Advertisement
ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ಸಾಗಾಟ ಹಾಗೂ ಸಂಗ್ರಹಣೆಯಲ್ಲಿ ತೊಡಗಿರುವ ಆರೋಪಿಗಳ ಹೆಡೆಮುರಿ ಕಟ್ಟಲು ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೆ.5ರಂದು “ಉದಯವಾಣಿ’ಯಲ್ಲಿ “ಪಡಿತರ ಅಕ್ಕಿ ಅಕ್ರಮ ಸಾಗಾಟ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಗೊಂಡ ಹಿನ್ನೆಲೆಯಲ್ಲಿ, ಆಹಾರ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮಕ್ಕೆ ಕಡಿವಾಣ ಹಾಕಬೇಕೆಂದು ಜಿಲ್ಲಾಧಿಕಾರಿಗಳು ಆಹಾರ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಸಿದ್ದಾರೆ. ಕಳೆದ ತಿಂಗಳಲ್ಲಿ ಕೂಡ ಹುಮನಾಬಾದ ಪಟ್ಟಣದಲ್ಲಿ ಅಕ್ಕಿ ಗೋದಾಮಿನ ಮೇಲೆದಾಳಿ ನಡೆದ ಸಂದರ್ಭದಲ್ಲಿ ಕ್ಷೀರ ಭಾಗ್ಯ ಯೋಜನೆಯ 50 ಪ್ಯಾಕ್ ಹಾಲಿನ ಪೌಡರ್ ಪತ್ತೆಯಾಗಿದ್ದವು. ನಂತರ ಚಿಟಗುಪ್ಪ ಪಟ್ಟಣದಲ್ಲಿ ದಾಳಿ ನಡೆದ ಸಂದರ್ಭದಲ್ಲಿ ಕ್ಷೀರ ಭಾಗ್ಯ ಯೋಜನೆಯ ಸುಮಾರು ನಾಲ್ಕು ಕ್ವಿಂಟಲ್ ಹಾಲಿನ ಪ್ಯಾಕ್‌ಗಳು ಪತ್ತೆಯಾಗಿದ್ದವು. ಇದೀಗ ಹುಮನಾಬಾದ ಪಟ್ಟಣದ ಎಪಿಎಂಸಿ ಪ್ರಾಂಗಣದ ಗೋದಾಮಿನಲ್ಲಿ ದಾಳಿ ನಡೆದ ಸಂದರ್ಭದಲ್ಲಿ 74 ಪ್ಯಾಕ್‌ಗಳು ಪತ್ತೆಯಾಗಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಕಳ್ಳ ದಂಧೆಯಲ್ಲಿ ಭಾಗಿಯಾಗಿದ್ದಾರೆ
ಎಂಬ ಅನುಮಾನಕ್ಕೆ ಪುಷ್ಟಿ ಬಂದಿದೆ.
Related Articles
Advertisement
ಕಾಣದ ಕೈಗಳು: ಅಕ್ರಮ ಪಡಿತರ ಅಕ್ಕಿ, ಗೋಧಿ ಹಾಗೂ ಮಕ್ಕಳ ಕ್ಷೀರಭಾಗ್ಯ ಯೋಜನೆಯ ಹಾಲಿ ಪ್ಯಾಕ್‌ಗಳು ಖಾಸಗಿ ಗೋದಾಮುಗಳಲ್ಲಿ ಪತ್ತೆಯಾಗುತ್ತಿದ್ದು, ಈ ದಂಧೆಕೋರರ ಹಿಂದೆ ಪ್ರಭಾವಿ ರಾಜಕಾರಣಿಗಳು ಇದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕಾಣದ ಕೈಗಳು ಈ ಅಕ್ರಮಕ್ಕೆ ಸಾಥ್ ನೀಡುತ್ತಿವೆ ಎಂಬ ಆರೋಪಗಳು ಇದ್ದು, ಸದ್ಯ ಜಿಲ್ಲಾಧಿಕಾರಿಗಳು ತೆಗೆದುಕೊಂಡ ದಿಟ್ಟ ಹೆಜ್ಜೆಯಿಂದ ಅಕ್ರಮ ದಂಧೆಗೆ ಕಡಿವಾಣ ಬೀಳಬಹುದೇ ಎಂಬುದನ್ನು ಕಾದುನೊಡಬೇಕಾಗಿದೆ.