರಿಗಳು ಸಹ ಇತ್ತಕಡೆ ಗಂಭೀರವಾಗಿ ಗಮನ ಕೊಡುತ್ತಿಲ್ಲ. ನಗರಸಭೆ ಅಧಿಕಾರಿಗಳಿಗೂ ಹಲವು ಬಾರಿ ಗಮನಕ್ಕೆ ತಂದರೂ ಅತ್ತ ಕಡೆಗೆ ತಿರುಗಿ ನೋಡಿಲ್ಲ ಎಂದು ನಗರದ ಸಾರ್ವಜನಿಕರು ಹಾಗೂ ಸುತ್ತಮುತ್ತಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳೀಯ ನಿವಾಸಿಗಳ ಅಳಲು: ರಸ್ತೆ ಬದಿಯಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ಸುರಿದು ಹೋಗುತ್ತಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮೊದಲೇ ರಸ್ತೆ 243 ರಾಷ್ಟ್ರೀಯ ಹೆದ್ದಾರಿ ಅಗಲೀಕರಣಗೊಳ್ಳದೇ ರಸ್ತೆ ಚಿಕ್ಕದಾಗಿದೆ. ಇದೇ ರಸ್ತೆಯಲ್ಲಿ ಮಣ್ಣು ಹಾಗೂ ಹಳೆ ಕಟ್ಟಡಗಳ ಅವಶೇಷಗಳನ್ನು ರಾಶಿ ರಾಶಿ ಎಸೆದು ಹೋಗುವುದರಿಂದ ಇಡೀ ಪ್ರದೇಶ ಅನೈರ್ಮಲ್ಯಕ್ಕೆ ತುತ್ತಾಗುತ್ತಿದೆ ಎಂಬ ಅಳಲು ಸ್ಥಳೀಯ ನಿವಾಸಿಗಳದ್ದಾಗಿದೆ.
Related Articles
Advertisement
ಇದೇ ರಸ್ತೆಯಲ್ಲಿ ಸರ್‌ಎಂವಿ ಸ್ಮಾರಕ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಖಾಸಗಿ ಕಾಲೇಜು ಕಾರ್ಯನಿರ್ವಹಿಸುತ್ತಿದೆ. ಗಾರ್ಮೆಂಟ್ಸ್ ಕೂಡ ಇದ್ದು, ನಿತ್ಯ ಇದೇ ರಸ್ತೆಯಲ್ಲಿ ನೂರಾರು ಮಹಿಳೆಯರು ನಡೆದುಕೊಂಡು ಹೋಗಬೇಕಿದೆ. ಆದರೆ ರಸ್ತೆ ಬದಿ ಸುರಿದು ಹೋಗಿರುವ ಘನ ತ್ಯಾಜ್ಯ ವಸ್ತುಗಳು ಪಾದಚಾರಿಗಳಿಗೆ ಇನ್ನಿಲ್ಲದ ಕಿರಿಕಿರಿ ಸೃಷ್ಟಿಸುತ್ತಿವೆ.
ಒಟ್ಟಿನಲ್ಲಿ ಜಿಲ್ಲಾಡಳಿತ ಭವನಕ್ಕೆ ತೆರಳುವ ವಾಹನ ಸವಾರರಿಗೆ, ಪಾದಚಾರಿಗಳಿಗೆ ಶಿಡ್ಲಘಟ್ಟ ರಸ್ತೆ ಮುಳ್ಳಿನ ಹಾದಿಯಾಗಿದೆ. ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಮಹಿಳಾ ಪದವಿ ಕಾಲೇಜುವರೆಗೂ ರಾಶಿ ರಾಶಿ ಕಸದಂತೆ ಕಾಣುವ ಘನ ತ್ಯಾಜ್ಯ ವಸ್ತುಗಳು ಹಾಗೂ ಹಳೆ ಕಟ್ಟಡಗಳ ಅವಶೇಷಗಳು ಎಲ್ಲೆಂದರಲ್ಲಿ ಬಿಸಾಡಿ ಹೋಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಕಚೇರಿ ರಸ್ತೆ ಒಂದು ರೀತಿ ಡಂಪಿಂಗ್ ಯಾರ್ಡ್ ಆಗುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.
ಯಾರೋ ಮಧ್ಯ ರಾತ್ರಿಯಲ್ಲಿ ಹಳೆ ಕಟ್ಟಡಗಳ ಅವಶೇಷಗಳನ್ನು ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಬಂದು ರಸ್ತೆ ಅಕ್ಕಪಕ್ಕ ಸುರಿದು ಹೋಗುತ್ತಿರುವುದು ಪತ್ತೆ ಮಾಡುವುದು ನಗರಸಭೆಗೆ ಕಷ್ಟವಾಗಿದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಲು ನಗರಸಭೆ ಚಿಂತನೆ ನಡೆಸಲಿದೆ. ರಸ್ತೆ ಬದಿ ಘನ ತ್ಯಾಜ್ಯ ವಸ್ತುಗಳನ್ನು ಸುರಿಯುವುದರಿಂದ ನಗರದ ಪರಿಸರಕ್ಕೆ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗಲಿದೆ. ಈ ಬಗ್ಗೆ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.●ಉಮಾಕಾಂತ್, ನಗರಸಭೆ ಆಯುಕ್ತರು ರಾಶಿಗಳ ಮಧ್ಯೆ ಕೊಳೆತ ನಾಯಿ ಶವ ಘನ ತ್ಯಾಜ್ಯ ವಸ್ತುಗಳ ರಾಶಿಗಳ ಮಧ್ಯೆ ಸತ್ತ ಪ್ರಾಣಿ, ಪಕ್ಷಿಗಳ ಅದರಲ್ಲೂ ನಾಯಿಗಳ ಮೃತದೇಹಗಳನ್ನು ಸಾರ್ವಜನಿಕರು ಎಸೆದು ಹೋಗುತ್ತಿರುವುದ ರಿಂದ ನಿತ್ಯ ಇದೇ ರಸ್ತೆಯಲ್ಲಿ ಸಂಚರಿ ಸುವ ವಾಹನ ಸವಾರರು ಹಾಗೂ ಪಾದಚಾರಿಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಮೂಗು ಮುಚ್ಚಿ ಕೊಂಡು ತಿರುಗಾಡುವ ದುಸ್ಥಿತಿ ನಿರ್ಮಾಣವಾಗಿದೆ. ಆದರೂ ನಗರಸಭೆ ಅಧಿಕಾರಿಗಳು ಸಮಸ್ಯೆಯ ಗಂಭೀರತೆ ಯನ್ನು ಅರಿಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ●ಕಾಗತಿ ನಾಗರಾಜಪ್ಪ