Advertisement

ಫೆ.5ರಿಂದ ನೌಕರರ ಕ್ರೀಡಾಕೂಟ: ಬೀಳಗಿ

04:52 PM Jan 23, 2021 | Team Udayavani |

ದಾವಣಗೆರೆ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೌಕರರ ಸಂಘದ ಸಹಯೋಗದೊಂದಿಗೆ ಪ್ರಸಕ್ತ ಸಾಲಿನ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ದಾವಣಗೆರೆಯಲ್ಲಿ ಫೆ. 5ರಿಂದ ಮೂರು ದಿನಗಳ ಕಾಲ ಕೋವಿಡ್‌ ಮಾರ್ಗಸೂಚಿ ಪಾಲನೆಯೊಂದಿಗೆ ಅಚ್ಚುಕಟ್ಟಾಗಿ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್‌ ಬೀಳಗಿ ಸೂಚನೆ ನೀಡಿದರು.

Advertisement

ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕ್ರೀಡಾಕೂಟ ಆಯೋಜನೆ ಸ್ಥಳಗಳಲ್ಲಿ ಕಡ್ಡಾಯವಾಗಿ ಎಲ್ಲರೂ ಮಾಸ್ಕ್, ಸ್ಯಾನಿಟೈಸರ್‌ ಬಳಕೆ ಮಾಡಬೇಕು. ಅಧಿಕಾರಿಗಳು ಹಾಗೂ ನೌಕರರ ಸಂಘದವರು ಸರ್ಕಾರದ ಶಿಷ್ಟಾಚಾರದಂತೆ ಚುನಾಯಿತ ಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳನ್ನು ಸಮಾರಂಭಕ್ಕೆ ಆಹ್ವಾನಿಸಬೇಕು. ನೌಕರರ ಸಂಘದ ತಾಲೂಕು ಘಟಕಗಳು ಆಯಾ ತಾಲೂಕಿನಲ್ಲಿ ಸಭೆ ನಡೆಸಿ, ಕ್ರೀಡಾಕೂಟ ಆಯೋಜನೆ ಬಗ್ಗೆ ಮಾಹಿತಿ ದೊರೆಯುವಂತೆ ಮಾಡಿ, ಎಲ್ಲ ನೌಕರರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು. ಕ್ರೀಡಾಕೂಟದ ಯಶಸ್ವಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‌ ಅಗತ್ಯ ಸಹಕಾರ, ನೆರವು ನೀಡಲಿದೆ ಎಂದರು.

ಇದನ್ನೂ ಓದಿ : ಮಿತಿ-ಸಾಮರ್ಥ್ಯ ಮೀರಿ ಗಣಿಗಾರಿಕೆ ನಡೆಸಿದರೆ ಕಠಿಣ ಕ್ರಮ: ಸುನೀಲಕುಮಾರ

ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಬಿ. ಪಾಲಾಕ್ಷಿ ಮಾತನಾಡಿ, ಕ್ರೀಡಾಕೂಟ ಆಯೋಜನೆಗೆ ಸರ್ಕಾರದಿಂದ 1.5 ಲಕ್ಷ ರೂ. ಹಾಗೂ ಜಿಲ್ಲಾ ಪಂಚಾಯತ್‌ನಿಂದ 3 ಲಕ್ಷ ಸೇರಿದಂತೆ 4.5 ಲಕ್ಷ ರೂ. ಅನುದಾನದ ಲಭ್ಯವಾಗಲಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಬಯಸುವ ನೌಕರರು ತಮ್ಮ ಹೆಸರು ಹಾಗೂ ವಿವರದೊಂದಿಗೆ ನೋಂದಣಿ ಮಾಡಿಸಲು ಜ. 28 ಕೊನೆಯ ದಿನವಾಗಿದೆ. ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಕೊನೆಯ ಹಂತದಲ್ಲಿ ಸ್ಪರ್ಧೆಗಳಿಗೆ ಹೆಸರು ಸೇರ್ಪಡೆಗೊಳಿಸಲು ಅವಕಾಶವಿಲ್ಲ ಎಂದರು.

