ಕಿಸಾನ್ ಸಮ್ಮಾನ್, ಸಂಧ್ಯಾ ಸುರಕ್ಷಾ, ಗರ್ಭಿಣಿಯರಿಗೆ ನೀಡಲಾಗುವ ಭತ್ತೆ, ಗ್ಯಾಸ್ ಸಬ್ಸಿಡಿ, ಇದೀಗ ಮನೆಯೊಡತಿಗೆ ನೀಡಲಾಗುವ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗಿದೆಯಾ ಎಂದು ತಿಳಿದುಕೊಳ್ಳಲು ಧಾವಿಸಿ ಬರುವ ಸಾಮಾನ್ಯ ಗ್ರಾಹಕರಿಂದಾಗಿ ಬ್ಯಾಂಕ್ ಶಾಖೆಗಳು ತುಂಬಿ ತುಳುಕುತ್ತಿವೆ. ಜನಧನ್ ಯೋಜನೆಯ ಮೂಲಕ ಬ್ಯಾಂಕ್ ಖಾತೆಯೇ ಇಲ್ಲದವರನ್ನು ಕರೆ ತಂದು ಖಾತೆ ತೆರೆಯುವ ಜನಾಂದೋಲನ ನಡೆದಿತ್ತು. ಬ್ಯಾಂಕ್ ಖಾತೆ ಉಳ್ಳವರಿಗೆ ಮಾತ್ರ ಎನ್ನುವ ಧೋರಣೆಯಿಂದ ಬ್ಯಾಂಕ್ ಖಾತೆ ಇಲ್ಲದೇ ಬದುಕೇ ಅಸಾಧ್ಯ ಎನ್ನುವ ಹಂತಕ್ಕೆ ನಾವು ಬಂದಿದ್ದೇವೆ.
ಆಧುನಿಕ ತಂತ್ರಜ್ಞಾನ ಬ್ಯಾಂಕಿಂಗ್ ಚಿತ್ರಣವನ್ನೇ ಬದಲಿಸಿಬಿಟ್ಟಿದೆ.
ಆಧಾರ್‌ಗೆ ಕಾನೂನಿನ ಮಾನ್ಯತೆ ನೀಡುವ ಕಾನೂನು ಸಂಸತ್ತಿನಲ್ಲಿ ಅಂಗೀಕೃತವಾಗುವಾಗ ಗೌಪ್ಯತೆ ಉಲ್ಲಂಘನೆಯ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಯಿತು. ಕಾನೂನಿನ ಸುದೀರ್ಘ ಹೋರಾಟವೂ ನಡೆಯಿತು. ಯುಪಿಐ ಪೇಮೆಂಟ್ ಭಾರತದಂತಹ ದೇಶದಲ್ಲಿ ಕಾರ್ಯಸಾಧುವಲ್ಲ ಎನ್ನುವ ಕುರಿತು ತರತರದ ಅಪಹಾಸ್ಯದ ಮಾತುಗಳು ಕೇಳಿ ಬಂದವು. ಟೀಕೆ ಟಿಪ್ಪಣಿಗಳನ್ನೆಲ್ಲ ಹಿಂದಕ್ಕೆ ಬಿಟ್ಟ ದೇಶ ನಿರಂತರ ಮುಂದಕ್ಕೆ ಸಾಗುತ್ತಿದೆ. ತಿಂಗಳುಗಳ ಹಿಂದೆ ಜರ್ಮನಿಯ ಸಚಿವರೋರ್ವರು ನಮ್ಮ ಯುಪಿಐ ಪೇಮೆಂಟ್ ಪದ್ಧತಿಯನ್ನು ಖುದ್ದಾಗಿ ಕಂಡು ಅನುಭವ ಪಡೆದು ಪ್ರಶಂಸಿಸಿದರು. ಜಿ 20 ಸಮ್ಮೇಳನಕ್ಕೆ ಬಂದ ವಿದೇಶೀ ಗಣ್ಯರು ಭಾರತದ ಡಿಜಿಟಲ್ ಪೇಮೆಂಟ್ ಕ್ರಾಂತಿಯನ್ನು ಕಂಡು ದಂಗಾದರು.
