ಅಣ್ಣಿಗೇರಿ: ಅಂಕೋಲಾ-ಗುತ್ತಿ ರಾಷ್ಟ್ರೀಯ ಹೆದ್ದಾರಿ ಚತುಷ್ಪಥಕ್ಕಾಗಿ ಗೊತ್ತುಪಡಿಸಲಾದ ಭೂಮಿಗೆ ಪರಿಹಾರ ನೀಡುವಲ್ಲಿ ಅನ್ಯಾಯವಾಗಿದೆ ಎಂದು ಕಳೆದ ಏಳು ದಿನಗಳಿಂದ ಧರಣಿ ನಡೆಸುತ್ತಿದ್ದ ಸಂತ್ರಸ್ತರು, ಶುಕ್ರವಾರದಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದಾದ ಹಿನ್ನೆಲೆಯಲ್ಲಿ ಜಿಲ್ಲಾ ಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ ಅವರು ಸಮಾಲೋಚನೆಗಾಗಿ ಜಿಲ್ಲಾ ಧಿಕಾರಿ ಕಚೇರಿಗೆ ಬರಲು ಧರಣಿ ನಿರತರಿಗೆ ಹೇಳಿದ್ದಾರೆ.
ಧರಣಿ ನಿರತ ಸ್ಥಳಕ್ಕೆ ತೆರಳಿ ಸಂತ್ರಸ್ತರ ಅಹವಾಲು ಆಲಿಸಿದ ನಂತರ ಡಿಎಸ್‌ಪಿ ಬಿ.ಪಿ. ಚಂದ್ರಶೇಖರ ಅವರು ಜಿಲ್ಲಾಧಿಕಾರಿ ಜೊತೆ ಮಾತನಾಡಿ ಸಮಾಲೋಚನೆಗಾಗಿ ಸಭೆ ಕರೆಯಲು ಕೋರಿದಾಗ, ಜಿಲ್ಲಾ ಧಿಕಾರಿಯವರು ಶನಿವಾರ ಮಧ್ಯಾಹ್ನ 12 ಗಂಟೆಗೆ ಸಂತ್ರಸ್ತರಿಗೆ ತಮ್ಮ ಕಚೇರಿಗೆ ಬರಲು ತಿಳಿಸಿದರು.
ಇದಕ್ಕೂ ಮೊದಲು ಉಪವಾಸ ಕೈ ಬಿಡುವಂತೆ ವಿನಂತಿಸಿದ ಡಿಎಸ್‌ಪಿ ಬಿ.ಪಿ. ಚಂದ್ರಶೇಖರ ಅವರು, ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಯಾವುದೇ ನಿರ್ಧಾರಗಳನ್ನು ತಕ್ಷಣ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶವಿಲ್ಲ. ಚುನಾವಣೆ ಮುಗಿದ ನಂತರ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮುಂಚೂಣಿಯಲ್ಲಿ ನಿಲ್ಲುವುದಾಗಿ ಹೇಳಿದರು. ಇದಕ್ಕೊಪ್ಪಿದ ಉಪವಾಸ ನಿರತರು ಅಲ್ಲಿಯವರೆಗೆ ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ಹೆದ್ದಾರಿಯ ಯಾವುದೇ ಕಾಮಗಾರಿಗಳನ್ನು ಮಾಡುವಂತಿಲ್ಲ ಎಂದು ಕರಾರು ಹಾಕಿದಾಗ ಚಂದ್ರಶೇಖರ ನಿರುತ್ತರರಾದರು. ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಮಹೇಶ ಅಂಗಡಿ ಮಾತನಾಡಿ, ಹೆದ್ದಾರಿಗಾಗಿ ಗೊತ್ತು ಪಡಿಸಲಾದ ಭೂಮಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ. ಹುಬ್ಬಳ್ಳಿಯಿಂದ ಶಿರಗುಪ್ಪಿ, ಗದಗನಿಂದ ದುಂದೂರ ಕ್ರಾಸ್ ವರೆಗೆ ಎಕರೆಗೆ 40 ಲಕ್ಷ ಪರಿಹಾರ ನೀಡಿದ್ದರೆ, ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಗೆ 8 ಲಕ್ಷ ನೀಡಲಾಗಿದೆ. ಅಲ್ಲದೇ ಅಭಿವೃದ್ಧಿ ಪಡಿಸಿದ ಭೂಮಿಗೆ ಗುಂಟೆಗೆ 13 ಲಕ್ಷ ನೀಡಿದರೆ, ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಯಲ್ಲಿ 70 ಸಾವಿರ ನಿಗದಿ ಪಡಿಸಲಾಗಿದೆ. ಈ ತಾರತಮ್ಯ ಪ್ರಶ್ನಿಸಿದರೆ ಅಣ್ಣಿಗೇರಿ ಭಾಗದಲ್ಲಿ ಭೂಮಿ ಮೌಲ್ಯ ಕಡಿಮೆ ಇದೆ ಎಂದು ಹೇಳುತ್ತಾರೆ. ಭೂಮಿಯ ಮೌಲ್ಯವನ್ನು ಅದರ ಫಲವತ್ತತೆಯಿಂದ ಅಳೆಯಬೇಕೇಹೊರತು ಉದ್ಯಮ ಸ್ಥಾಪನೆಗಳ ಆಧಾರದಿಂದಲ್ಲ ಎಂದರು.
