Advertisement

ಅಂಗನವಾಡಿಯ ದಿನಗಳು

04:41 PM Sep 22, 2017 | |

ಅದು ಅಂಗನವಾಡಿಗೆ ಹೋಗುತ್ತಿರುವ ಸಮಯ. ಇನ್ನೂ  ಸಣ್ಣ ವಯಸ್ಸು  ನನ್ನದು ಆವಾಗ. ಒಂದಷ್ಟು ಅಕ್ಷರಗಳ ಅಭ್ಯಾಸ ಪಡೆಯುವುದರೊಂದಿಗೆ, ಅಂಗನವಾಡಿಯ ಟೀಚರ್‌ ಮತ್ತು ಚಿಕ್ಕಮಕ್ಕಳೇ ಇರುವ ನಮ್ಮದೇ ಪ್ರಪಂಚ ಅದು. ಹೊರಗಿನ ಆಗುಹೋಗುಗಳ ಬಗ್ಗೆ ಯೋಚಿಸುವಷ್ಟು ನಮ್ಮ ಮನಸ್ಥಿತಿಯೇನೂ ಬೆಳೆದಿರುವುದಿಲ್ಲ. ಇಂಥ ದಿನಗಳಲ್ಲಿ ನನಗೆ ಆದ ಅನುಭವವೊಂದು ಮರೆಯಲಾಗದ ನೆನಪೊಂದನ್ನು ನೀಡಿದೆ. ಆ ದಿನ ತುಂಬಾನೇ ಭಯ ಪಡೆದ ಒಂದು ಅನುಭವ. ಆದರೆ, ಅದನ್ನು ಈಗ ನೆನಪಿಸಿಕೊಳ್ಳುವಾಗ ನಗು ಬರುತ್ತದೆ.

Advertisement

ನಾನು ಪ್ರತಿದಿನ ರಜೆ ಮಾಡದೆ ಅಂಗನವಾಡಿಗೆ ಹೋಗುತ್ತಿದ್ದೆ. ನನ್ನ ಮನೆಯ ಹತ್ತಿರದ ನನ್ನದೇ ವಯಸ್ಸಿನ ಒಬ್ಬಳು ಗೆಳತಿ ಮತ್ತು ಒಬ್ಬ ಗೆಳೆಯ ಹಾಗೂ ನಾನು ಒಟ್ಟಿಗೆ ಸೇರಿ ಹೋಗುತ್ತಿದ್ದೆವು. ಅಂಗನವಾಡಿಯಲ್ಲಿ ಆಟವಾಡಲು ಆಗ ಅದೆಷ್ಟೋ  ಸ್ನೇಹಿತರು ಇದ್ದು, ಸಾಕಷ್ಟು ಆಟದ ಸಾಮಾನುಗಳು ಇದ್ದವು. ಸಣ್ಣ ಮಕ್ಕಳ ಕಾಳಜಿ ಮತ್ತು ಜವಾಬ್ದಾರಿ ಟೀಚರ್‌ನ  ಮೇಲೆ ಇದ್ದುದರಿಂದ ಅಂಗನವಾಡಿಯ ವರಾಂಡ ಬಿಟ್ಟು ಗೇಟಿನಿಂದ ಹೊರಗೆ ಹೋಗಬಾರದು ಎಂದು ನಮ್ಮ ಟೀಚರ್‌ನ ಆರ್ಡರ್‌ ಕೂಡ ಇತ್ತು. ಜೊತೆಗೆ ಮಧ್ಯಾಹ್ನ ರುಚಿಕರವಾದ ಉಪಾಹಾರವನ್ನು ನೀಡುತ್ತಿದ್ದರು. ಹೀಗೆ ಅಂಗನವಾಡಿಗೆ ಹೋಗುವುದೆಂದರೆ ಬಹಳ ಖುಷಿಯಿತ್ತು. 

ಒಂದು  ಸಲ ನನ್ನ ಹತ್ತಿರದ ಮನೆಯ ನನ್ನ ಸ್ನೇಹಿತರಿಬ್ಬರು ರಜೆ ಮಾಡಿದ್ದರು. ನನಗೆ ಅಂಗನವಾಡಿಗೆ ಹೋಗಲು ಸುಮಾರು ಇಪ್ಪತ್ತು ನಿಮಿಷಗಳ  ಕಾಲ ನಡೆದುಕೊಂಡು ಹೋಗಬೇಕಾಗಿತ್ತು. ಅವತ್ತು ನಾನು ಒಬ್ಬಳೇ ಹೋಗಬೇಕಾಗಿದ್ದರಿಂದ ತನ್ನ ಅಣ್ಣನ ಜೊತೆ ಹೊರಡಲು ಸಿದ್ಧಳಾದೆ. ಅಣ್ಣ ಅಲ್ಲಿಯೇ ಪಕ್ಕದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ಓದುತ್ತಿದ್ದ. ಈ ಹುಡುಗರು ಬೆಳಿಗ್ಗೆ ಶಾಲೆಯಲ್ಲಿ ಆಟವಾಡಲೆಂದು ಬೇಗ ಹೋಗುತ್ತಿದ್ದರು. ಆ ದಿನ ನಾನು ಕೂಡ ಬೇಗ ಅವನ ಜೊತೆ ಹೊರಟೆ. ಅವನು ನನ್ನನ್ನು ಅಂಗನವಾಡಿಯ ಗೇಟಿನ ಹೊರಗಡೆಯೇ ನಿಲ್ಲಿಸಿ  ಅವನ ಶಾಲೆಗೆ ತೆರಳಿದ. ಆ ದಿನಗಳಲ್ಲಿ ನಮ್ಮೂರಿಗೆ ಬರುತ್ತಿದ್ದ  ಸರಕಾರಿ  ಬಸ್ಸು ಆ ಅಂಗನವಾಡಿಯ  ಗೇಟಿನ ಎದುರು ಹೊರಗಡೆ ಇರುವ ವರಾಂಡದಲ್ಲಿ ತಿರುಗಿ ವಾಪಸ್ಸು ಉಜಿರೆ ಕಡೆಗೆ ಹೋಗುತ್ತಿತ್ತು. ಬಸ್ಸು ತಿರುಗುವ ರಭಸಕ್ಕೆ ಗೇಟಿನ ಹೊರಗಡೆ ನಿಂತಿದ್ದ ನಾನು ಇನ್ನೇನು ಬಸ್ಸು ತನ್ನ ಹತ್ತಿರಕ್ಕೆ ಬಂದು ನನ್ನ ಮೇಲೆ ಬರುತ್ತದೇನೋ  ಎಂದು ತಿಳಿದು  ಹೆದರಿ ಅಲ್ಲಿಂದ ಅಳುತ್ತ ಬಸ್ಸಿನ ಮುಂದೆ ಓಡಲು ಶುರುಮಾಡಿದೆ.