ಬ್ಯಾಂಕ್ ಖಾತೆ ಮತ್ತು ಅದಕ್ಕೆ ಆಧಾರ್ ಜೋಡಣೆಯಿಂದ ಸರಕಾರದ ವಿವಿಧ ಯೋಜನೆಯ ಫಲಾನುಭವಿಗಳಿಗೆ ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫರ್(ಡಿಬಿಟಿ) ಮೂಲಕ ನೇರವಾಗಿ ಹಣ ವರ್ಗಾಯಿಸುವುದು ಸುಲಭವಾಯಿತು. ಕೋವಿಡ್ ಕಾಲದಲ್ಲಿ ಕೋಟ್ಯಂತರ ಬಡವರ ಖಾತೆಗಳಿಗೆ ಸಹಾಯಧನ ನೀಡುವ ಮೂಲಕ ಸರಕಾರ ಅವರಲ್ಲಿ ಭರವಸೆ ಮೂಡಿಸಿತು. ಡಿಬಿಟಿಯಿಂದಾಗಿ ಸರಕಾರ ಬಡವರಿಗಾಗಿ ಖರ್ಚು ಮಾಡುವ ಸಂಪನ್ಮೂಲ ಮಧ್ಯವರ್ತಿಗಳ ಕೈಗೆ ಹೋಗುವುದು ತಪ್ಪಿತು. ಕಿಸಾನ್ ಸಮ್ಮಾನ್ ಮತ್ತು ಗೃಹಲಕ್ಷ್ಮಿಯಂತಹ ಜನಪ್ರಿಯ ಯೋಜನೆಗಳ ಫಲಾನುಭವಿಗಳ ಆಧಾರ್ ಜೋಡಣೆ ಇರುವ ಖಾತೆಗಳಿಗೆ ನಗದು ಸುಲಭವಾಗಿ ತಲುಪುವಂತಾಯಿತು.
ತಂತ್ರಜ್ಞಾನ ಹೇಗೆ ಜನಸಾಮಾನ್ಯರ ಬದುಕನ್ನು ಹಸನಾಗಿ ಸಬಲ್ಲದು ಎಂಬುದು ವರ್ಣರಂಜಿತವಾಗಿ ನಮ್ಮ ನಿತ್ಯ ಅನುಭವಕ್ಕೆ ಬರುತ್ತಿದೆ. ತಮ್ಮ ಖಾತೆಯನ್ನೇ ಮರೆತ ಅನೇಕ ಗೃಹಲಕ್ಷ್ಮಿ ಲಾಭಾರ್ಥಿ ಗೃಹಿಣಿಯರು ಇದೀಗ ಬ್ಯಾಂಕ್‌ಗಳತ್ತ ಧಾವಿಸುತ್ತಿದ್ದಾರೆ. ಹಳೆಯ ಪಾಸ್‌ಬುಕ್‌ಗಾಗಿ ಮನೆಯಲ್ಲೆಲ್ಲ ಹುಡುಕಾಡಿ ವಿಫಲರಾಗಿ, ಮೊಬೈಲ್ ಮೆಸೇಜ್ ತೋರಿಸುತ್ತಾ ತಮ್ಮ ನಿಷ್ಕ್ರಿಯ ಖಾತೆಯನ್ನು ಅರಸುವ ಪ್ರಯತ್ನದಲ್ಲಿ ಬ್ಯಾಂಕ್‌ಗೆ ಧಾವಿಸುವವರ ಸಂಖ್ಯೆಯೂ ಕಡಿಮೆಯೇನಿಲ್ಲ. ಅವರೆಲ್ಲ ಈಗ ತಮ್ಮ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಿ ಎಂದು ಕೋರಿಕೆ ಸಲ್ಲಿಸುತ್ತಿದ್ದಾರೆ.
