ಚಿಕ್ಕಬಳ್ಳಾಪುರ: ಜಿಲ್ಲೆಯನ್ನು ಸ್ವತ್ಛ ಹಾಗೂ ಹಸಿರು ಮಯ ಮಾಡಲು ಜಿಲ್ಲಾಡಳಿತದಿಂದ ಜನಜಾಗೃತಿ ಅಭಿಯಾನ ಮತ್ತು ಅರಿವು ಕಾರ್ಯಕ್ರಮ ನಡೆಸ ಲಾಗು ತ್ತಿದ್ದು, ಸಂಘ ಸಂಸ್ಥೆಗಳು ಸಹ ಜಿಲ್ಲಾಡಳಿತ ದೊಂದಿಗೆ ಕೈಜೋಡಿಸಿ ಪರಿಸರ ಸಂರಕ್ಷಣೆ ಮಾಡಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ನಗರದ 15ನೇ ವಾರ್ಡ್‌ನಲ್ಲಿ ಪಾಳು ಬಿದ್ದಿದ್ದ ಉದ್ಯಾನವನವನ್ನು ನಗರಸಭೆ ಹಾಗೂ ಚಿಕ್ಕಬಳ್ಳಾಪುರ ಹಸಿರು ಸ್ವಯಂ ಸೇವಾ ಸಂಸ್ಥೆಯ ಸಹಯೋಗ ದೊಂದಿಗೆ ನವೀಕರಣಗೊಂಡಿರುವ ಉದ್ಯಾನವನ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಸಂರಕ್ಷಣೆ ಮಾಡಲು ಭಾಷಣಗಳಿಂದ ಸಾಧ್ಯವಿಲ್ಲ.ಪರಿಸರ ನಾಶ ಮಾಡಿದರೆ ಯಾವ ರೀತಿಯ ಪ್ರತಿಕೂಲ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ವ್ಯಾಪಕವಾಗಿ ಅರಿವು ಮತ್ತು ಜಾಗೃತಿ ಮೂಡಿಸಬೇಕೆಂದು ಹೇಳಿದರು.
ಗಿಡ ನೆಟ್ಟು ಪೋಷಿಸಿ: ಹಸಿರು ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸಮಾಜ ಮತ್ತು ಸಮುದಾಯದಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ಅಂಗಳಗಳಲ್ಲಿ ಗಿಡ ನೆಟ್ಟು ಪೋಷಣೆ ಮಾಡಿದಾಗ ಮಾತ್ರ ಹಸಿರು ಕ್ರಾಂತಿಯಾಗಲು ಸಾಧ್ಯ ಎಂದರು.
ಹಸಿರು ಸ್ವಯಂ ಸೇವಾ ಸಂಸ್ಥೆಯ ಮಧು ಮಾತನಾಡಿ, ಕಳೆದ ಮೂರು ತಿಂಗಳಿಂದ ನಮ್ಮ ಸಂಘಟನೆಯ ಸದಸ್ಯರು ನಿರಂತರವಾಗಿ ಶ್ರಮದಾನ ಮಾಡಿ ಉದ್ಯಾವನಕ್ಕೆ ಹೊಸ ರೂಪ ನೀಡಲಾಗಿದೆ. ಇದೇ ರೀತಿಯಲ್ಲಿ ಪರಿಸರ ಸಂರಕ್ಷಣೆ ಮಾಡಲು ಅಭಿಯಾನ ನಡೆಸುತ್ತಿದ್ದೇವೆ. 15ನೇ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಕಡಿಮೆ ಜಾಗದಲ್ಲಿ ಎಲ್ಲಾ ವಿಧವಾದ ಗಿಡಗಳನ್ನು ಹಾಕಿ ದಟ್ಟವಾದ ಅರಣ್ಯ ಬೆಳೆಸುವ ಸಲುವಾಗಿ ಮಿಯಾವಾಕಿ ಅರಣ್ಯೀಕರಣ ಪದ್ಧತಿ ಆರಂಭಿಸಿದ್ದೇವೆ. ಈ ಪ್ರಯೋಗ ಯಶಸ್ವಿಯಾದ ನಂತರ ನಗರದ ವಿವಿಧ ಉದ್ಯಾವನಗಳು, ಸರ್ಕಾರಿ ಜಾಗಗಳಲ್ಲಿ ಗಿಡ ನೆಡುವ ಮೂಲಕ ಹಸಿರುಮಯ ವಾತಾವರಣ ನಿರ್ಮಿಸಲಾಗುವುದು ಎಂದರು.
ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ(ಬಾಬು), 15ನೇ ವಾರ್ಡ್‌ನ ಸದಸ್ಯ ಅಂಬರೀಶ್, ಯತೀಶ್, ಪೌರಾಯುಕ್ತ ಡಿ ಲೋಹಿತ್, ಹಸಿರು ಸ್ವಯಂ ಸೇವಾ ಸಂಘದ ಮಧು ಹಾಗೂ ಪದಾಧಿಕಾರಿಗಳು- ಸದಸ್ಯರು ಉಪಸ್ಥಿತರಿದ್ದರು.