ಅಣ್ಣಿಗೇರಿಯಿಂದ 3 ಕಿಮೀ ದೂರದ ಸೈದಾಪುರ ರಸ್ತೆಯಲ್ಲಿ ಆಶ್ರಯ ಬಡಾವಣೆ ನಿರ್ಮಾಣಕ್ಕೆ ಎಕರೆಗೆ 18 ಲಕ್ಷ ರೂ.ವನ್ನು ಸರಕಾರವೇ ನೀಡಿದೆ. ಆದರೆ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಕಿಮ್ಮತ್ತಿನ ಭೂಮಿಗೆ ಬರೀ 8 ಲಕ್ಷ ಪರಿಹಾರ ನೀಡುವುದು ಯಾವ ಲೆಕ್ಕ? ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ತೆಗೆದುಕೊಂಡ ಎಲ್ಲ ಕಡೆಯ ಭೂಮಿಗೆ ಹೆಚ್ಚಿನ ಮೌಲ್ಯದ ಒಂದೇ ಮಾನದಂಡ ಅನುಸರಿಸಬೇಕಾಗಿತ್ತು. ಅದು ಬಿಟ್ಟು ಅಣ್ಣಿಗೇರಿ ತಾಲೂಕಿಗೆ ಅನ್ಯಾಯ ಬಗೆಯುವುದು ಸರಿಯೇ. ಉತಾರದಲ್ಲಿ ಇನ್ನೂ ರೈತರ ಹೆಸರುಗಳೇ ಇವೆ. ಅವರ ಅನುಮತಿ ಇಲ್ಲದೇ ಏಕಪಕ್ಷೀಯವಾಗಿ ಕಾಮಗಾರಿ ಕೈಗೊಂಡಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಅಣ್ಣಿಗೇರಿ ತಾಲೂಕಿನ ವ್ಯಾಪ್ತಿಯಲ್ಲಿ ನಾಲ್ಕು ಹಳ್ಳಿಗಳಿಗೆ ಸಂಬಂಧಿಸಿದಂತೆ 250 ಸಂತ್ರಸ್ತರಿದ್ದಾರೆ ಎಂದರು.
ಶುಕ್ರವಾರದ ಸರದಿ ಉಪವಾಸದಲ್ಲಿ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಬಸವರಾಜ ಕುಬಸದ, ಪ್ರಕಾಶ ಅಂಗಡಿ, ಚಂಬಣ್ಣ ಸುರಕೋಡ, ಪ್ರಹ್ಲಾದ ಬೆಳಗಲಿ, ಸಂಜೀವರಡ್ಡಿ ಅಮಡ್ಲ, ಸಿ.ಜಿ. ಪಾಟೀಲ, ಮಹೇಶ ಅಂಗಡಿ, ಅರ್ಜುನ ಕಲಾಲ, ಶಿವಪ್ಪ ಬಾಳ್ಳೋಜಿ, ಅರುಣೋದಯ ಹೆಬಸೂರ ಪಾಲ್ಗೊಂಡಿದ್ದರು. ತಾಜುದ್ದೀನ ಸಾಹೇಬ ಕಾಗದ, ಭಗವಂತಪ್ಪ ಪುಟ್ಟಣ್ಣವರ, ಮಂಜುನಾಥ ಆಡಕಾವು ಸಿಪಿಐ ಐ.ಎಸ್. ಗುರುನಾಥ, ಪಿಎಸ್‌ಐ ವೈ.ಎಲ್. ಶೀಗಿಹಳ್ಳಿ ಮತ್ತಿತರ ಪ್ರಮುಖರು ಹಾಜರಿದ್ದರು.