Advertisement
ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 104.82.20 ಎಕ್ರೆ ಡಿ.ಸಿ. ಮನ್ನಾ ಜಮೀನು ಅತಿಕ್ರಮಣವಾಗಿದ್ದು, 23.76.71 ಎಕ್ರೆ ಸಕ್ರಮ (ಅತಿಕ್ರಮಣ ಮುಕ್ತ) ಜಮೀನು ಲಭ್ಯವಿದೆ. ಸಕ್ರಮ ಜಮೀನು ಮಂಜೂರಾತಿ ಕೋರಿ ಈ ವರೆಗೆ 4,059 ಅರ್ಜಿಗಳು ಸ್ವೀಕೃತವಾಗಿವೆ. ಇವುಗಳನ್ನು ಹೋಬಳಿವಾರು ಪರಿಶೀಲಿಸಿ ಕಂದಾಯ ನಿರೀಕ್ಷಕರಿಗೆ ತನಿಖೆಗಾಗಿ ಕಳುಹಿಸಿಕೊಡಲಾಗಿದೆ. ಕೂಲಂಕಷವಾಗಿ ಪರಿಶೀಲಿಸಿ ಭೂಮಿ ಇಲ್ಲದವರಿಗೆ ನಿಯಮಾನುಸಾರ ಮಂಜೂರು ಮಾಡಲು ಕ್ರಮಜರಗಿಸಲಾಗುವುದು ಎಂದರು.
Related Articles
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಮಾಡಿಸಿಕೊಂಡು ಲಭ್ಯಗಳನ್ನು ಪಡೆಯುವುದು ಸಾಬೀತಾದಲ್ಲಿ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅವಕಾಶವಿದೆ ಎಂದು ಪ್ರಕರಣವೊಂದನ್ನು ಉಲ್ಲೇಖೀಸುತ್ತಾ ಡಾ| ಸಂತೋಷ್ ಕುಮಾರ್ ವಿವರಿಸಿದರು. ನಗರದಲ್ಲಿ ಬೋವಿ ಜನಾಂಗದ ಕೆಲವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವುದು ಬೆಳಕಿಗೆ ಬಂದಿದೆ. ಆಂಧ್ರ ಮೂಲದ ಶಿವನಾಥನ್ ಅವರಿಗೆ 2014, 2017ರಲ್ಲಿ ಬೋವಿ ಜನಾಂಗದ ಜಾತಿ ಪ್ರಮಾಣ ಪತ್ರ ನೀಡಲಾಗಿರುವ ದಲಿತ ನಾಯಕ ಅಶೋಕ್ ಕೊಂಚಾಡಿ ಅವರು ಈ ಹಿಂದಿನ ಸಭೆಯಲ್ಲಿ ದೂರು ನೀಡಿದ್ದರ ಕುರಿತಂತೆ ಚರ್ಚೆ ನಡೆಯಿತು.
