Advertisement

ಮಲ್ಲೇಶಪ್ಪ ವಿರುದ್ಧ ಕ್ರಮ ವಹಿಸುವಂತೆ ಡೀಸಿಗೆ ಮನವಿ

09:12 PM Jun 18, 2019 | Team Udayavani |

ಸಂತೆಮರಹಳ್ಳಿ: ರಾಜ್ಯ ವನ್ಯಜೀವಿ ಮಂಡಲಿ ಸದಸ್ಯ ಹಾಗೂ ಬಿಳಿಗಿರಿರಂಗನಬೆಟ್ಟದಲ್ಲಿರುವ ವಿವೇಕಾನಂದ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಲ್ಲೇಶಪ್ಪ ಬಿಳಿಗಿರಿ ರಂಗನಬೆಟ್ಟದಲ್ಲಿ ರೈಸ್‌ಪುಲ್ಲಿಂಗ್‌, ಕಾಡು ಪ್ರಾಣಿಗಳ ಬೇಟೆ ಸೇರಿದಂತೆ ವಿವಿಧ ಅಕ್ರಮಗಳಲ್ಲಿ ಭಾಗವಹಿಸಿರುವ ಶಂಕೆ ಇರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಳಿಗಿರಿರಂಗನಬೆಟ್ಟದ ಗ್ರಾಮಸ್ಥರು ಜಿಲ್ಲಾಧಿಕಾರಿ ಬಿ.ಬಿ.ಕಾವೇರಿಗೆ ಮನವಿ ಸಲ್ಲಿಸಿದರು.

Advertisement

ಮಲ್ಲೇಶಪ್ಪ ಬೆಟ್ಟದಲ್ಲಿ ಹಲವು ವರ್ಷಗಳಿಂದಲೂ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದ್ದಾರೆ. ಇತ್ತೀಚೆಗೆ ರೈಸ್‌ಪುಲ್ಲಿಂಗ್‌ ಹಾಗೂ ಕಾಡು ಪ್ರಾಣಿಗಳ ಬೇಟೆಯಲ್ಲಿ ಬಂಧಿಸಿರುವ ಆರೋಪಿಗಳು ಇವರ ಮನೆಯಲ್ಲೇ ವಾಸ್ತವ್ಯ ಇದ್ದರು ಎಂಬುದನ್ನು ಸ್ವತಃ ಇವರೇ ಬಯಲು ಮಾಡಿದ್ದಾರೆ. ಹಾಗಾಗಿ ಕೂಡಲೇ ಇವರನ್ನು ವನ್ಯಜೀವಿ ಮಂಡಲಿ ಸದಸ್ಯತ್ವದಿಂದ ವಜಾ ಮಾಡುವಂತೆ ಶಿಫಾರಸು ಮಾಡಬೇಕು. ಈ ಪ್ರಕರಣದಲ್ಲಿ ಇವರ ಹೆಸರನ್ನು ಸೇರಿಸಬೇಕು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಅಧಿಕಾರಿಗಳ ತಂಡ ರಚಿಸಿ: ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ನಲ್ಲಿ ಅವ್ಯವಹಾರ ನಡೆದಿದೆ. ಕಾರ್ಯಕಾರಿ ಸಮಿತಿ ಸದಸ್ಯರು, ಸಂಸ್ಥೆಯ ಪತ್ರ ವ್ಯವಹಾರಗಳು, ಸಂಸ್ಥೆಗೆ ವಿವಿಧ ರೂಪದಲ್ಲಿ ಬಂದಿರುವ ದೇಣಿಗೆ ಮತ್ತು ಬ್ಯಾಂಕ್‌ ಖಾತೆಗಳ ಬಗ್ಗೆ ತನಿಖೆ ನಡೆಸಬೇಕು. ಟ್ರಸ್ಟ್‌ನ ಹೆಸರಿನಲ್ಲಿರುವ ಅಕ್ರಮ ಆಸ್ತಿಗಳ ಬಗ್ಗೆ ತನಿಖೆಯಾಗಬೇಕು. ಇದಕ್ಕೆ ಉನ್ನತ ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಬೇಕು ಎಂದು ಆಗ್ರಹಿಸಿದರು.

ಕಾನೂನು ಕ್ರಮಕ್ಕೆ ಒತ್ತಾಯ: ಮೊದಲಿಗೆ ವಿಜಿಕೆಕೆ ಸಂಸ್ಥೆಯಲ್ಲಿ ಕೆಲಸಕ್ಕೆ ಸೇರಿಕೊಂಡ ಮಲ್ಲೇಶಪ್ಪ ಗಿರಿಜನ ಸಮುದಾಯದ ಏಳಿಗೆಗೆ ಮತ್ತು ಉಪಯೋಗಕ್ಕೆಂದು ಕೆಲವೊಂದು ಭೂಮಿಯನ್ನು ಪಡೆದು ಅದನ್ನು ತಮ್ಮ ಹೆಸರಿಗೆ ನೇರವಾಗಿ ಖಾತೆ ಮಾಡಿಕೊಂಡಿದ್ದು ಇಲ್ಲೂ ಅಕ್ರಮ ಎಸೆಗಿದ್ದಾರೆ. ಇದು ಕೋರ್ಟ್‌ನಲ್ಲಿ ವಿಜಿಕೆಕೆ ಸಂಸ್ಥೆಯ ಪರವಾಗಿ ಇತ್ಯರ್ಥವಾಗಿದ್ದರೂ ಇದನ್ನು ಬಿಟ್ಟುಕೊಡದೆ ದೌರ್ಜನ್ಯ ಮಾಡುತ್ತಿದ್ದಾರೆ.

ಹಾಗಾಗಿ ಕೂಡಲೇ ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಬಿಳಿಗಿರಿರಂಗನಬೆಟ್ಟದ ಜಿಲ್ಲಾ ಬುಡಕಟ್ಟು ಸಂಘದ ಸಂಯೋಜಕ ಮಾದಪ್ಪ, ತಾಲೂಕು ಗಿರಿಜನ ಸಂಘದ ಅಧ್ಯಕ್ಷ ರಂಗೇಗೌಡ ಕಾರ್ಯದರ್ಶಿ ಬೇದೇಗೌಡ ಗ್ರಾಪಂ ಮಾಜಿ ಅಧ್ಯಕ್ಷ ಶೇಷಾದ್ರಿ, ವೆಂಕಟೇಶ್‌, ಸಂತೋಷ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next