Advertisement

ವರ್ಷದಲ್ಲೇ ಡೀಸಿ ಅನಿರುದ್ಧ್ ವರ್ಗಾವಣೆ

09:27 PM Aug 07, 2019 | Team Udayavani |

ಚಿಕ್ಕಬಳ್ಳಾಪುರ: ಬರದ ಜಿಲ್ಲೆಯಲ್ಲಿ ಎಷ್ಟೋ ವರ್ಷಗಳ ಕಾಲ ನಿರ್ವಹಣೆ ಇಲ್ಲದೇ ಪಾಳು ಬಿದ್ದಿದ್ದ ಕಲ್ಯಾಣಿಗಳ ಪುನಶ್ಚೇತನಕ್ಕೆ ಕೈ ಹಾಕಿ ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಗೆ ಪೂರಕವಾಗಿ ಕೆರೆ, ಕಲ್ಯಾಣಿಗಳ ಅಕ್ರಮ ಒತ್ತುವರಿ ತೆರವು, ಮಳೆ ನೀರು ಸದ್ಬಳಕೆಗೆ ಮಳೆ ಕೊಯ್ಲು ಪದ್ಧತಿಗಳನ್ನು ಜಿಲ್ಲಾದ್ಯಂತ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿ ಜನಪರ ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ್ ಪಿ.ಶ್ರವಣ್‌ರನ್ನು ರಾಜ್ಯ ಸರ್ಕಾರ ಬುಧವಾರ ಸ್ಥಳ ಸೂಚಿಸದೆ ವರ್ಗಾವಣೆ ಮಾಡಿರುವುದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Advertisement

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದೊಡ್ಡ ಮಟ್ಟದಲ್ಲಿ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ಮುಂದುವರಿದಿರುವ ಬೆನ್ನಲೇ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಬಂದ ವರ್ಷದಲ್ಲಿಯೆ ಹಲವು ಜನಪರವಾದ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದ್ದ ಜಿಲ್ಲಾಧಿಕಾರಿಗಳ ವರ್ಗಾವಣೆ ಸಾರ್ವಜನಿಕ ವಲಯದಲ್ಲಿ ಸರ್ಕಾರ ಟೀಕೆಗೆ ಗುರಿಯಾಗಿದೆ.

ಕಳೆದ 2018ರ ಆಗಸ್ಟ್‌ 1 ರಂದು ಜಿಲ್ಲಾಧಿಕಾರಿಯಾಗಿದ್ದ ದೀಪ್ತಿ ಆದಿತ್ಯ ಕಾನಡೆ ವರ್ಗಾವಣೆ ಬಳಿಕ ಸರ್ಕಾರ ಅನಿರುದ್ಧ್ ಶ್ರವಣ್‌ರನ್ನು ನೇಮಿಸಿತ್ತು. ಅವರು ಜಿಲ್ಲೆಗೆ ಆಗಮಿಸಿ ಕೇವಲ 1 ವರ್ಷ 9 ದಿನ ಮಾತ್ರ ಮುಗಿದಿದೆ. ಕನಿಷ್ಠ ಎರಡು ವರ್ಷ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಾರೆಂಬ ನಿರೀಕ್ಷೆ ಹುಸಿಯಾಗಿದ್ದು, ಹೊಸ ಸರ್ಕಾರ ಬಂದ ಬಳಿಕ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿಗಳನ್ನು ನೇಮಿಸಿ ಆದೇಶಿಸಿದ್ದು, ಜಿಲ್ಲಾಧಿಕಾರಿಗಳ ವರ್ಗಾವಣೆ ಸಹಜವಾಗಿಯೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸತತ ಬರಗಾಲದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ಧಿಗೆ ಪೂರಕವಾಗಿ ಸಾಕಷ್ಟು ಯೋಜನೆಗಳನ್ನು ಆಸಕ್ತಿಯಿಂದ ರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ದಿಸೆಯಲ್ಲಿ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌, ಜಿಲ್ಲೆಗೆ ಬಂದ ಆರಂಭದಲ್ಲಿ ಜಿಲ್ಲೆಯ ರೈತಾಪಿ ಜನಕ್ಕೆ ನಮಗಾಗಿ ಒಂದು ಯೋಜನೆ ಇದೆ ಎನ್ನುವಷ್ಟರ ಮಟ್ಟಿಗೆ ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಿದ್ದರು.

ಕಲ್ಯಾಣಿಗಳ ಪುನಶ್ಚೇತನ: ಜಿಲ್ಲೆಯಲ್ಲಿ ಪಾಳು ಬಿದ್ದಿದ್ದ ಎಷ್ಟೋ ವರ್ಷಗಳ ಕಾಲ ಪುನೆಶ್ಚೇತನಗೊಳ್ಳದೇ 100 ಕ್ಕೂ ಹೆಚ್ಚು ಕಲ್ಯಾಣಿಗಳನ್ನು ಸರ್ಕಾರದ ಅನುದಾನ ಪಡೆಯದೇ ಕೇವಲ ಅಧಿಕಾರಿಗಳ ಹಾಗೂ ಗ್ರಾಪಂ ಮಟ್ಟದಲ್ಲಿ ಸಾರ್ವಜನಿಕರ ಸಹಯೋಗದೊಂದಿಗೆ ಪುನಶ್ಚೇನಗೊಳಿಸಿದ್ದ ಕೀರ್ತಿ ಜಿಲ್ಲಾಧಿಕಾರಿಗೆ ಸಲ್ಲುತ್ತದೆ. ಒಂದು ರೀತಿ ಜಿಲ್ಲಾದ್ಯಂತ ಆಂದೋಲನವಾಗಿ ನಡೆದ ಕಲ್ಯಾಣಿಗಳ ಪುನಶ್ಚೇತನ ಕಾರ್ಯ ಜಿಲ್ಲೆಯ ಉದ್ದಗಲಕ್ಕೂ ನಡೆದಿತ್ತು. ಇನ್ನೂ ಕೆರೆ ಒತ್ತುವರಿ ವಿಚಾರದಲ್ಲಿ ಕೂಡ ಸಾಕಷ್ಟು ಕಾಳಜಿ ವಹಿಸಿ, ಸರ್ಕಾರಿ ಜಮೀನುಗಳ ಒತ್ತುವರಿ ತೆರವುಗೊಳಿಸಿದ್ದರು.