ಓಟ ಶುರುವಾಗಿ ಅಳುತ್ತ ಅಲ್ಲಿಯೇ ಕೆಳಗಡೆ ಇದ್ದ ಮನೆಯೊಂದರ ಅಂಗಳಕ್ಕೆ ಇಳಿಯುವ ಮೆಟ್ಟಿಲುಗಳಲ್ಲಿ ನಾನು ಓಡಿ ಹೋಗಿ ರಭಸದಿಂದ ಇಳಿದು ಮನೆಯ ಅಂಗಳದಲ್ಲಿ ನಿಂತುಕೊಂಡಿದ್ದೆ. ಅಲ್ಲಿ ಬಾಡಿಗೆ ರೂಮ್‌ನಲ್ಲಿದ್ದ ಶಾಲಾ ಶಿಕ್ಷಕರೊಬ್ಬರನ್ನು ಹೆದರಿಕೆಯಿಂದ ಓಡಿದ ನಾನು ತಬ್ಬಿಕೊಂಡು ಅತ್ತುಬಿಟ್ಟಿದ್ದೆ . ನಂತರ ಅವರು ನನ್ನನ್ನು ಸಮಾಧಾನಿಸಿ, ನನ್ನ ಭಯವನ್ನು ಹೋಗಲಾಡಿಸಿ ಅಂಗನವಾಡಿಯ ಟೀಚರ್‌ ಬಂದ ನಂತರ ನನ್ನನ್ನು ಅಲ್ಲಿಗೆ ಕಳುಹಿಸಿದರು. ಆ ಬಸ್ಸು ಪ್ರತಿದಿನದಂತೆ ಅಲ್ಲಿ ಬಂದು ತಿರುಗಿ ಹೋಗುತ್ತಿತ್ತು. ನನ್ನ ಬಳಿ ಬರುತ್ತಲೇ ಇರಲಿಲ್ಲ. ನನಗೆ ಏನಾಯಿತೋ ಗೊತ್ತಿಲ್ಲ.  ನಾನೇ  ಸುಮ್ಮನೆ ಹೆದರಿ ಅದರ ಮುಂದೆ ಓಡತೊಡಗಿದ್ದು. ನನ್ನ ಅಮ್ಮನು ಅದನ್ನು ಹೇಳಿ, “ಎಲ್ಲಿಯಾದರೂ ನೀನು ಭಯದಲ್ಲಿ ಓಡುವಾಗ ತಪ್ಪಿ ಬಿದ್ದಿದ್ದರೆ ಏನಾಗುತ್ತಿತ್ತೋ ಏನೋ’ ಎಂದು ಹೇಳುವುದುಂಟು. ಅಂದು ಅಣ್ಣನಿಗೆ ಮನೆಯಲ್ಲಿ ಸರಿಯಾಗಿ ಬೈಗುಳ  ಕೂಡ ಇತ್ತು. ಅದರ ನಂತರ ಅಂಗನವಾಡಿಯ ಗೇಟಿನ ಹೊರಗಡೆ ತನ್ನನ್ನು ಬಿಟ್ಟು ನನ್ನಣ್ಣ ಯಾವತ್ತೂ ಹೋಗಿಲ್ಲ. ಈಗ ಅದನ್ನೆಲ್ಲ ನಾನು ನೆನಪಿಸಿಕೊಂಡಾಗ ನನಗೆ ತಮಾಷೆ ಎನಿಸುತ್ತದೆ. ಹಾಗೆಯೇ ನೆನಪಿಸಿಕೊಂಡರೆ ಆ ದೃಶ್ಯ ಈಗಲೂ ಕಣ್ಣ ಮುಂದೆ ಬರುತ್ತದೆ.

ರಾಜೇಶ್ವರಿ ಬೆಳಾಲು
 ಎಸ್‌.ಡಿ.ಎಂ ಕಾಲೇಜು, ಉಜಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next