Advertisement

ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ ವಹಿಸಲು ಸೂಚನೆ

04:03 PM Feb 23, 2021 | Team Udayavani |

ದಾವಣಗೆರೆ: ನೆರೆ ರಾಜ್ಯಗಳಾದ ಮಹಾರಾಷ್ಟ್ರ,ಕೇರಳಗಳಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ಜಿಲ್ಲೆಗಳು ಬಹುತೇಕ ಲಾಕ್‌ಡೌನ್‌ ಹಂತ ತಲುಪಿರುವುದಿಂದ ಜಿಲ್ಲೆಯಲ್ಲೂ ಬಹಳಷ್ಟು ಎಚ್ಚರ ವಹಿಸಬೇಕು ಎಂದು ಜಿಲ್ಲಾ ದಿಕಾರಿ ಮಹಾಂತೇಶ ಬೀಳಗಿ ಸೂಚಿಸಿದರು.

Advertisement

ಸೋಮವಾರ ಜಿಲ್ಲಾಡಳಿತ ಭವನದಲ್ಲಿ ಆಯೋಜಿಸಿದ್ದ ಕೋವಿಡ್‌-19 ಎರಡನೇ ಅಲೆಯ ಮುಂಜಾಗ್ರತಾ ಕ್ರಮಗಳ ಜಿಲ್ಲಾ ಕಣ್ಗಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾತ್ರೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ತಾವಾಗಿಯೇ ಮುಂಜಾಗ್ರತಾ ಕ್ರಮ ಅನುಸರಿಕೊಂಡು ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್‌ ಬಳಕೆ ಮಾಡಬೇಕು. ಆದಷ್ಟು ಜಾತ್ರೆ, ಮಹೋತ್ಸವಗಳಿಗೆ ಹೋಗದೆ ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬೇಕು. ಜಾತ್ರೆ, ಮಹೋತ್ಸವ ಸ್ಥಳಗಳಲ್ಲಿ ರ್‍ಯಾಂಡಮ್‌ ಪರೀಕ್ಷೆ ಮಾಡಬೇಕು ಎಂದರು.

ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ ಸೇರಿದಂತೆ ಹೊರ ರಾಜ್ಯದಿಂದ ಬರುವವರ ಕುರಿತು ಎಚ್ಚರ  ವಹಿಸಬೇಕು. ಕಳೆದ 15 ದಿನದ ನಂತರ ಬಂದವರನ್ನು ಪತ್ತೆಹಚ್ಚಿ ಖುದ್ದಾಗಿ ಪರೀಕ್ಷೆ ನಡೆಸಿ, ಲಸಿಕೆ ನೀಡಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಟಾಸ್ಕ್ಫೋರ್ಸ್‌ ಸಮಿತಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಬೇಕು. ಕೋವಿಡ್‌ ಲಕ್ಷಣಗಳಿರುವ ಜನರನ್ನು ಕರೆತಂದು ಟೆಸ್ಟ್‌ ಮಾಡಿಸಬೇಕು. ಹೊರರಾಜ್ಯಗಳಿಂದ ಆಗಮಿಸಿದ ಪ್ರಯಾಣಿಕರ ಮಾಹಿತಿ ಸಿಕ್ಕ ತಕ್ಷಣ ಅವರನ್ನು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಆರೋಗ್ಯ ಇಲಾಖೆಯವರು ಜಿಲ್ಲೆಗೆ ನಿಗದಿಪಡಿಸಿರುವ ಪ್ರತಿ ನಿತ್ಯ 2,800 ಟೆಸ್ಟ್ ಗಳನ್ನು ಕಡ್ಡಾಯವಾಗಿ ಮಾಡಿ ಅಂದೇ ವರದಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಎಪಿಎಂಸಿ ಮಾರುಕಟ್ಟೆಗಳಲ್ಲಿ ಪ್ರತಿನಿತ್ಯ ಆಗಮಿಸುವ ಚಾಲಕರು, ಕ್ಲೀನರ್‌, ತರಕಾರಿ, ಹಣ್ಣು ಮಾರಾಟಗಾರರು, ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುವವರು ಕಡ್ಡಾಯವಾಗಿ ಟೆಸ್ಟ್‌ ಮಾಡಿಸಿಕೊಳ್ಳಬೇಕು. ಕೆಎಸ್ಸಾರ್ಟಿಸಿ ಅಧಿಕಾರಿಗಳು ಹೊರರಾಜ್ಯಗಳಿಂದ ಬರುವ ಚಾಲಕ, ಕಂಡಕ್ಟರ್‌ ಹಾಗೂ ಪ್ರಯಾಣಿಕರ ಟೆಸ್ಟ್‌ಗಳನ್ನು ಮಾಡಿಸಬೇಕು. ನಗರದಲ್ಲಿರುವ ನರ್ಸಿಂಗ್‌ ಕಾಲೇಜುಗಳಿಗೆ ಕೇರಳದಿಂದ ಬರುವವರನ್ನು ಕೂಡ ಕೋವಿಡ್‌ ತಪಾಸಣೆ ಒಳಪಡಿಸಬೇಕು ಎಂದು ತಿಳಿಸಿದರು.

