Advertisement
ಸುಮಾರು 8 ವರ್ಷಗಳಿಂದ ‘ಬಾಲಮಂಗಳ ಎಕ್ಸ್‌ಪ್ರೆಸ್’ ಪುಟಾಣಿ ರೈಲು ಓಡಾಟ ನಿಲ್ಲಿಸಿ ಮಕ್ಕಳಿಗೆ ನಿರಾಶೆಯಾಗಿತ್ತು. ಈ ನಡುವೆ ಹಲವು ಬಾರಿ ರೈಲು ಪಾರ್ಕ್‌ಗೆ ಆಗಮಿಸಲಿದೆ ಎಂದು ಹೇಳಲಾಗಿತ್ತಾದರೂ ಬಂದಿರಲಿಲ್ಲ.ಕೊನೆಗೂ ಕಳೆದ ವರ್ಷ ಡಿ. 22ರಂದು ನೂತನ ಪುಟಾಣಿ ರೈಲು ಕದ್ರಿ ಪಾರ್ಕ್‌ಗೆ ಆಗಮಿಸಿದ್ದು, ಜ. 7ರಂದು ಓಡಾಟಕ್ಕೆ ಚಾಲನೆ ಪಡೆದಿತ್ತು. ಆದರೆ ಬಳಿಕ ಸ್ವಲ್ಪ ಸಮಯ ಪ್ರಾಯೋಗಿಕ ಓಡಾಟ ನಡೆಸಿದ ರೈಲು ಮತ್ತೆ ನಿಂತಿತ್ತು. ಇದಕ್ಕೆ ಕಾರಣ ಪಾರ್ಕ್‌ನ ಉತ್ತರ ಭಾಗದಲ್ಲಿ ಹಳಿಯ ಬಳಿಯಲ್ಲಿರುವ ಬಾಟಲ್ ಪಾಮ್ ಮರಗಳು.
ರೈಲಿನಲ್ಲಿ ಪ್ರಯಾಣಿಸುವಾಗ ಟ್ರ್ಯಾಕ್ ನ ಸನಿಹದಲ್ಲಿ ನಿಂತು ನೋಡುವ ಸಂಬಂಧಿಕರು, ಪೋಷಕರತ್ತ ಕೈ ಬೀಸುತ್ತಾ ಮಕ್ಕಳು ಸಾಗುತ್ತಾರೆ. ಹೀಗೆ ಮಾಡುವಾಗ ಟ್ರ್ಯಾಕ್ ಸನಿಹದಲ್ಲಿರುವ 4 ಬಾಟಲ್ ಪಾಮ್ ಮರಗಳು ಮಕ್ಕಳ ಕೈಗಳಿಗೆ ತಾಗುತ್ತಿದ್ದವು. ಹಾಗಾಗಿ ಸಂಭವನೀಯ ಅವಘಡಗಳನ್ನು ತಪ್ಪಿಸಲು ರೈಲನ್ನು ನಿಲುಗಡೆಗೊಳಿಸಲಾಗಿತ್ತು. ಅಲ್ಲದೆ ರೈಲ್ವೇ ಇಲಾಖೆಯೂ ರೈಲಿನ ಅಧಿಕೃತ ಓಡಾಟಕ್ಕೆ ಅನುಮತಿ ನೀಡಿರಲಿಲ್ಲ. ಮರಗಳಿಂದಾಗುತ್ತಿರುವ ಸಮಸ್ಯೆ ಮತ್ತು ಅದನ್ನು ಕಡಿದು ಬೇರೆ ಸಸಿಗಳನ್ನು ನೆಡಲಾಗುವ ಬಗ್ಗೆ ಈಗಾಗಲೇ ಸಾರ್ವಜನಿಕರ ಸಭೆ ಕರೆದು ಮಾಹಿತಿ ನೀಡಲಾಗಿದೆ. ಹಾಗಾಗಿ ಈ ಸಂಬಂಧ ಅಪಸ್ವರಗಳು ಬಾರದು ಎಂದು ತೋಟಗಾರಿಕಾ ಇಲಾಖೆ ಸ್ಪಷ್ಟಪಡಿಸಿದೆ. ಮರ ಕಡಿದ ಬಳಿಕವಷ್ಟೇ ರೈಲ್ವೇ ಇಲಾಖೆಯು ಪುಟಾಣಿ ರೈಲು ಓಡಾಟಕ್ಕೆ ಅನುಮತಿ ನೀಡಲಿದೆ.
Related Articles
ರೈಲ್ವೇ ಇಲಾಖೆ ಅಡಿಯಲ್ಲಿ ಈ ರೈಲು ನಿರ್ಮಾಣಗೊಂಡಿದ್ದು, ಒಟ್ಟು 1.35 ಕೋಟಿ ರೂ. ವೆಚ್ಚವಾಗಿದೆ. 3 ಬೋಗಿಗಳಿದ್ದು, ನೋಡಲು ಆಕರ್ಷಣೀಯವಾಗಿ ಕಾಣುತ್ತಿದೆ. ಈ ರೈಲು ನಿರ್ಮಾಣಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಬಾಲಭವನದ ಮುಖಾಂತರ ಅನುದಾನ ಒದಗಿಸಲಾಗಿತ್ತು.
Advertisement
ಸಸಿ ನೆಟ್ಟು ಪೋಷಣೆಮರಗಳಿಂದಾಗುತ್ತಿರುವ ಸಮಸ್ಯೆಯ ಕುರಿತು ಸೋಮವಾರ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ನಾಲ್ಕು ಮರಗಳನ್ನು ಕಡಿಯಲು ತೋಟಗಾರಿಕಾ ಇಲಾಖೆಗೆ ಅನುಮತಿ ನೀಡಲಾಗಿದೆ. ಈ ಮರಗಳು ಅಲಂಕಾರಿಕ ಗಿಡಗಳಾಗಿದ್ದು, ಈ ಮರಗಳಿದ್ದ ಜಾಗದಿಂದ ಸ್ವಲ್ಪ ದೂರದಲ್ಲಿ ಅಷ್ಟೇ ಗಿಡಗಳನ್ನು ನೆಡಲಾಗುವುದು ಎಂದು ತೋಟಗಾರಿಕಾ ಇಲಾಖೆಯ ಪ್ರಮುಖರು ತಿಳಿಸಿದ್ದಾರೆ. ಕಡಿಯಲು ಅನುಮತಿ ಸಿಕ್ಕಿದೆ
ಟ್ರ್ಯಾಕ್ ಸನಿಹದಲ್ಲಿದ್ದ ನಾಲ್ಕು ಮರಗಳು ಪುಟಾಣಿ ರೈಲು ಓಡಾಟಕ್ಕೆ ಅಡ್ಡಿಯಾಗಿತ್ತು. ಮರಗಳನ್ನು ಕಡಿಯಲು ಇದೀಗ ಅನುಮತಿ ಸಿಕ್ಕಿದ್ದು, ಮುಂದೆ ರೈಲ್ವೇ ಇಲಾಖೆಯ ಅನುಮತಿ ಬಳಿಕ ರೈಲು ಓಡಾಟ ನಡೆಸಲಿದೆ.
– ಸುಂದರ ಪೂಜಾರಿ, ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ — ಧನ್ಯಾ ಬಾಳೆಕಜೆ