ಹುಬ್ಬಳ್ಳಿ: ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಮಂಗಳವಾರ ಬೆಳಗ್ಗೆ ಕಿಮ್ಸ್‌ಗೆ ದಿಢೀರ್ ಭೇಟಿಕೊಟ್ಟು ವಿವಿಧ ವಿಭಾಗಕ್ಕೆ ತೆರಳಿ ಪರಿಶೀಲಿಸಿದರು. ಅಲ್ಲದೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಆಸ್ಪತ್ರೆಯ ಪ್ರಸೂತಿ ಹಾಗೂ ಮಕ್ಕಳ ವಿಭಾಗ, ನವಜಾತ ಶಿಶುಗಳ ತೀವ್ರನಿಗಾ ಘಟಕಗಳಿಗೆ ಡಿಸಿ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು. ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ವಿಚಾರಿಸಿ, ಆಸ್ಪತ್ರೆಯಲ್ಲಿ ಸಿಗುತ್ತಿರುವ ಚಿಕಿತ್ಸೆ ಹಾಗೂ ಕುಂದುಕೊರತೆಗಳ ಕುರಿತು ಮಾಹಿತಿ ಪಡೆದರು. ರೋಗಿಗಳ ಸಂಬಂಧಿಗಳು ಎಲ್ಲೆಂದರಲ್ಲಿ ಕುಳಿತುಕೊಂಡಿದ್ದನ್ನು ಗಮನಿಸಿ, ಅವರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಯಾಕಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸಾ ಸೌಲಭ್ಯ ಒದಗಿಸಬೇಕು. ಹೊರಗಡೆ ಔಷಧಿ ಚೀಟಿ ಬರೆದುಕೊಡಬಾರದು. ಇದು ಕಂಡುಬಂದರೆ ಅಂತಹ ವೈದ್ಯರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ನಿರ್ದೇಶಕರಿಗೆ ಸೂಚಿಸಿದರು.
ಕಿಮ್ಸ್‌ನ ನಿರ್ದೇಶಕ ಡಾ| ದತ್ತಾತ್ರೇಯ ಬಂಟ್, ವೈದ್ಯಕೀಯ ಅಧೀಕ್ಷಕ ಡಾ| ರಾಮಲಿಂಗಪ್ಪ ಅಂಟರತಾನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ಆರ್.ಎಸ್. ದೊಡ್ಡಮನಿ, ಮಕ್ಕಳ ತಜ್ಞ ಡಾ| ಪ್ರಕಾಶವಾರಿ, ತಹಶೀಲ್ದಾರ ಶಶಿಧರ ಮಾಡ್ಯಾಳ ಮೊದಲಾದವರು ಇದ್ದರು.
ಬಳಿಕ ಜಿಲ್ಲಾಧಿಕಾರಿ ದೀಪಾ ಚೋಳನ್ ಸುದ್ದಿಗಾರರೊಂದಿಗೆ ಮಾತನಾಡಿ, ಕಿಮ್ಸ್ ಆಸ್ಪತ್ರೆಗೆ ಹಾವೇರಿ, ಕೊಪ್ಪಳ, ಗದಗ ಹಾಗೂ ಬೆಳಗಾವಿ ಜಿಲ್ಲೆಗಳಿಂದ ಚಿಕಿತ್ಸೆಗಾಗಿ ರೋಗಿಗಳು ಬರುವುದರಿಂದ ಆಸ್ಪತ್ರೆಯ ಮೂಲಸೌಕರ್ಯಗಳಾದ ಬೆಡ್, ಟಾಯ್ಲೆಟ್, ಕುಳಿತುಕೊಳ್ಳಲು ಜಾಗಗಳ ಮೇಲೆ ಹೆಚ್ಚಿನ ಒತ್ತಡವಿದೆ. ತೀವ್ರತೆರನಾಗಿ ರಕ್ತಹೀನತೆಯಿಂದ ಬಳಲುತ್ತಿದ್ದ ರೋಗಿಗೆ ಹೊರಗಡೆಯಿಂದ ಇಂಜೆಕ್ಷನ್ ತರುವಂತೆ ವೈದ್ಯರು ತಿಳಿಸಿದ್ದಾಗಿ ಕಂಡುಬಂದಿದೆ. ಆಸ್ಪತ್ರೆಯಲ್ಲಿ ಎಲ್ಲಾ ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ ಕುರಿತು ಕ್ರಮಕೈಗೊಳ್ಳುವಂತೆ ನಿರ್ದೇಶಕರಿಗೆ ಸೂಚಿಸಿದ್ದೇನೆ ಎಂದರು.
ಆಸ್ಪತ್ರೆ ಆವರಣದಲ್ಲಿ ರೋಗಿಗಳ ಸಂಬಂಧಿಕರ ಬಳಕೆಗೆ ಅನುಕೂಲವಾಗುವಂತೆ ಸುಲಭ ಶೌಚಾಲಯ ನಿರ್ಮಾಣಕ್ಕೆ ನಿರ್ದೇಶಕರು ಮನವಿ ಮಾಡಿದ್ದಾರೆ. ಈ ಕುರಿತು ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದ್ದೇನೆ.
ದೀಪಾ ಚೋಳನ್,
ಜಿಲ್ಲಾಧಿಕಾರಿ