Advertisement

ಸೆನ್ಸೆಕ್ಸ್‌ ಜಿಗಿತಕ್ಕೆ ದಾವೋಸ್‌ ಪುಷ್ಟಿ

06:35 AM Jan 24, 2018 | Harsha Rao |

ಮುಂಬೈ: ಬಾಂಬೆ ಷೇರು ಪೇಟೆ ಸೂಚ್ಯಂಕ 36 ಸಾವಿರ ಮತ್ತು ನಿಫ್ಟಿ ಇದೇ ಮೊದಲ ಬಾರಿಗೆ 11 ಸಾವಿರದ ಗಡಿ ದಾಟಿ ಇತಿಹಾಸ ಬರೆದಿದೆ.

Advertisement

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ (ಡಬ್ಲೂéಇಎಫ್)ದಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಭಾರತದ ಒಟ್ಟು ತಲಾ ಆದಾಯ (ಜಿಡಿಪಿ) ಶೇ.7.9ರ ದರದಲ್ಲಿ ಅಭಿವೃದ್ಧಿಯಾಗಲಿದೆ ಎಂದು ಮುನ್ಸೂಚನೆ ನೀಡಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ. ಇದರ ಜತೆಗೆ ವಿಶ್ವದ ಇತರ ಷೇರು ಮಾರುಕಟ್ಟೆಗಳಲ್ಲಿನ ವಹಿವಾಟುಗಳೂ ಪೂರಕವಾಗಿರುವುದು ಕೂಡ ಸೆನ್ಸೆಕ್ಸ್‌ ಏರಿಕೆಗೆ ಒತ್ತು ನೀಡಿದವು. ಮಾಹಿತಿ ತಂತ್ರಜ್ಞಾನ ಮತ್ತು ಬ್ಯಾಂಕಿಂಗ್‌ ಕ್ಷೇತ್ರದ ಷೇರುಗಳು ಹೆಚ್ಚು ಬಿಕರಿಯಾಗಿವೆ. 

ಸತತ ಐದನೇ ಬಾರಿಗೆ ಬಾಂಬೆ ಸ್ಟಾಕ್‌ ಎಕ್ಸ್‌ ಚೇಂಜ್‌ನಲ್ಲಿ ಮಂಗಳವಾರ ವಹಿವಾಟು ಮಧ್ಯಂತರದಲ್ಲಿ 36,170.83 ಕ್ಕೆ ತಲುಪಿತು. ದಿನದ ಅಂತ್ಯಕ್ಕೆ 36,139.98ರಲ್ಲಿ ಮುಕ್ತಾಯವಾಯಿತು. ಅಂದರೆ 341.97 ಅಂಕಗಳಷ್ಟು ಜಿಗಿತ ಕಂಡಿತು. ಸೋಮವಾರ ವಹಿವಾಟು  35,798.01ರಲ್ಲಿ ಮುಕ್ತಾಯ ವಾಗಿತ್ತು. ಅಂದರೆ 4 ಹಂತಗಳಲ್ಲಿ 1,026.96 ಅಂಕಗಳಷ್ಟು ಏರಿಕೆಯಾದಂತಾಗಿದೆ. ಜ.17ರಿಂದ 23ರ ಅವಧಿಯಲ್ಲಿ 35 ಸಾವಿರದಿಂದ 36 ಸಾವಿರಕ್ಕೆ ಸೂಚ್ಯಂಕ ಏರಿಕೆ ಕಂಡಿದೆ.

ಇದೇ ವೇಳೆ ನಿಫ್ಟಿ ಸೂಚ್ಯಂಕ ಕೂಡ ಮಧ್ಯಂತರ ವಹಿವಾಟಿನಲ್ಲಿ 11,092.90ಕ್ಕೆ ತಲುಪಿದ್ದು, ದಿನಾಂತ್ಯಕ್ಕೆ 117.50 ಅಂಕ ಏರಿಕೆ ದಾಖಲಿಸಿ, 11,083.70ರಲ್ಲಿ ಮುಕ್ತಾಯ ವಾಯಿತು. ಸೋಮವಾರ ಅದು 10,966. 20ರಲ್ಲಿ ಮುಕ್ತಾಯವಾಗಿತ್ತು. ಜ.17ರಿಂದ 23ರ ಅವಧಿಯಲ್ಲಿ ಸೂಚ್ಯಂಕ 35 ಸಾವಿರದಿಂದ 36 ಸಾವಿರಕ್ಕೆ ಏರಿಕೆಯಾಗಿದೆ. 2017 ಜು.26ರಿಂದ ಜ.23ರ ವರೆಗೆ ನಿಫ್ಟಿ ಸೂಚ್ಯಂಕ 10 ಸಾವಿರದಿಂದ 11 ಸಾವಿರಕ್ಕೆ ಜಿಗಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next