ಹೊಸದಿಲ್ಲಿ: ಭಾರತದ ಅಗ್ರ ರ್‍ಯಾಂಕಿನ ಸಿಂಗಲ್ಸ್ ಆಟಗಾರರಾದ ಸುಮಿತ್ ನಗಲ್ ಮತ್ತು ಶಶಿ ಕುಮಾರ್ ಮುಕುಂದ್ ಅವರು ಮುಂಬರುವ ಡೇವಿಸ್ ಕಪ್ ಹೋರಾಟಕ್ಕಾಗಿ ಪಾಕಿಸ್ಥಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ರಾಷ್ಟ್ರೀಯ ಟೆನಿಸ್ ಫೆಡರೇಶನ್ (ಎಐಟಿಎ)ಗೆ ತಿಳಿಸಿದ್ದಾರೆ. ಆಟಗಾರರ ಈ ನಿರ್ಧಾರದಿಂದ ಗೊಂದಲಕ್ಕೆ ಒಳಗಾಗಿರುವ ಎಐಟಿಎ ಮುಂದಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲು ನಿರ್ಧರಿಸಿದೆ.
ಡೇವಿಸ್ ಕಪ್ ವಿಶ್ವ ಬಣ ಒಂದರ ಪ್ಲೇ ಆಫ್ ಹೋರಾಟವು ಪಾಕಸ್ಥಾನದಲ್ಲಿ ಮುಂದಿನ ಫೆಬ್ರವರಿಯಲ್ಲಿ ನಡೆಯಲಿದೆ. ಈ ಕೂಟಕ್ಕೆ ತಮ್ಮ ಅಲಭ್ಯದ ಬಗ್ಗೆ ಅವರಿಬ್ಬರು ಫೆಡರೇಶನ್‌ಗೆ ಮಾಹಿತಿ ನೀಡಿದ್ದಾರೆ. ಆದರೆ ನಿರ್ದಿಷ್ಟ ಕಾರಣವನ್ನು ಅವರಿಬ್ಬರು ತಿಳಿಸಿಲ್ಲ.
ಡೇವಿಸ್ ಕಪ್ ಹುಲ್ಲುಹಾಸಿನ ಅಂಗಣದಲ್ಲಿ ನಡೆಯಲಿದೆ. ಇಂತಹ ಅಂಗಣದಲ್ಲಿ ಆಡುವುದು ಸುಮಿತ್ ಅವರಿಗೆ ಬಯಸುವುದಿಲ್ಲ, ಅವರ ಶೈಲಿಯ ಆಟಕ್ಕೆ ಈ ಅಂಗಣ ಒಗ್ಗಿಕೊಳ್ಳುವುದಿಲ್ಲ. ಮುಕುಂದ್ ಅವರು ವೈಯಕ್ತಿಕ ಕಾರಣಗಳಿಗಾಗಿ ಡೇವಿಸ್ ಕಪ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಹುಲ್ಲುಹಾಸಿನಲ್ಲಿ ಪಂದ್ಯಗಳು ನಡೆಯುವ ಕಾರಣ ಪಾಕಿಸ್ಥಾನ ವಿರುದ್ಧದ ಹೋರಾಟಕ್ಕೆ ನನ್ನನ್ನು ಪರಿಗಣಿಸುವುದು ಬೇಡವೆಂದು ದೀರ್ಘ ಸಮಯದ ಮೊದಲೇ ನಗಲ್ ಅವರು ಎಐಟಿಎಗೆ ತಿಳಿಸಿದ್ದರು ಎಂದು ಫೆಡರೇಶನ್‌ನ ಮೂಲಗಳು ತಿಳಿಸಿವೆ.
ಸದ್ಯದ ಸ್ಥಿತಿಯಲ್ಲಿ ಭಾರತದ ಸವಾಲಿನ ನೇತೃತ್ವವನ್ನು ರಾಮ್‌ಕುಮಾರ್ ರಾಮನಾಥನ್ ವಹಿಸಿಕೊಳ್ಳುವ ಸಾಧ್ಯತೆಯಿದೆ. ದಿಗ್ವಿಜಯ್ ಪ್ರತಾಪ್ ಸಿಂಗ್ ಕೂಡ ಆಡುವ ಸಾಧ್ಯತೆಯಿದೆ. ಅವರು ಕಳೆದ ಸಪ್ಟೆಂಬರ್‌ನಲ್ಲಿ ನಡೆದ ಮೊರೊಕ್ಕೊ ವಿರುದ್ಧದ ಹೋರಾಟದಲ್ಲಿ ಭಾರತ ಪರ ಮೊದಲ ಬಾರಿ ಆಡಿದ್ದರು.