ದಾವಣಗೆರೆ: ಜಿಲ್ಲೆಯಲ್ಲಿರುವ ಅನಧಿಕೃತ ಕ್ವಾರಿಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ತಂಡವೊಂದನ್ನು ರಚಿಸಲಾಗುವುದು. ಆ ವರದಿಯನ್ವಯ ಶಿಸ್ತುಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಕಲ್ಲುಗಣಿ ಸುರಕ್ಷತೆ ಮತ್ತು ಅನಧಿಕೃತ ಗಣಿಗಾರಿಕೆ ತಡೆ ಮಾಸಿಕ ಸಪ್ತಾಹದ ಅಂಗವಾಗಿ ಬುಧವಾರ ಗಣಿ ಮತ್ತು ಭೂವಿಜ್ಞಾನ ಇಲಾಖೆ ವತಿಯಿಂದ ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರಿಗೆ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕ್ವಾರಿಗಳಿರುವ ವ್ಯಾಪ್ತಿಯ ತಹಶೀಲ್ದಾರ್, ಪೊಲೀಸ್ ಅಧಿಕಾರಿ, ಕಂದಾಯ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ರಚಿಸಿ ಗಣಿ ಇಲಾಖೆಯ ವರದಿಯಲ್ಲಿರುವಂತೆ ಕ್ವಾರಿಗಳು ಕೆಲಸ ನಿರ್ವಹಿಸುತ್ತಿವೆಯೇ, ಮುಖ್ಯವಾಗಿ ಕೆಲಸ ನಿಲ್ಲಿಸಿರುವ (ಐಡಲ್) ಕ್ವಾರಿಗಳ ಸ್ಥಿತಿಗತಿ ಏನು ಎಂಬ ಬಗ್ಗೆ ಒಂದು ವಾರದೊಳಗೆ ಜಿಲ್ಲಾಧಿಕಾರಿ ಕಚೇರಿಗೆ ವರದಿ ನೀಡಬೇಕು. ಈ ವರದಿ ಆಧರಿಸಿ ಮುಂದಿನ ಕ್ರಮ ವಹಿಸಲಾಗುವುದು. ಒಂದು ವೇಳೆ ಅನಧಿಕೃತವಾಗಿ ಕ್ವಾರಿ ನಡೆಸುತ್ತಿದ್ದರೆ ಹಾಗೂ ಕಾಯ್ದೆಯನ್ವಯ ನಿಯಮಗಳನ್ನು ಅನುಸರಿಸದೇ ಕ್ವಾರಿ ನಡೆಸುತ್ತಿದ್ದರೆ ಅಂಥ ಕ್ವಾರಿಗಳಿಗೆ ನೋಟಿಸ್ ನೀಡಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದರು.
ಕಲ್ಲುಗಣಿ ಮತ್ತು ಕ್ರಷರ್ ಮಾಲೀಕರು ಕಾನೂನಿನ ಚೌಕಟ್ಟಿನೊಳಗೆ ತಮ್ಮ ಚಟುವಟಿಕೆ ನಡೆಸಬೇಕು. ಪರವಾನಗಿ ಇಲ್ಲದವರಿಗೆ ಪರವಾನಗಿ ಪಡೆಯಲು ಮಾರ್ಗದರ್ಶನ ನೀಡುವುದರೊಂದಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕಲ್ಲು ಗಣಿ ಮತ್ತು ಕ್ರಷರ್ ಗಳಿಗೆ ಪರವಾನಗಿ ನೀಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಮಾರ್ಗದರ್ಶನ ನೀಡುವರು.
ಎಸ್‌ಪಿ ಹಾಗೂ ಡಿಸಿ ಕಚೇರಿಗಳ ಸಹಕಾರ ಕೂಡ ಇದ್ದು, ಆದಷ್ಟು ಬೇಗ ಮಾಲೀಕರು ಪರವಾನಗಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ಪರಿಸರ ಅಧಿಕಾರಿಗಳು ಕ್ವಾರಿಗಳಿಗೆ ಭೇಟಿ ನೀಡಿ ಪರಿಸರ ಮಾಲಿನ್ಯ ನಿಯಂತ್ರಣಾ ಕ್ರಮ ಕೈಗೊಂಡಿರುವ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗೆ ಸೂಚನೆ ನೀಡಿದರು.
ಇದನ್ನೂ ಓದಿ :ಚಿತ್ರಮಂದಿರಗಳು ಬಾಗಿಲು ಮುಚ್ಚುವ ಭೀತಿ
ಎರಡು ಬಾರಿ ಪರಿಶೀಲನೆ: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೋದಂಡರಾಮಯ್ಯ ಮಾತನಾಡಿ, ಈಗಾಗಲೇ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಎರಡು ಬಾರಿ ಕ್ವಾರಿ ಮತ್ತು ಕ್ರಷರ್‌ಗಳಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ತಯಾರಿಸಲಾಗಿದೆ. ಕೆಲಸ ಮಾಡದೇ ಇರುವ ಐಡಲ್ ಕ್ವಾರಿಗಳಿಗೆ 30ದಿನಗಳ ನೋಟಿಸ್ ನೋಡಿ ಅವಕಾಶ ನೀಡಲಾಗುವುದು. ಆದಾಗ್ಯೂ ಅವರು ಕ್ವಾರಿ ಕಾರ್ಯಾರಂಭಿಸದಿದ್ದರೆ ಕಲ್ಲು ಗಣಿ ಗುತ್ತಿಗೆಯನ್ನು ರದ್ದುಪಡಿಸಲಾಗುವುದು. ಕಲ್ಲು ಗಣಿ ಸುರಕ್ಷತೆ ಮತ್ತು ಅನಧಿಕೃತ ಗಣಿಗಾರಿಕೆ ತಡೆಗೆ ಸಂಬಂಧಿಸಿ ಭೂವಿಜ್ಞಾನಿಗಳು ಮತ್ತು ಸಿಬ್ಬಂದಿ ಪ್ರತಿ ದಿನ ಕ್ವಾರಿಗಳಿಗೆ ತೆರಳಿ ಕಲ್ಲು ಗಣಿ ಸುರಕ್ಷತೆ, ಗಡಿ ಪ್ರಾಂತ್ಯ, ತಡೆಗೋಡೆ ನಿರ್ಮಾಣ ಸೇರಿದಂತೆ ಇನ್ನಿತರೆ ನಿಯಮಾವಳಿಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತಿದೆ ಎಂದರು.
ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ವಿವಿಧ ತಾಲೂಕುಗಳ ತಹಶೀಲ್ದಾರರು, ಡಿವೈಎಸ್ ಪಿಗಳು, ಸಿಪಿಐ ಮತ್ತು ಇತರೆ ಸಿಬ್ಬಂದಿ ಹಾಗೂ ಕ್ರಷರ್ ಮತ್ತು ಕ್ವಾರಿಗಳ ಮಾಲೀಕರು ಸಭೆಯಲ್ಲಿದ್ದರು.