ಎಲ್ಲಾ ತಾಲೂಕುಗಳಲ್ಲಿ ಟೆಸ್ಟ್‌ ಪ್ರಮಾಣ ಹೆಚ್ಚಿಸಬೇಕು. 60 ವರ್ಷ ದಾಟಿದವರಿಗೆ ಕಡ್ಡಾಯವಾಗಿ ಕೊರೊನಾ ಟೆಸ್ಟ್‌ ಆಗಬೇಕು. ದೊಡ್ಡ ಹೋಟೆಲ್‌ಗ‌ಳಲ್ಲಿ ಕಾರ್ಯನಿರ್ವಹಿಸುವ ಸಪ್ಲೈಯರ್ಸ್‌, ಕ್ಲೀನರ್, ಕೇಟರಿಂಗ್‌ ಕೆಲಸಗಳಲ್ಲಿ ತೊಡಗಿರುವವರು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.  ಈಗಾಗಲೇ ಕೋವಿನ್‌ ಪೋರ್ಟಲ್‌ನಲ್ಲಿ ರಿಜಿಸ್ಟರ್‌ ಮಾಡಿಸಿಕೊಂಡಿರುವವರು ವ್ಯಾಕ್ಸಿನ್‌ ಪಡೆಯಲು ಎಸ್‌ಎಂಎಸ್‌ ಬರುವವರೆಗೂ ಕಾಯಬೇಕಾಗಿಲ್ಲ. ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಿ ಆಧಾರ್‌ ಕಾರ್ಡ್‌ ತೋರಿಸಿ ಮಂಗಳವಾರದಿಂದ ಮೂರು ದಿನಗಳ ಒಳಗಾಗಿ ಲಸಿಕೆ ಪಡೆಯಬಹುದು ಎಂದು ಹೇಳಿದರು. ಇತ್ತೀಚೆಗೆ ಆಸ್ಪತ್ರೆಗಳಲ್ಲಿ ಐಎಲ್‌ಐ ಹಾಗೂ ಸಾರಿ ಕೇಸ್‌ಗಳನ್ನು ಜಿಲ್ಲಾ ಸರ್ವೇಕ್ಷಣ ತಂಡಕ್ಕೆ ವರದಿ ಮಾಡದೇ ಇರುವುದು ಕಂಡು ಬಂದಿದೆ.

Advertisement

ಮಂಗಳವಾರದಿಂದ ಎಲ್ಲಾ ಆಸ್ಪತ್ರೆಯವರು ಐಎಲ್‌ಐ ಹಾಗೂ ಸಾರಿ ಕೇಸ್‌ಗಳನ್ನು ವರದಿ ಮಾಡಬೇಕು. ಇಲ್ಲದಿದ್ದಲ್ಲಿ ಕೆಪಿಎಂಇ ಕಾಯ್ದೆಯಡಿ ನೋಟಿಸ್‌ ನೀಡಿ ಅಂತಹ ಆಸ್ಪತ್ರೆಗಳನ್ನು ಮುಚ್ಚಿಸಲಾಗುವುದು. ಈಗಾಗಲೇ 11 ಆಸ್ಪತ್ರೆಗಳನ್ನು ಬಂದ್‌ ಮಾಡಲಾಗಿದೆ ಎಂದರು.