ಖಾತೆಗೆ ಜಮಾ ಆದ ಹಣ ತೆಗೆಯಲು ಉತ್ಸುಕರಾಗಿ ನಿಂತವರ ಕಣ್ಣುಗಳಲ್ಲಿ ಇಣುಕುವ ಖುಷಿ ಹೇಳತೀರದು. ಬ್ಯಾಂಕ್ ಮೆಟ್ಟಿಲನ್ನೇ ತುಳಿಯದ ವನಿತೆಯರು ಬ್ಯಾಂಕ್‌ನ ಹವಾನಿಯಂತ್ರಿತ ಕೊಠಡಿಯ ತಣ್ಣನೆಯ ವಾತಾವರಣದಲ್ಲಿ ಕುಳಿತು ಕನಸು ಹೆಣೆಯ ತೊಡಗಿದ್ದಾರೆ. ವಿಶ್ವಾಸದ ನಗು ವಿನೊಂದಿಗೆ ಮಹಿಳೆಯರು ತಮ್ಮೊಳಗೆ ಹರಟುವ ಸುಂದರ ಚಿತ್ರ ಬ್ಯಾಂಕ್ ಶಾಖೆಗಳಲ್ಲಿ ಕಾಣುತ್ತಿದೆ. ಕೌಂಟರ್‌ಗಳಲ್ಲಿ ಅನೇಕ ಯುವ ಮಹಿಳೆಯರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಂಕ್ ಮೊಬೈಲ್ ಆ್ಯಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ದೃಶ್ಯವೂ ಸಾಮಾನ್ಯ ಎಂಬಂತೆ ಕಾಣುತ್ತಿದೆ. ಯುಪಿಐ ಪೇಮೆಂಟ್ ವಿಧಾನವನ್ನು ತಿಳಿಯುವ ಜಿಜ್ಞಾಸೆ ಮತ್ತೆ ಕೆಲವರಲ್ಲಿ. ನಗದುರಹಿತ ವ್ಯವಹಾರವನ್ನು ಅರಿತ ಈ ಮಹಿಳೆಯರು ತಮ್ಮ ಪತಿಯಂದಿರಿಗೂ ಡಿಜಿಟಲ್ ಬ್ಯಾಂಕಿಂಗ್ ಬಗೆಗಿನ ಮಾಹಿತಿ ನೀಡತೊಡಗಿದ್ದಾರೆ. ಬ್ಯಾಂಕ್‌ನಿಂದ ನೇರವಾಗಿ ಮಾರುಕಟ್ಟೆಗೆ ಹೋಗುವ ಅನೇಕ ಮಹಿಳೆಯರು ಹಣ್ಣು, ತರಕಾರಿ ಕೊಂಡು ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ಪೇಮೆಂಟ್ ಮಾಡಿ ಸಂಭ್ರಮಿಸುತ್ತಿರುವ ಪರಿ ಅನನ್ಯ.
2022-23 ವಿತ್ತ ವರ್ಷದಲ್ಲಿ 318 ಯೋಜನೆಗಳಿಗೆ ಸಂಬಂಧಿಸಿದಂತೆ ಸುಮಾರು 2,98,101 ಕೋಟಿ ರೂಪಾಯಿಯನ್ನು ಸರಕಾರ 303 ಕೋಟಿ ಡಿಬಿಟಿ ಟ್ರಾನ್ಸಕ್ಷನ್ ಮೂಲಕ ಬಡವರ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದೆ. ಕೋವಿಡ್ ಕಷ್ಟ ಕಾಲದಲ್ಲಿ ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದಾಗ, ಉದ್ಯೋಗ ನಷ್ಟದಿಂದ ತೀವ್ರ ಸಂಕಷ್ಟದಲ್ಲಿದ್ದವರ ಕೋಟ್ಯಂತರ ಖಾತೆಗಳಿಗೆ ನೇರವಾಗಿ ಹಣ ಹಾಕಲು ನೆರವಾದದ್ದು ಇದೇ ಡಿಬಿಟಿ ವ್ಯವಸ್ಥೆ. ಇದು ನವಭಾರತ. ವಿಶ್ವಗುರುವಾಗುವ ಕನಸು ಹೆಣೆಯುತ್ತಿದೆ. ವಸು ಧೈವ ಕುಟುಂಬಕಂ ಮಂತ್ರ ಜಪಿಸುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಮತ್ತು ವಿಶ್ವ ಬ್ಯಾಂಕ್ ಸಹಾ ಭಾರತದ ಡಿಬಿಟಿ ವ್ಯವಸ್ಥೆಯನ್ನು ಪ್ರಶಂಸಿಸಿದೆ.
ಚಂದ್ರಶೇಖರ ನಾವಡ, ಬೈಂದೂರು