Advertisement

Davis Cup: ಪಾಕಿಸ್ಥಾನ ವಿರುದ್ಧ 4-0 ಗೆಲುವು : ವಿಶ್ವ ಬಣ ಒಂದಕ್ಕೇರಿದ ಭಾರತ

10:57 PM Feb 04, 2024 | Team Udayavani |

ಇಸ್ಲಾಮಾಬಾದ್‌: ಭಾರತೀಯ ಡೇವಿಸ್‌ ಕಪ್‌ ತಂಡವು ಎದುರಾಳಿ ಪಾಕಿಸ್ಥಾನವನ್ನು 4-0 ಅಂತರದಿಂದ ಸೋಲಿಸಿ ವಿಶ್ವ ಬಣ ಒಂದಕ್ಕೇರಿದ ಸಾಧನೆ ಮಾಡಿದೆ. 60 ವರ್ಷಗಳ ಬಳಿಕ ಪಾಕಿಸ್ಥಾನಕ್ಕೆ ಪ್ರವಾಸಗೈಯುವ ಮೂಲಕ ಇತಿಹಾಸ ನಿರ್ಮಿಸಿದ್ದ ಭಾರತೀಯ ತಂಡವು ಪಾಕಿಸ್ಥಾನವನ್ನು ಅಧಿಕಾರಯುತವಾಗಿ ಸೋಲಿಸಿ ಪರಾಕ್ರಮ ಮೆರೆಯಿತು.

Advertisement

ರವಿವಾರ ನಡೆದ ಡಬಲ್ಸ್‌ನಲ್ಲಿ ಯೂಕಿ ಭಾಂಬ್ರಿ ಮತ್ತು ಸಾಕೇತ್‌ ಮೈನೇನಿ ಅಮೋಘ ಗೆಲುವು ದಾಖಲಿಸಿದರೆ ಆಬಳಿಕ ನಡೆದ ಸಿಂಗಲ್ಸ್‌ನಲ್ಲಿ ನಿಕಿ ಪೂಣಚ್ಚ ಡೇವಿಸ್‌ಗೆ ಪಾದಾರ್ಪಣೆಗೈದ ಪಂದ್ಯದಲ್ಲಿಯೇ ಜಯಭೇರಿ ಬಾರಿಸಿದರು. ಎಲ್ಲ ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದ್ದರಿಂದ ಐದನೇ ಪಂದ್ಯವನ್ನು ಕೈಬಿಡಲಾಯಿತು. ಮೊದಲ ದಿನ ನಡೆದ ಎರಡು ಸಿಂಗಲ್ಸ್‌ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ 2-0 ಮುನ್ನಡೆ ಸಾಧಿಸಿತ್ತು.
ಮಹತ್ವದ ಡಬಲ್ಸ್‌ ಪಂದ್ಯದಲ್ಲಿ ಭಾಂಬ್ರಿ ಮತ್ತು ಮೈನೇನಿ ಅವರು ಪಾಕಿಸ್ಥಾನದ ಮುಜಾಮ್ಮಿಲ್‌ ಮುರ್ತಜ ಮತ್ತು ಅಖೀಲ್‌ ಖಾನ್‌ ಅವರನ್ನು 6-2, 7-6 (5) ಸೆಟ್‌ಗಳಿಂದ ಸೋಲಿಸಿ ಮುನ್ನಡೆಯನ್ನು 3-0ಕ್ಕೇರಿಸಿದರು. ಇದರಿಂದ ಇನ್ನುಳಿದ ಎರಡು ಪಂದ್ಯ ಮಹತ್ವ ಪಡೆಯಲಿಲ್ಲ. ಹೀಗಾಗಿ 28ರ ಹರೆಯದ ಪೂಣಚ್ಚ ಅವರನ್ನು ಆಡಿಸಲು ಭಾರತ ನಿರ್ಧರಿಸಿತು. ಚೊಚ್ಚಲ ಬಾರಿ ಆಡಿದ ಅವರು ಮುಹಮ್ಮದ್‌ ಶೋಯಿಬ್‌ ಅವರನ್ನು 6-3, 6-4 ಸೆಟ್‌ಗಳಿಂದ ಸೋಲಿಸಿ ಮುನ್ನಡೆಯನ್ನು 4-0ಕ್ಕೇರಿಸಿದರು.

ಇದು ಭಾರತದ ಪಾಕಿಸ್ಥಾನ ವಿರುದ್ಧದ ಎಂಟನೇ ಗೆಲುವು ಆಗಿದೆ. ಈ ಗೆಲುವಿನಿಂದ ಭಾರತ ಮುಂದಿನ ಸೆಪ್ಟಂಬರ್‌ನಲ್ಲಿ ವಿಶ್ವ ಬಣ ಒಂದರಲ್ಲಿ ಆಡಲು ಅರ್ಹತೆ ಗಳಿಸಿದರೆ ಪಾಕಿಸ್ಥಾನವು ಬಣ ಎರಡರಲ್ಲಿ ಆಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next