ಮುಂಬಯಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಬಲಗೈ ಬಂಟ ಛೋಟಾ ಶಕೀಲ್ ಪರಸ್ಪರ ದೂರಾಗಿದ್ದಾರೆಯೇ? ಕೇಂದ್ರ ಗುಪ್ತಚರ ಮೂಲಗಳ ಪ್ರಕಾರ ಹೌದು. ಅದನ್ನು ಉಲ್ಲೇಖೀಸಿ “ದ ಟೈಮ್ಸ್ ಆಫ್ ಇಂಡಿಯಾ’ ಈ ಬಗ್ಗೆ ವರದಿ ಮಾಡಿದ್ದು, 1980ರಲ್ಲಿ ಮುಂಬಯಿ ತೊರೆದು ಕರಾಚಿಗೆ ಸೇರಿಕೊಂಡಿದ್ದ ಇಬ್ಬರೂ, ಕ್ಲಿಫ್ಟನ್ ಏರಿಯಾದಲ್ಲಿ ವಾಸಿಸುತ್ತಿದ್ದರು. ಆದರೆ ಈಗ ಇಬ್ಬರೂ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದಿದೆ.
ದಾವೂದ್‌ನ ಸೋದರ ಅನೀಸ್ ಇಬ್ರಾಹಿಂ ಭೂಗತ ಪಾತಕಿಯ ಅಕ್ರಮ ವಹಿವಾಟುಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿರುವುದೇ ಇಬ್ಬರ ಮಧ್ಯದ ಬಿರುಕಿಗೆ ಕಾರಣವಾಗಿದೆ. ಕಳೆದ ಮೂರು ದಶಕಗಳಿಂದಲೂ ಛೋಟಾ ಶಕೀಲ್ ಎಲ್ಲ ಚಟುವಟಿಕೆಗಳನ್ನೂ ನಿರ್ವಹಿಸುತ್ತಿದ್ದ. ವಹಿವಾಟುಗಳಲ್ಲಿ ಸೋದರರು ಮಧ್ಯ ಪ್ರವೇಶಿಸಬಾರದು ಎಂದು ದಾವೂದ್ ತಾಕೀತು ಮಾಡಿದ್ದರೂ ಅನೀಸ್ ಸೋದರನ ಮಾತು ಮೀರುತ್ತಿದ್ದ. ಇದು ಶಕೀಲ್‌ಗೆ ಸಿಟ್ಟು ತರಿಸಿದ್ದು, ಈ ಸಂಬಂಧ ದಾವೂದ್ ಜತೆ ಮಾತುಕತೆ ವೇಳೆ ವಾಗ್ವಾದ ನಡೆದಿದೆ ಎಂದು ಹೇಳಲಾಗಿದೆ. ಅಲ್ಲದೆ ತನ್ನದೇ ಪ್ರತ್ಯೇಕ ಜಾಲವನ್ನು ಬೆಳೆಸಿ ಕೊಳ್ಳುವುದಕ್ಕಾಗಿ ಹಲವು ದೇಶಗಳಲ್ಲಿರುವ ತನ್ನ ಸಹಾಯಕರ ಜತೆ ಮಾತುಕತೆ ನಡೆಸಿದ್ದಾನೆ ಎನ್ನಲಾಗಿದೆ.
ಈ ವೇಳೆ ಇಬ್ಬರ ಮಧ್ಯೆ ಸಂಬಂಧ ಸುಧಾ ರಣೆಗೆ ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಪ್ರಯತ್ನ ನಡೆಸಿದೆ ಎನ್ನಲಾಗಿದೆ.
ಸಹಚರರಿಗೆ ಗೊಂದಲ: ಇಷ್ಟು ದಿನ ದಾವೂದ್ ಪರವಾಗಿ ಛೋಟಾ ಶಕೀಲ್‌ನಿಂದಲೇ ಆದೇಶ ಪಡೆಯುತ್ತಿದ್ದ ಗ್ಯಾಂಗ್‌ನ ಸಹಚರರಿಗೆ ಈಗ ಯಾರ ಮಾತನ್ನು ಕೇಳ ಬೇಕು ಎಂಬ ಗೊಂದಲ ಉಂಟಾಗಿದೆಯಂತೆ.
ಕಸ್ಕರ್ ಬಂಧನದ ಅನಂತರ ವಾಗ್ವಾದ: ಥಾಣೆ ಪೊಲೀಸರು ಕಳೆದ ತಿಂಗಳು ಇಕ್ಬಾಲ್ ಕಸ್ಕರ್‌ನನ್ನು ಬಂಧಿಸಿದಾಗಲೂ ಶಕೀಲ್ ಮತ್ತು ದಾವೂದ್ ಮಧ್ಯೆ ವಾಗ್ವಾದ ನಡೆದಿದೆ ಎನ್ನಲಾಗಿದೆ. ಕಸ್ಕರ್ ಜತೆಗೆ ಅನೀಸ್‌ಗೆ ಸಂಪರ್ಕವಿತ್ತು ಎಂಬ ಕಾರಣಕ್ಕೆ ಶಕೀಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇನ್ನೊಂದೆಡೆ ದಾವೂದ್ ಸೋದರರು ದೂರವಾಗಬಹುದು. ಆದರೆ ಶಕೀಲ್ ದೂರವಾಗಲು ಸಾಧ್ಯವಿಲ್ಲ ಎಂಬ ಮಾತೂ ಕೇಳಿಬಂದಿದೆ.