ಸಕಲೇಶಪುರ: ಬಾಳ್ಳುಪೇಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಮರಳು ತನಿಖಾ ಠಾಣೆಗೆ ಗುರುವಾರ ಜಿಲ್ಲಾಧಿಕಾರಿ ಗಿರೀಶ್ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಅಧಿಕಾರಿಗಳು ಹಾಜರಿರಲಿಲ್ಲ. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡ ಡೀಸಿ ಇನ್ನು ಮುಂದೆ ಕರ್ತವ್ಯಲೋಪವಾಗದಂತೆ ಎಚ್ಚರ ವಹಿಸಿ ಎಂದರು.
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಗೆ ಕಲ್ಲು ಸಾಗಿಸುವ ಲಾರಿಯನ್ನು ತಡೆದು ಡೀಸಿ ಪರಿಶೀಲಿಸಿದ ಸಂದರ್ಭದಲ್ಲಿ ಲಾರಿ ಚಾಲಕ ಕಲ್ಲು ಸಾಗಣೆ ಮಾಡಲು ಪರವಾನಗಿ ಪ್ರತಿ ಇಟ್ಟುಕೊಳ್ಳದೇ ಕೇವಲ ಮೊಬೈಲ್ ವ್ಯಾಟ್ಸಪ್‌ನಲ್ಲಿ ಇಟ್ಟುಕೊಂಡಿದ್ದಕ್ಕೆ ತರಾಟೆಗೆ ತೆಗೆದು ಕೊಂಡರು. ಸೂಕ್ತ ದಾಖಲೆ ಇಟ್ಟುಕೊಳ್ಳದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಅನಿರೀಕ್ಷಿತವಾಗಿ ತಾಲೂಕಿನ ಬೆಳಗೋಡು ಹೋಬಳಿ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಗಿರೀಶ್ ಜಮೀನು ವಿವಾದ, ವಿಧವಾ ವೇತನ ಹಾಗೂ ಇನ್ನಿತರ ಸರಕಾರಿ ಸೇವೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬೆಳಗೋಡು ನಾಡಕಚೇರಿಗೆ ಯುಪಿಎಸ್ ಸೌಲಭ್ಯ ಕಲ್ಪಿಸುವಂತೆ ಸಾರ್ವಜನಿಕರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಗಿರೀಶ್, ಮಳಲಿ ಗ್ರಾಮದ ಕಸವಿಲೇವಾರಿ ಘಟಕದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ಸುಮಾರು 1.62 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಕರೆಯಲಾಗಿದೆ. ಅಲ್ಲಿಯ ವರೆಗೆ ಪಟ್ಟಣದ ಕಸವನ್ನು ಹಾಸನದ ಅಗಿಲೆ ಘನತ್ಯಾಜ್ಯ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದರು.
ಇದೇ ವೇಳೆ ಪತ್ರಕರ್ತರ ಭವನಕ್ಕಾಗಿ ಮೀಸಲಿರಿಸಿರುವ ಜಾಗದಲ್ಲಿ ಅಕ್ರಮವಾಗಿ ಕಟ್ಟಡವನ್ನು ಕಟ್ಟಿರುವುದನ್ನು ತೆರವುಗೊಳಿಸುಂತೆ ಎಸಿ ಗಿರೀಶ್ ನಂದನ್‌ಗೆ ಆದೇಶಿಸಿದರು. ತಹಶೀಲ್ದಾರ್ ಮಂಜುನಾಥ್, ಬೆಳಗೋಡು ಹೋಬಳಿ ಕಂದಾಯ ನಿರೀಕ್ಷಕ ಜನಾರ್ದನ್, ಪಿಡಿಒ ಪ್ರಭಾ ಹಾಜರಿದ್ದರು.