ಮೆಲ್ಬೋರ್ನ್: ಒಂದೆಡೆ ಇತ್ತೀಚಿನವರೆಗೆ ಕ್ರಿಕೆಟ್ ಶಿಶು ಎಂದು ಪರಿಗಣಿಸಲಾಗುತ್ತಿದ್ದ ಅಫ್ಘಾನಿಸ್ತಾನ ತಂಡವು ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ ಗೆ ಪ್ರವೇಶ ಪಡೆಯುತ್ತಿದ್ದಂತೆ, ಮತ್ತೊಂದೆಡೆ ಹಾಲಿ ಏಕದಿನ ಚಾಂಪಿಯನ್ ಆಸ್ಟ್ರೇಲಿಯಾ ಮನೆಗೆ ಹೊರಟಿದೆ. ಇದೇ ವೇಳೆ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು ತನ್ನ 15 ವರ್ಷದ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ಭಾರತದ ವಿರುದ್ದ ಸೈಂಟ್ ಲೂಸಿಯಾದಲ್ಲಿ ನಡೆದ ಪಂದ್ಯವೇ ಡೇವಿಡ್ ವಾರ್ನರ್ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ.
2009ರ ಜನವರಿ 11ರಿಂದ ಆರಂಭವಾದ ಡೇವಿಡ್ ವಾರ್ನರ್ ಎಂಬ ಕಿಂಗ್ಸ್ ಟೌನ್ ನ ಅತ್ಯದ್ಭುತ ಎಡಗೈ ಬ್ಯಾಟರ್ ನ ಕ್ರಿಕೆಟ್ ಜೀವನ ಸೈಂಟ್ ಲೂಸಿಯಾದಲ್ಲಿ ಅಂತ್ಯವಾಗಿದೆ. ಈ 15 ವರ್ಷಗಳಲ್ಲಿ ಡೇವಿಡ್ ವಾರ್ನರ್ 112 ಟೆಸ್ಟ್, 161 ಏಕದಿನ ಪಂದ್ಯಗಳು ಮತ್ತು 110 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಕಳೆದ ನವೆಂಬರ್ ನಲ್ಲಿ ಭಾರತ ವಿರುದ್ಧದ ವಿಶ್ವಕಪ್ ಫೈನಲ್ ವಿಜಯದೊಂದಿಗೆ ಏಕದಿನ ಕ್ರಿಕೆಟ್ ಅಂತ್ಯವಾಗಿದ್ದರೆ, ಜನವರಿಯಲ್ಲಿ ಪಾಕಿಸ್ತಾನದ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವಾಡಿದ್ದರು. ಏಕದಿನ ಮತ್ತು ಟೆಸ್ಟ್ ಗೆ ವಿದಾಯ ಹೇಳಿದ್ದ ಸ್ಟೈಲಿಶ್ ಆಟಗಾರ ಟಿ20 ವಿಶ್ವಕಪ್ ನ ಫೈನಲ್ ಪಂದ್ಯದೊಂದಿಗೆ ಕ್ರಿಕೆಟ್ ವೃತ್ತಿಜೀವನ ಅಂತ್ಯಗೊಳಿಸಲು ಬಯಸಿದ್ದರು. ಆದರೆ ಅನಿರೀಕ್ಷಿತವೆಂಬಂತೆ ಆಸೀಸ್ ತಂಡವು ಸೂಪರ್ 8 ಹಂತದಲ್ಲಿಯೇ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಹೀಗಾಗಿ ವಾರ್ನರ್ ಅವರ ಪಯಣವು ಮುಗಿದಿದೆ.
ಆದರೆ ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ತಂಡಕ್ಕೆ ಸಹಾಯ ಬೇಕಾದಲ್ಲಿ ತಾನು ಆಯ್ಕೆಗೆ ಲಭ್ಯವಿರುವುದಾಗಿ ವಾರ್ನರ್ ಹೇಳಿದ್ದಾರೆ.
ಅವರು ಟಿ20 ಕ್ರಿಕೆಟ್ ನಲ್ಲಿ 110 ಪಂದ್ಯಗಳಿಂದ 33.43 ಸರಾಸರಿ ಮತ್ತು 142.47 ಸ್ಟ್ರೈಕ್ ರೇಟ್‌ನಲ್ಲಿ 3,277 ರನ್ ಗಳಿಸಿದ್ದಾರೆ. ಟಿ20 ಸ್ವರೂಪದಲ್ಲಿ ಆಸ್ಟ್ರೇಲಿಯಾದ ಅತಿ ಹೆಚ್ಚು ಸ್ಕೋರರ್ ಮತ್ತು ಏಳನೇ ಅತ್ಯಂತ ಹೈಯೆಸ್ಟ್ ರನ್ ಸ್ಕೋರರ್ ಆಗಿ ನಿವೃತ್ತರಾದರು. ಅವರು ಈ ಮಾದರಿಯಲ್ಲಿ ಒಂದು ಶತಕ ಮತ್ತು 28 ಅರ್ಧಶತಕಗಳನ್ನು ಗಳಿಸಿದ್ದಾರೆ.
112 ಟೆಸ್ಟ್‌ಗಳಿಂದ ಅವರು 2011 ಮತ್ತು 2024 ರ ನಡುವೆ 26 ಶತಕಗಳು ಮತ್ತು 37 ಅರ್ಧಶತಕಗಳೊಂದಿಗೆ 44.59 ಸರಾಸರಿಯಲ್ಲಿ 8,786 ರನ್ ಗಳಿಸಿದ್ದಾರೆ.
ಅವರು 161 ಏಕದಿನ ಪಂದ್ಯಗಳಿಂದ 45.30 ಸರಾಸರಿಯಲ್ಲಿ 22 ಶತಕ ಮತ್ತು 33 ಅರ್ಧ ಶತಕಗಳ ಸಹಾಯದಿಂದ 6,932 ರನ್ ಗಳಿಸಿದ್ದಾರೆ.