8 ಮತ್ತು 9ನೇ ತರಗತಿಗಳು ಆರಂಭವಾಗಿದ್ದು, ಮಕ್ಕಳು ರಜಾ ದಿನಗಳಲ್ಲಿ ಬೇರೆ ಬೇರೆ ಊರುಗಳಿಗೆ ಹೋಗಿ ಬಂದಿರುವುದರಿಂದ ಅಲ್ಲಿಯ ಶಿಕ್ಷಕ ವೃಂದದವರಿಗೆ ಟೆಸ್ಟ್‌ ಮಾಡಿಸಬೇಕು. ಕಾರ್ಪೋರೇಷನ್‌, ಸ್ಥಳೀಯ ಸಂಸ್ಥೆಗಳು ಹಾಗೂ ಎರಡು ಮೆಡಿಕಲ್‌ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಡಿ ಗ್ರೂಪ್‌ ನೌಕರರಿಗೆ ಕಡ್ಡಾಯವಾಗಿ ಟೆಸ್ಟ್‌ ಮಾಡಿಸಬೇಕು. ಪ್ರೈಮರಿ, ಸೆಕೆಂಡರಿ ಶಾಲಾ ಶಿಕ್ಷಕರಿಗೆ ಲಸಿಕೆ ನೀಡಲು ಎಸಿಎಸ್‌ರವರಿಗೆ ಶಿಫಾರಸು ಮಾಡಲಾಗುವುದು.

ಸ್ಥಳೀಯ ಸಂಸ್ಥೆಗಳು ಹಾಗೂ ಸಿಜಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಹೊರ ಗುತ್ತಿಗೆ ನೌಕರರು ಒಂದು ವೇಳೆ ಕೋವಿಡ್‌ ಲಸಿಕೆ ಪಡೆಯಲು ನಿರಾಕರಿಸಿದರೆ ಅವರನ್ನು ಕೆಲಸದಿಂದ ವಜಾಗೊಳಿಸಿ ಬೇರೆಯವರನ್ನು ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು. ಜಿಲ್ಲಾ ಸರ್ವೇಕ್ಷಣಾ ಧಿಕಾರಿ ಡಾ| ರಾಘವನ್‌ ಮಾತನಾಡಿ, ಪಾಸಿಟಿವಿಟಿ ರೇಟ್‌ ಕಡಿಮೆ ಇದೆ. ಈಗಾಗಲೇ 36 ತಂಡಗಳು ಹಾಗೂ ಎನ್‌ ಎಚ್‌ಎಂ ಕಡೆಯಿಂದ 25 ತಂಡಗಳಿಂದ ಟೆಸ್ಟ್‌ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಟೆಸ್ಟ್ ಗಳ ಸಂಖ್ಯೆ ಹೆಚ್ಚಿಸಲಾಗುವುದು. ಜಿಲ್ಲೆಯಲ್ಲಿ ಪ್ರತಿನಿತ್ಯ 2,863 ಗಂಟಲು ದ್ರವದ ಮಾದರಿಗಳ ಪರೀಕ್ಷೆ ನಡೆಸುವ ಗುರಿಯಲ್ಲಿ 2545 ಆರ್‌ ಟಿಪಿಸಿಆರ್‌ ಹಾಗೂ 318 ರ್ಯಾಟ್‌ ಪರೀಕ್ಷೆಗಳನ್ನು ಮಾಡಲು ಗುರಿ ಇದೆ. ಕಳೆದ 7 ದಿನಗಳಿಂದ ಪ್ರಗತಿ ಕುಂಠಿತಗೊಂಡಿದೆ.  ಮಂಗಳವಾರದಿಂದ ಟೆಸ್ಟ್‌ಗಳನ್ನು ಹೆಚ್ಚಿಸಲಾಗುವುದು ಎಂದರು.

ಜಿಪಂ ಸಿಇಒ ಡಾ| ವಿಜಯ ಮಹಾಂತೇಶ್‌ ದಾನಮ್ಮನವರ್‌, ಉಪವಿಭಾಗಾಧಿಕಾರಿ ಡಾ| ಮಮತಾ ಹೊಸಗೌಡರ್‌, ಡಾ| ನಾಗರಾಜು, ಡಾ| ಜಯಪ್ರಕಾಶ್‌, ಡಾ| ರೇಣುಕರಾಧ್ಯ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next