Advertisement

ಪ್ರತಿ ತಿಂಗಳು ಕನಿಷ್ಠ 4, 5 ಕೆರೆ, ಕುಂಟೆಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಗುರಿ ನಿಗದಿಪಡಿಸಿದ್ದರು. ಅದರಂತೆ ಜಿಲ್ಲೆಯಲ್ಲಿ ಇವರು ಬಂದ ಮೇಲೆ ನೂರಾರು ಎಕೆರೆ ಸರ್ಕಾರಿ ಜಮೀನು ಒತ್ತುವರಿ ತೆರವುಗೊಂಡಿದೆ. ಅನೇಕ ಕಂದಾಯ ಕಡತಗಳಿಗೆ ಮುಕ್ತಿ ಸಿಕ್ಕಿದೆ. ಆದರೆ ಇತಂಹ ಜನಪರವಾದ ಜಿಲ್ಲಾಧಿಕಾರಿಯನ್ನು ವರ್ಷ ಮುಗಿಯುವುದರೊಳಗೆ ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಜಿಲ್ಲಾಧಿಕಾರಿಗಳನ್ನು ಜಿಲ್ಲೆಯಲ್ಲಿಯೆ ಮುಂದುವರೆಸಬೇಕೆಂಬ ಆಗ್ರಹ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.

ಮಳೆ ಕೊಯ್ಲು ಪದ್ಧತಿಗೆ ಒತ್ತು: ಜಿಲ್ಲೆಯಲ್ಲಿ ಮಳೆ ನೀರನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಲು ಮಳೆ ಕೊಯ್ಲು ಯೋಜನೆ ಅನುಷ್ಠಾನಕ್ಕೆ ಸಾಕಷ್ಟು ಸಿದ್ಧತೆಗಳನ್ನು ಡೀಸಿ ನಡೆಸುತ್ತಿದ್ದರು. ಇದಕ್ಕಾಗಿ ಸರಣಿಯಂತೆ ಅಧಿಕಾರಿಗಳ ಸಭೆ ನಡೆಸಿ ಪ್ರತಿ ತಾಲೂಕಿನ ನಗರಸಭೆ, ಪುರಸಭೆಗೆ ನೋಡಲ್‌ ಅಧಿಕಾರಿಗಳು ನೇಮಕ ಮಾಡಿದ್ದರು. ಅದರಲ್ಲೂ ಮಳೆ ಕೊಯ್ಲು ಯೋಜನೆ ಅಳವಡಿಸಿಕೊಳ್ಳುವ ಮನೆಗೆ ಸ್ಥಳೀಯ ಸಂಸ್ಥೆಗಳಿಂದ 5 ಸಾವಿರ ರೂ, ಪ್ರೋತ್ಸಾಹ ಧನ ನೀಡುವುದಾಗಿ ಘೋಷಿಸಿದ್ದರು. ಆದರೆ ಅನುಷ್ಠಾನದ ಸಿದ್ಧತೆ ನಡೆಸುತ್ತಿರುವಾಗಲೇ ಜಿಲ್ಲಾಧಿಕಾರಿ ಅನಿರುದ್ಧ್ ಶ್ರವಣ್‌ರನ್ನು ವರ್ಗಾವಣೆ ಮಾಡಿರುವುದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಸುತ್ತಿದೆ. ಜಿಲ್ಲೆಗೆ ಅನಿರುದ್ಧ್ ಶ್ರವಣ್‌, ಜಿಲ್ಲಾಧಿಕಾರಿಯಾಗಿ ಬಂದ ನಂತರ ಜಿಲ್ಲೆಯಲ್ಲಿ ಸಾಕಷ್ಟು ಜನಪರವಾಗಿ ಕೆಲಸ ಮಾಡಿದ್ದಾರೆ. ಅವರ ವರ್ಗಾವಣೆ ಹಿಂದೆ ಕಾಣದ ಕೈಗಳು ಇರುವುದು ಸ್ಪಷ್ಟ.. ಕೂಡಲೇ ಜಿಲ್ಲಾಧಿಕಾರಿ ಅನಿರುದ್ಧ್ ವರ್ಗಾವಣೆ ಕೈ ಬಿಡಬೇಕು.
-ರಾಮನಾಥ್‌, ರಾಜ್ಯ ರೈತ ಸಂಘದ ಅಧ್ಯಕ್ಷರು, ಗುಡಿಬಂಡೆ

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next