ಬಾಗಲಕೋಟೆ: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಹೇರಿದ ವೀಕೆಂಡ್ ಕಪ್ಯೂì ರವಿವಾರವೂ ಜಿಲ್ಲೆಯಾದ್ಯಂತ ಯಶಸ್ವಿಯಾಗಿದ್ದು, ಎಲ್ಲ ಅಂಗಡಿ-ಮುಂಗ್ಗಟ್ಟುಗಳು ಬಂದ್ ಆಗಿದ್ದವು. ಇದರ ಮಧ್ಯೆಯೂ ರವಿವಾರ ಜಿಲ್ಲೆಯಲ್ಲಿ 136 ಜನರಿಗೆ ಸೋಂಕು ಖಚಿತಪಟ್ಟಿದೆ. ಜಿಲ್ಲೆಯ 9 ತಾಲೂಕು ವ್ಯಾಪ್ತಿಯಲ್ಲಿ ಶನಿವಾರ 106 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿತ್ತು.
ರವಿವಾರ ಈ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, 136 ಜನರಿಗೆ ಕೊರೊನಾ ತಗುಲಿದೆ. ಅಲ್ಲದೇ ರವಿವಾರ ಬಾಗಲಕೋಟೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಅಂಗಡಿಗಳು ಬಂದ್ ಆಗಿದ್ದರೆ, ಆಸ್ಪತ್ರೆಗಳು, ಔಷಧ ಮಳಿಗೆ, ತುರ್ತು ಅಗತ್ಯದ ವಾಹನಗಳ ಸಂಚಾರ, ಕೆಲವೇ ಕೆಲವು ಮಾರ್ಗಗಳಲ್ಲಿ ಬಸ್ ಸಂಚಾರ ಇದ್ದವು. ರವಿವಾರ ಜಿಲ್ಲೆಯಲ್ಲಿ 3188 ಜನರ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದ್ದು, ಅದರಲ್ಲಿ 136 ಜನರಿಗೆ ಸೋಂಕು ಇರುವುದು ಖಚಿತವಾಗಿದೆ. ಬಾಗಲಕೋಟೆ ತಾಲೂಕಿನಲ್ಲಿ 938 ಜನರ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಿದ್ದು, 65 ಜನರಿಗೆ ತಗುಲಿದೆ.
ಜಿಲ್ಲೆಯ ಅಷ್ಟೂ ತಾಲೂಕುಗಳ ಪೈಕಿ ಅತಿಹೆಚ್ಚು ಜನರಿಗೆ ಸೋಂಕು ತಗುಲಿದ ತಾಲೂಕುಗಳಲ್ಲಿ ಬಾಗಲಕೋಟೆ ಮೊದಲ ಸ್ಥಾನದಲ್ಲಿದೆ. ಇನ್ನು ಬಾದಾಮಿ ತಾಲೂಕಿನಲ್ಲಿ 408 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, 16 ಜನರಿಗೆ, ಬೀಳಗಿ ತಾಲೂಕಿನಲ್ಲಿ 261 ಜನರ ಪರೀಕ್ಷೆ ಮಾಡಿದ್ದು, 6 ಜನರಿಗೆ, ಜಂಖಂಡಿ ತಾಲೂಕಿನಲ್ಲಿ 469 ಜನರ ಪರೀಕ್ಷೆ ಮಾಡಿದ್ದು, 10 ಜನರಿಗೆ, ಮುಧೋಳ ತಾಲೂಕಿನಲ್ಲಿ 297 ಜನರ ಪರೀಕ್ಷೆ ಮಾಡಿದ್ದು, ಅದರಲ್ಲಿ 10 ಜನರಿಗೆ ಹಾಗೂ ಹುನಗುಂದ ತಾಲೂಕಿನಲ್ಲಿ 815 ಜನರ ಪರೀಕ್ಷೆ ಮಾಡಿದ್ದು, ಅದರಲ್ಲಿ 29 ಜನರಿಗೆ ಪಾಸಿಟಿವ್ ಬಂದಿದೆ.