Advertisement

ಈ ಬಾರಿಯ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಅಂಗವಾಗಿ, ನೌಕರರ ಸಮುದಾಯ ಭವನದಲ್ಲಿ ಸ್ಪರ್ಧೆಗಳ ಆಯೋಜನೆ ಬಳಿಕ ಸಂಜೆ ವೇಳೆ ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರ ಆಯೋಜಿಸಲು ನಿರ್ಧರಿಸಲಾಗಿದೆ ಏಪ್ರಿಲ್‌ 21 ರ ದಿನವನ್ನು ರಾಜ್ಯ ಸರ್ಕಾರಿ ನೌಕರರ ದಿನವನ್ನಾಗಿ ಆಚರಿಸಲು ಸರ್ಕಾರ ಆದೇಶಿಸಿದ್ದು, ಅದರಂತೆ ಅತ್ಯುತ್ತಮ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಕೊಡಮಾಡುವ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಗಣರಾಜ್ಯೋತ್ಸವ ಸಮಾರಂಭದ ಬದಲಿಗೆ ಏ. 21ರಂದು ಜರುಗುವ ನೌಕರರ ದಿನಾಚರಣೆಯಂದು ಪ್ರದಾನ ಮಾಡುವಂತೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಪಾಲಾಕ್ಷಿ ಮನವಿ ಮಾಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್‌ ಮಾತನಾಡಿ, ನೌಕರರ ಕ್ರೀಡಾಕೂಟದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಪರ್ಧೆಗಳು ವಯೋಮಿತಿ ಆಧಾರದಲ್ಲಿ ಜರುಗಲಿವೆ. ಅಥ್ಲೆಟಿಕ್ಸ್‌, ಕಬಡ್ಡಿ,

ವಾಲಿಬಾಲ್‌, ಬಾಲ್‌ ಬ್ಯಾಡ್ಮಿಂಟನ್‌, ಫುಟ್ಬಾಲ್‌, ಹಾಕಿ, ಕ್ರಿಕೆಟ್‌, ಬ್ಯಾಸ್ಕೆಟ್‌ಬಾಲ್‌ ಮತ್ತಿತರೆ ಕ್ರೀಡೆಗಳನ್ನು ಜಿಲ್ಲಾ ಕ್ರೀಡಾಂಗಣದಲ್ಲಿ, ಕುಸ್ತಿ-ಆಂಜನೇಯ ಬಡಾವಣೆಯ ಕುಸ್ತಿ ಒಳಾಂಗಣ ಕ್ರೀಡಾಂಗಣ, ಚೆಸ್‌, ಕೇರಂ, ಷಟಲ್‌ ಬ್ಯಾಡ್ಮಿಂಟನ್‌- ಎಸ್‌ಎಸ್‌ ಬಡಾವಣೆಯ ನೇತಾಜಿ ಸುಭಾಷ್‌ಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಅಲ್ಲದೆ ಸಾಂಸ್ಕೃತಿಕ ಸ್ಪರ್ಧೆಗಳನ್ನು ರಿಂಗ್‌ ರಸ್ತೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗುವುದು ಎಂದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ರಾಜೀವ್‌, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ರೇಷ್ಮಾ ಕೌಸರ್‌, ನೌಕರರ ಸಂಘದ ರಾಜ್ಯ ಪರಿಷತ್‌ ಸದಸ್ಯ ಸಿದ್ದಲಿಂಗಸ್ವಾಮಿ, ಖಜಾಂಚಿ ಕಲ್ಲೇಶ್ವರಪ್ಪ, ಸಂಘಟನಾ ಕಾರ್ಯದರ್ಶಿ ಮಂಜಮ್ಮ, ತಾಲೂಕು ಘಟಕಗಳ ಅಧ್ಯಕ್ಷರಾದ ಎನ್‌.ಸಿ. ಅಜ್ಜಯ್ಯ, ಚಂದ್ರಶೇಖರ್‌, ರೇವಣಸಿದ್ದಪ್ಪ, ನಾಗರಾಜ್‌ ಹಾಗೂ ತಿಪ್ಪೇಸ್ವಾಮಿ ಸಭೆಯಲ್ಲಿದ್ದರು.

ಇದನ್ನೂ ಓದಿ : ಸರ್ಚ್ ಎಂಜಿನ್ ಸೇವೆಯನ್ನು ಸ್ಥಗಿತಗೊಳಿಸುತ್ತೇವೆ: ಆಸ್ಟ್ರೇಲಿಯಾಕ್ಕೆ ಗೂಗಲ್ ಬೆದರಿಕೆ

Advertisement

Udayavani is now on Telegram. Click here to join our channel and stay updated with the latest news.

Next