Advertisement
ಶಿವನಾಥನ್ ಮಂಗಳೂರಿಗೆ ಬಂದು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವುದಲ್ಲದೆ, ಸರಕಾರಿ ಇಲಾಖೆಗಳಿಂದ ಹಲವು ರೀತಿಯ ಸೌಲಭ್ಯಗಳನ್ನು ಪಡೆಯಲು ಯತ್ನಿಸಿದ್ದಾರೆ ಎಂದು ಇಂದು ಸಭೆಯಲ್ಲಿ ದಲಿತ ನಾಯಕರು ಆರೋಪಿಸಿದರು. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ವಿಚಾರಣೆ ನಡೆದಿದ್ದು, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವುದಾಗಿ ಸಾಬೀತಾಗಿದೆ. ಆದ್ದರಿಂದ ಸ್ಥಳೀಯ ಡಿಸಿಪಿಗೆ ಪತ್ರ ಬರೆದು ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಡಾ| ಸಂತೋಷ್ ಕುಮಾರ್ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಅಂಬೇಡ್ಕರ್ ವೃತ್ತ: ಮನಪಾ ನಿರ್ಲಕ್ಷ್ಯನಗರದಲ್ಲಿ ಅಂಬೇಡ್ಕರ್ ವೃತ್ತ ನಿರ್ಮಾಣಕ್ಕೆ 94 ಲಕ್ಷ ರೂ.ಗಳ ಟೆಂಡರ್ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ವೃತ್ತ ಮಾತ್ರ ನಿರ್ಮಾಣವಾಗುತ್ತಿಲ್ಲ. ಈ ಬಗ್ಗೆ ಪಾಲಿಕೆ ನಿರ್ಲಕ್ಷ್ಯ ವಹಿಸುತ್ತಿದೆ ಎಂಬ ಆರೋಪ ವ್ಯಕ್ತವಾಯಿತು. ಮಹಾಕಾಳಿಪಡ್ಪು ಬಳಿ ಪೌರ ಕಾರ್ಮಿಕರ ವಸತಿ ಗೃಹ ಸಮುಚ್ಛಯ ನಿರ್ಮಾಣ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂಬ ಆರೋಪದ ಜತೆಗೆ, ಇಲ್ಲಿ ದ್ವಿಚಕ್ರ ವಾಹನಕ್ಕೆ ಪಾರ್ಕಿಂಗ್ ಸೌಲಭ್ಯ, ವಸತಿ ಸಮುಚ್ಛಯಕ್ಕೆ ಆವರಣ ಗೋಡೆ ನಿರ್ಮಿಸಿ ಭದ್ರತೆ ಒದಗಿಸುವಂತೆ ದಲಿತ ನಾಯಕರು ಒತ್ತಾಯಿಸಿದರು. ಪ್ರೋತ್ಸಾಹ ಧನ: ಮಾಹಿತಿ ನೀಡಿ
ದೇವದಾಸ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯಿಂದ ದಲಿತ ವಿದ್ಯಾರ್ಥಿಗಳಿಗೆ ಲಭ್ಯವಿರುವ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನದ ಕುರಿತಂತೆ ಸೂಕ್ತ ಮಾಹಿತಿ ಒದಗಿಸಬೇಕು. ದಲಿತರು ಉಪ ಜಾತಿಯೊಳಗೆ ವಿವಾಹವಾದಲ್ಲಿ 2 ಲಕ್ಷ ರೂ. ಪ್ರೋತ್ಸಾಹಧನವನ್ನು ಸರಕಾರ ಪ್ರಸಕ್ತ ಸಾಲಿನಿಂದ ಆರಂಭಿಸಿದೆ. ವಿಧವೆಯರ ಮರು ವಿವಾಹಕ್ಕೆ 3 ಲಕ್ಷ ರೂ., ಸರಳ ರೀತಿಯಲ್ಲಿ ವಿವಾಹ ಆಗುವವರಿಗೆ ಪ್ರೋತ್ಸಾಹ ಧನವನ್ನು ಸರಕಾರದಿಂದ ನೀಡಲಾಗುತ್ತಿದೆ. ಈ ಬಗ್ಗೆ ಪ್ರಚಾರದ ಕೊರತೆ ಇದೆ ಎಂದರು. ಜನನ- ಮರಣ ಪ್ರಮಾಣ ಪತ್ರ ವಿಳಂಬ
