Advertisement

ಡೇವಿಸ್‌ ಕಪ್‌ ತಂಡದೊಂದಿಗೆ ತೆರಳದಿರಲು ದಿವಿಜ್‌ ನಿರ್ಧಾರ

07:10 AM Apr 02, 2018 | Team Udayavani |

ಹೊಸದಿಲ್ಲಿ: ಚೀನ ವಿರುದ್ಧ ನಡೆಯಲಿರುವ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಮೀಸಲು ತಂಡದಲ್ಲಿ ಸ್ಥಾನ ಪಡೆದಿದ್ದ ಎಡಗೈ ಆಟಗಾರ ದಿವಿಜ್‌ ಶರಣ್‌ ಪಂದ್ಯಾವಳಿಗಾಗಿ ತಂಡದೊಂದಿಗೆ ತೆರಳದಿರಲು ನಿರ್ಧರಿಸಿದ್ದಾರೆ. ಅವರ ಈ ನಿರ್ಧಾರದಿಂದ ಮುಂಬರುವ ದಿನಗಳಲ್ಲಿ ಆಟಗಾರರಿಗೆ ನೀತಿಸಂಹಿತೆ ಪ್ರಕಟವಾಗುವ ಸಾಧ್ಯತೆಗೆ ದಾರಿ ಮಾಡಿದೆ.

Advertisement

ಚೀನದ ತಿಯಾಂಜಿನ್‌ನಲ್ಲಿ  ಎ. 6ರಿಂದ ನಡೆಯಲಿರುವ ಡೇವಿಸ್‌ ಕಪ್‌ ಪಂದ್ಯಾವಳಿಗಾಗಿ ಮೀಸಲು ಆಟಗಾರನಾಗಿ ತೆರಳಿ, ಅಗತ್ಯ ಬಿದ್ದರೆ ಕಣಕ್ಕಿಳಿಯಲು 32ರ ಹರೆಯದ ಶರಣ್‌ ಒಪ್ಪಿದ್ದರು. ಆದರೆ ಅವರ ನಿರ್ಧಾರವೀಗ ಬದಲಾಗಿದೆ; ಇದು ಅಖೀಲ ಭಾರತ ಟೆನಿಸ್‌ ಅಸೋಸಿಯೇಶನ್‌ನ ಕೆಂಗಣ್ಣಿಗೆ ಗುರಿಯಾಗಿದೆ.

ಭಾರತದ ಎರಡನೇ ಅಗ್ರ ಶ್ರೇಯಾಂಕಿತ ಡಬಲ್ಸ್‌ ಆಟಗಾರನಾಗಿ ಗುರುತಿಸಿಕೊಂಡಿರುವ ದಿವಿಜ್‌ ಶರಣ್‌ ಪುರುಷರ ಡಬಲ್ಸ್‌ನಲ್ಲಿ 44ನೇ ರ್‍ಯಾಂಕ್‌ನಲ್ಲಿದ್ದು, ಆಯ್ಕೆ ಸಮಿತಿಯು ಭಾರತದ ಅಗ್ರಮಾನ್ಯ ಡಬಲ್ಸ್‌ ಆಟಗಾರ ರೋಹನ್‌ ಬೋಪಣ್ಣ ಮತ್ತು ಲಿಯಾಂಡರ್‌ ಪೇಸ್‌ ಅವರನ್ನು ಡೇವಿಸ್‌ ಕಪ್‌ ಡಬಲ್ಸ್‌ ವಿಭಾಗಕ್ಕೆ ಆರಿಸಿತ್ತು.

ಪೇಸ್‌ ಆಯ್ಕೆಗೆ ಆಕ್ರೋಶ?
ಲಿಯಾಂಡರ್‌ ಪೇಸ್‌ ದಿವಿಜ್‌ ಶರಣ್‌ಗಿಂತ ಒಂದೇ ರ್‍ಯಾಂಕ್‌ ಹಿಂದಿದ್ದಾರೆ (45). ಆದರೆ ಅವರಿಗಿರುವ ಅಪಾರ ಅನುಭವದ ನೆಲೆಯಲ್ಲಿ ಮತ್ತು ಭಾರತ ಪ್ರಬಲ ಸ್ಪರ್ಧೆಯೊಡ್ಡುವ ಉದ್ದೇಶದಿಂದ ಆಯ್ಕೆ ಸಮಿತಿಯು ಪೇಸ್‌ ಅವರನ್ನು ಆರಿಸಿತ್ತು. ಇದು ಶರಣ್‌ ಸಿಡುಕಿಗೆ ಕಾರಣವಾಗಿದೆ ಎನ್ನಲಾಗಿದೆ.ಶರಣ್‌ ಅವರ ಈ ನಿರ್ಧಾರ ಆಡುವ ತಂಡದಲ್ಲಿ ಸ್ಥಾನ ದೊರಕದ ಹೊರತು ಕೂಟದಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವುದನ್ನು ಸೂಚಿಸಿದೆ. ಇದರಿಂದ ಡಬಲ್ಸ್‌ನಲ್ಲಿ ಪಾಲ್ಗೊಳ್ಳುವ ಇಬ್ಬರು ಆಟಗಾರರಲ್ಲಿ ಯಾರಾದರೂ ಒಬ್ಬರು ಗಾಯಗೊಂಡರೂ ತಂಡಕ್ಕೆ ಸಮಸ್ಯೆಯಾಗಲಿದೆ.

ಸಿಂಗಲ್ಸ್‌ನಲ್ಲಿ ಅಗ್ರಸ್ಥಾನಿಗರಾಗಿರುವ ಯೂಕಿ ಭಾಂಬ್ರಿ ಹೊಟ್ಟೆನೋವಿನ ಕಾರಣ ಈಗಾಗಲೇ ಪಂದ್ಯಾವಳಿಯಿಂದ ಹೊರಗುಳಿದಿದ್ದು, ಶರಣ್‌ ನಿರ್ಧಾರ ದೇಶಿ ತಂಡವನ್ನು ಇನ್ನಷ್ಟು ಸಂಕಷ್ಟಕ್ಕೀಡುಮಾಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next