ತಾಲೂಕು ಕಚೇರಿಯಲ್ಲಿ ಜನನ, ಮರಣ ಪ್ರಮಾಣ ಪತ್ರ ನೀಡುವಲ್ಲಿ ವಿಳಂಬವಾಗುತ್ತಿದೆ. ಮರಣ ಪ್ರಮಾಣ ಪತ್ರ ಪಡೆಯಲು ಒಂದೆರಡು ವರ್ಷ ಅಲೆದಾಡುವ ಪರಿಸ್ಥಿತಿ ಇದೆ ಎಂದು ದಲಿತ ನಾಯಕರೊಬ್ಬರು ನಿರ್ದಿಷ್ಟ ಪ್ರಕರಣಗಳನ್ನು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಾ| ಸಂತೋಷ್ ಕುಮಾರ್, ಮರಣ ಅಥವಾ ಜನನ ಪ್ರಮಾಣ ಪತ್ರ 21 ದಿನಗಳ ಒಳಗಾಗಿ ನೀಡಬೇಕಿದೆ. ಆಡಳಿತ ವ್ಯವಸ್ಥೆಯಲ್ಲಿ ತೊಂದರೆ ಆಗಿರುವ ತೊಂದರೆ ಬಗ್ಗೆ ವಿಷಾದಿಸುವುದಾಗಿ ಹೇಳಿದರಲ್ಲದೆ, ನಿಗದಿತ ಅವಧಿಯೊಳಗೆ ಮರಣ, ಜನನ ಪ್ರಮಾಣ ಪತ್ರ ಒದಗಿಸಲು ಸಿಬಂದಿಗೆ ನಿರ್ದೇಶನ ಒದಗಿಸುವುದಾಗಿ ಭರವಸೆ ನೀಡಿದರು. ರದ್ಧತಿಗೆ ಒತ್ತಾಯ
ಕಾರ್ನಾ ಡಿನ ಅಮೃತಮಯಿ ನಗರದಲ್ಲಿ 18 ವರ್ಷಗಳ ಹಿಂದೆ 76 ಮನೆಗಳಿಗೆ ಹಕ್ಕು ಪತ್ರ ನೀಡಲಾಗಿದೆ. ಈಗ ಅಲ್ಲಿ ಹಕ್ಕುಪತ್ರ ಪಡೆದಿರುವ 134 ಕುಟುಂಬಗಳಿದ್ದು, ಇದರಲ್ಲಿ ಕೆಲವರು ಎರಡೆರಡು ಹಕ್ಕುಪತ್ರ ಪಡೆದಿದ್ದಾರೆ. ಈ ಬಗ್ಗೆ 5 ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಪರಿಶೀಲಿಸಿ ಅವುಗಳನ್ನು ರದ್ದುಪಡಿಸಿ, ಅರ್ಹರಿಗೆ ಒದಗಿಸಬೇಕು ಎಂದು ಆನಂದ್ ಒತ್ತಾಯಿಸಿದರು. ತತ್‌ಕ್ಷಣ ಪರ್ಯಾಯ ವ್ಯವಸ್ಥೆ
ಬಿಕರ್ನಕಟ್ಟೆಯಲ್ಲಿ 60 ವರ್ಷಗಳಿಂದ ಪರಿಶಿಷ್ಟ ಪಂಗಡದ ಎರಡು ಕುಟುಂಬಗಳು ಯಾವುದೇ ಸೌಲಭ್ಯ ಇಲ್ಲದೆ ವಾಸಿಸುತ್ತಿರುವ ಬಗ್ಗೆ ಮಾಧ್ಯಮಗಳು ಗಮನ ಸೆಳೆದಿದ್ದವು. ಆದರೆ ಅವರಿಗೆ ಪರ್ಯಾಯ ವ್ಯವಸ್ಥೆ ಆಗಿಲ್ಲ ಎಂದು ರಘು ಎಕ್ಕಾರು ಹೇಳಿದರು. ಆ ಕುಟುಂಬಗಳಿಗೆ ಬಂದರು, ಕುಲಶೇಖರದಲ್ಲಿ ಪರ್ಯಾಯ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ. ಆದರೆ ಕುಟುಂಬಗಳು ಆ ಬಗ್ಗೆ ಆಸಕ್ತಿ ತೋರಿಸಿಲ್ಲ. ನಾಯಕರು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಲ್ಲಿ, ತತ್‌ಕ್ಷಣವೇ ಅವರನ್ನು ಸ್ಥಳಾಂತರಿಸಲಾಗುವುದು ಎಂದು ಡಾ| ಸಂತೋಷ್ ಕುಮಾರ್ ತಿಳಿಸಿದರು.